ಕೊಪ್ಪಳ : ತಜ್ಞರ ಸಮಿತಿ ಶಿಫಾರಸ್ಸಿನಂತೆ ರಾಜ್ಯದಲ್ಲಿ ಕೂಡಲೆ ಪ್ರಾಥಮಿಕ ಶಾಲೆಗಳನ್ನು ಭೌತಿಕವಾಗಿ ಆರಂಭಿಸಬೇಕು ಮತ್ತು ಶಾಲೆಗಳಲ್ಲಿ ಮಕ್ಕಳಿಗೆ ಕ್ಷೀರ ಭಾಗ್ಯ ಮತ್ತು ಮಧ್ಯಾಹ್ನದ ಬಿಸಿ ಊಟವನ್ನು ಆರಂಭಿಸಬೇಕು ಎಂದು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಒತ್ತಾಯಿಸಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿ, ಈಗಾಗಲೆ ರಾಜ್ಯದ್ಯಂತ ಸರಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚುತ್ತಿರುವುದು ಅತ್ಯಂತ ಸಂತೋಷದಾಯಕ ವಿಷಯ. ಶಿಕ್ಷಕರು ಕರ ಪತ್ರಗಳನ್ನು ಮುದ್ರಿಸಿ ಓಣಿ ಓಣಿಗೆ ಹೋಗಿ ಶಾಲೆಗೆ ದಾಖಲಾಗುವಂತೆ ಪಾಲಕರ ಮನವಲಿಸಿ ಮತ್ತು ವಾಹನಗಳಲ್ಲಿ ಧ್ವನಿ ವರ್ಧಕದ ಮೂಲಕ ಪ್ರಚಾರ ಕೈಗೊಂಡಿದ್ದಾರೆ. ಅಷ್ಟೆ ಅಲ್ಲದೆ ಶಿಕ್ಷಣ ಇಲಾಖೆಯ ಆಯುಕ್ತರ ಮಾರ್ಗದರ್ಶನದಂತೆ ಎಲ್ಲಾ ಶಿಕ್ಷಣ ಅಧಿಕಾರಿಗಳ ಸತತ ಪರಿಶ್ರಮದ ಫಲವಾಗಿ ಮತ್ತು ಶಿಕ್ಷಕರ ಸಂಘಟನೆಯೊಂದಿಗೆ ಚರ್ಚಿಸಿದ ಫಲದಿಂದಾಗಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಳವಾಗಿದೆ.
ಸುಮಾರು 15 ತಿಂಗಳಿಂದ ಶಾಲೆಗೆ ಮಕ್ಕಳು ಬಾರದೆ ಪಾಲಕರು ಮಕ್ಕಳು ಗೊಂದಲದಲ್ಲಿ ಮುಳುಗಿದ್ದಾರೆ. ತಂತ್ರಜ್ಞಾನದ ಮೂಲಕ ಕೇವಲ ಶೇ 30 ಅಥವಾ 35 ರಷ್ಟು ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಆದರೆ ಎಲ್ಲಾ ಮಕ್ಕಳಿಗೂ ಏಕ ರೂಪ ಶಿಕ್ಷಣ ದೊರೆಯಬೇಕುಬುಂದು ಸಂಘದ ಆಶೆಯವಾಗಿದೆ.
ಟಿ.ವಿ. ರೇಡಿಯೋ, ಆನ್‍ಲೈನ್ ವಾಟ್ಸ್‍ಫ್, ಇನ್ನಿತರ ತಂತ್ರಜ್ಞಾನದ ಮೂಲಕ ನೀಡುವ ಶಿಕ್ಷಣ ಪ್ರಾಥಮಿಕ ಹಂತದ ನಂತರ ಮಕ್ಕಳಿಗೆ ಸೂಕ್ತವಾದರೂ ಅದರಲ್ಲಿಯೂ ತೊಂದರೆಗಳು ಆಗಿವೆ. ಆ ಕಾರಣಕ್ಕೆ ಶಾಲೆಗಳನ್ನು ಭೌತಿಕವಾಗಿ ಪ್ರಾರಂಭಿಸಿ 1ರಿಂದ 2ನೇ ತರಗತಿಗೆ ಒಂದು ದಿನ, 3 ರಿಂದ 4ನೇ ತರಗತಿಗಳಿಗೆ ಒಂದು ದಿನ, 5ರಿಂದ 6ನೇ ತರಗತಿಗಳಿಗೆ 2 ದಿನ, 7 ರಿಂದ 8ನೇ ತರಗತಿಗಳಿಗೆ 2 ದಿನಗಳು ಒಟ್ಟು ವಾರದಲ್ಲಿ 6 ದಿನಗಳು ಆಗುತ್ತವೆ. ಇದನ್ನು ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಅಳವಡಿಸಿ ಶಾಲೆಗಳನ್ನು ಪ್ರಾರಂಭಿಸಬೇಕು.
ಶಿಕ್ಷಕರು ಈ ಹಿಂದೆ ಇಲಾಖೆ ಹೇಳಿದ (ನಿಗಧಿ ಪಡಿಸಿದ) ಪಾಠಗಳನ್ನು ಬೆಳಿಗ್ಗೆ 09:45 ರಿಂದ ಸಂಜೆ 04:30 ರ ವರೆಗೆ ಕೆಲಸ ನಿರ್ವಹಿಸುತ್ತಿದ್ದು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮ ಶಾಲೆಯ ಮಕ್ಕಳ ಭವಿಷ್ಯದ ಹೊಣಿಗಾರಿಕೆ ನಮ್ಮ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರ ಜವಬ್ದಾರಿ ಆಗಿದೆ. ಶಾಲಾ ಅಭಿವೃದ್ದಿ ಮತ್ತು ಮೇಲು ಉಸ್ತುವಾರಿ ಸಮಿತಿ ಸದಸ್ಯರು ಹಾಗೂ ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರು ಆಲೋಚಿಸಿ ಕ್ರಮ ಕೈಗೊಂಡು ಕೊವೀಡ್-19 ನಿಯಮದಂತೆ ತರಗತಿಗಳನ್ನು ಪ್ರಾರಂಭಿಸಬೇಕು.
ಶಿಕ್ಷಣ ಪ್ರತಿಯೊಬ್ಬ ಮಗುವಿನ ಮೂಲಭೂತ ಹಕ್ಕಾಗಿದ್ದು ಅದನ್ನು ನೀಡುವುದು ನಮ್ಮೆಲರ ಸಮಾಜಿಕ ಹೊಣೆಗಾರಿಕೆಯಾಗಿದೆ. ಈ ಸಮಾಜಿಕ ಹೊಣೆಗಾರಿಕೆಯಲ್ಲಿ ಜನಪ್ರತಿನಿಧಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಣ ಪ್ರೇಮಿಗಳು, ಎಲ್ಲಾ ಸಂಘ ಸಂಸ್ಥೆಗಳಿ ಒಟ್ಟಾಗಿ ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸೋಣ. ಮಕ್ಕಳ ಗುಣಾತ್ಮಕ ಶಿಕ್ಷಣಕ್ಕೆ ತಕ್ಷಣ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸಬೇಕು. ಮಕ್ಕಳಿಗೆ ಕ್ಷೀರ ಭಾಗ್ಯ, ಮಧ್ಯಾಹ್ನದ ಬಿಸಿ ಊಟ ಶಾಲೆಗಳಲ್ಲಿಯೇ ಪ್ರಾರಂಭಿಸಬೇಕೆಂದು ಅವರು ಒತ್ತಾಯ ಮಾಡಿದ್ದಾರೆ.