ಬೆಂಗಳೂರು: ಶಾಸಕ ಮಾಡಾಳು ವಿರೂಪಾಕ್ಷಪ್ಪ ಪುತ್ರನನ್ನು ಲೋಕಾಯುಕ್ತರು ಬಂಧಿಸಿರುವ ಹಾಗೂ ಗುತ್ತಿಗೆದಾರರಿಂದ ಲಂಚದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷ್ಪಕ್ಷಪಾತ ತನಿಖೆಯಾಗಲಿದ್ದು, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಎನ್ನುವುದು ನಮ್ಮ ನಿಲುವು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಲೋಕಾಯುಕ್ತ ಪುನರ್ ಸ್ಥಾಪನೆ ಮಾಡಿದ್ದೇ ಭ್ರಷ್ಟಾಚಾರವನ್ನು ಮುಕ್ತವಾಗಿ ನಿಗ್ರಹಿಸಬೇಕು ಎಂದು. ಲೋಕಾಯುಕ್ತ ಇಲ್ಲದೆ ಇಂತಹ ಹಲವಾರು ಪ್ರಕರಣಗಳು ಕಾಂಗ್ರೆಸ್ ಆಡಳಿತದಲ್ಲಿ ನಡೆದು ಮುಚ್ಚಿಹೋಗಿವೆ ಎಂದು ತಿಳಿಸಿದರು.
ಹಣ ಯಾರಿಗೆ ಸೇರಿದ್ದು, ಯಾರಿಗೋಸ್ಕರ ಆಗಿದ್ದು ಎಲ್ಲವೂ ಹೊರಬರಬೇಕು. ಯಾವುದನ್ನೂ ಮುಚ್ಚಿಸುವ ಪ್ರಶ್ನೆಯೇ ಇಲ್ಲ. ಪ್ರಕರಣದ ಬಗ್ಗೆ ತನಿಖೆಯಾಗಲಿದೆ ಎಂದು ಪುನರುಚ್ಚರಿಸಿದರು.
ಕಾಂಗ್ರೆಸ್ ಮಂತ್ರಿಗಳು ಮತ್ತು ಶಾಸಕರ ಮೇಲೆ 59 ಆರೋಪಗಳಿದ್ದವು, ಎಸಿಬಿ ಇದ್ದಿದ್ದಕ್ಕೆ ಅವರು ಪ್ರಕರಣ ಮುಚ್ಚಿಹಾಕಿದರು. ಇದೆಲ್ಲವೂ ಮತ್ತೆ ತನಿಖೆ ಮಾಡಿಸಲಾಗುವುದು. ಅಬಕಾರಿ ಹಾಗೂ ಕಾರ್ಮಿಕ ಇಲಾಖೆ ಹಗರಣದ ಬಗ್ಗೆ ಡಿ.ಕೆ.ಶಿವಕುಮಾರ್ ಆರೋಪದ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಹೇಳಿದರು.