Advertisement

ಸರಕಾರಕ್ಕೆ ಮುಳುವಾಗದಿರಲಿ ಸ್ವಪಕ್ಷೀಯರ ಪ್ರಚಾರಪ್ರಿಯತೆ

11:54 PM May 25, 2023 | Team Udayavani |

ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಹೊಸ ಸರಕಾರ ಅಧಿಕಾರಕ್ಕೆ ಬಂದು ವಾರ ಕಳೆದಿದೆ. ಆಗಲೇ ಆಡಳಿತಾರೂಢ ನಾಯಕರು ದಿನಕ್ಕೊಂದು ಅನಗತ್ಯ ಹೇಳಿಕೆಗಳನ್ನು ನೀಡುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ ನಾಯಕರು ಪಕ್ಷದ ಆಂತರಿಕ ನಿರ್ಧಾರಗಳಿಗೆ ಸಂಬಂಧಿಸಿದಂತೆ ಬಹಿರಂಗವಾಗಿ ಹೇಳಿಕೆಗಳನ್ನು ನೀಡಿ ವಿನಾಕಾರಣ ಪಕ್ಷದೊಳಗೇ ಮುಸುಕಿನ ಗುದ್ದಾಟಕ್ಕೆ ಕಾರಣರಾದರೆ ಮತ್ತೂಂದಿಷ್ಟು ಸಚಿವರು ರಾಜ್ಯದ ಆಡಳಿತಕ್ಕೆ ಸಂಬಂ ಧಿಸಿದಂತೆ ತಮ್ಮ ಮನಸ್ಸಿಗೆ ತೋಚಿದಂತೆ ನಾಲಗೆಯನ್ನು ಹರಿಯ ಬಿಡುತ್ತಿದ್ದಾರೆ. ಸಚಿವರ ಈ ಹೇಳಿಕೆಗಳು ವಿಪಕ್ಷಗಳಿಗೆ ಕಾಂಗ್ರೆಸ್‌ನ ವಿರುದ್ಧ ಮುಗಿಬೀಳಲು ಅಸ್ತ್ರವನ್ನೊದಗಿಸುತ್ತಿದ್ದು ಕಾಂಗ್ರೆಸ್‌ನ ವರಿಷ್ಠರು ಇವೆಲ್ಲದಿಂದಾಗಿ ಮುಜುಗರಕ್ಕೀಡಾಗುವಂತಾಗಿದೆ.

Advertisement

ಸರಕಾರ ಅಂಬೆಗಾಲಿಡುತ್ತಿದ್ದು ಇನ್ನೂ ಪೂರ್ಣ ಪ್ರಮಾಣದ ಸಂಪುಟ ರಚನೆಯಾಗಿಲ್ಲ. ಚುನಾವಣಪೂರ್ವದಲ್ಲಿ ಕಾಂಗ್ರೆಸ್‌ ಜನರಿಗೆ ನೀಡಿದ್ದ ಐದು ಗ್ಯಾರಂಟಿಗಳ ಜಾರಿ ವಿಷಯದಲ್ಲಿ ಒಂದಿಷ್ಟು ಇಕ್ಕಟ್ಟಿಗೆ ಸಿಲುಕಿದೆ. ಆಡಳಿತಕ್ಕೆ ಬಂದ ದಿನದಿಂದಲೇ ಈ ಐದು ಗ್ಯಾರಂಟಿಗಳನ್ನು ಜಾರಿಗೊಳಿಸುವುದಾಗಿ ಘೋಷಿಸಿದ್ದ ಕಾಂಗ್ರೆಸ್‌ ಈಗ ಭಿನ್ನರಾಗ ಹಾಡುತ್ತಿರುವ ಸಂಬಂಧ ರಾಜ್ಯದ ವಿವಿಧೆಡೆ ಜನರಿಂದ ಆಕ್ರೋಶ ವ್ಯಕ್ತವಾಗುತ್ತಿದ್ದರೆ ಇತ್ತ ವಿಪಕ್ಷಗಳು ಕೂಡ ಕಾಂಗ್ರೆಸ್‌ ಸರಕಾರ ವನ್ನು ತರಾಟೆಗೆ ತೆಗೆದುಕೊಳ್ಳಲಾರಂಭಿಸಿವೆ. ಈ ಬೆಳವಣಿಗೆಗಳ ನಡುವೆಯೇ ರಾಜ್ಯ ಸಚಿವ ಸಂಪುಟದ ಕೆಲವು ಹಿರಿಯ ಸಚಿವರು ಈ ಹಿಂದಿನ ಸರಕಾರ ಜಾರಿಗೆ ತಂದಿದ್ದ ಕೆಲವೊಂದು ಕಾನೂನು, ಕಾಯಿದೆಗಳನ್ನು ವಾಪಸು ಪಡೆಯುವುದಾಗಿ ಹೇಳಿಕೆ ನೀಡಿದ್ದಾರೆ. ಈ ಮೂಲಕ ಜೇನುಗೂಡಿಗೆ ಕಲ್ಲು ಹೊಡೆಯುವ ಕೆಲಸಕ್ಕೆ ಸಚಿವರು ಮುಂದಾಗಿರುವುದು ಒಂದಿಷ್ಟು ಆತುರದ ಕ್ರಮವಾಗಲಿದೆ.
ಆಡಳಿತಕ್ಕೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಈಗಾಗಲೇ ರಾಜ್ಯದ ಉನ್ನತ ಅಧಿಕಾರಿಗಳ ಸಭೆ ಕರೆದು ಕೆಲವೊಂದು ಅಗತ್ಯ ನಿರ್ದೇಶನಗಳನ್ನು ನೀಡಿದ್ದಾರೆ. ಅಷ್ಟು ಮಾತ್ರವಲ್ಲದೆ ಸಚಿವರು ಮತ್ತು ಶಾಸಕರಿಗೆ ಕೂಡ ಅವರ ಆದ್ಯತೆ ಗಳೇನಾಗಿರಬೇಕು ಎಂಬುದನ್ನು ಸ್ಪಷ್ಟ ಮಾತುಗಳಲ್ಲಿ ತಿಳಿಸಿದ್ದಾರೆ. ಇವೆಲ್ಲದರ ಹೊರತಾಗಿಯೂ ಸಚಿವರು ಮತ್ತು ಶಾಸಕರು ಪ್ರಚಾರಕ್ಕಾಗಿ ಬೇಕಾಬಿಟ್ಟಿ ಹೇಳಿಕೆಗಳನ್ನು ನೀಡುತ್ತಿರುವುದು ಆಡಳಿತಾರೂಢ ಪಕ್ಷಕ್ಕೆ ಕಳಂಕವೇ ಸರಿ. ಪ್ರತೀ ಬಾರಿಯೂ ಕೋಲು ಕೊಟ್ಟು ಪೆಟ್ಟು ತಿನ್ನುವ ಪರಿಸ್ಥಿತಿಯನ್ನು ಸ್ವತಃ ತಾವೇ ಸೃಷ್ಟಿಸಿಕೊಳ್ಳಬಾರದು.

ರಾಜ್ಯದ ಶಾಂತಿ, ಕಾನೂನು ಸುವ್ಯವಸ್ಥೆ ಪಾಲನೆ ಸರಕಾರದ ಆದ್ಯ ಕರ್ತವ್ಯವಾಗಿದ್ದು ಇದಕ್ಕೆ ಧಕ್ಕೆ ತರುವಂತಹ ಯಾವುದೇ ಪ್ರಯತ್ನ ಸಲ್ಲದು. ಹೀಗಾಗಿ ಸರಕಾರ ರಾಜ್ಯದ ಶಾಂತಿಗೆ ಭಂಗ ತರುವಂತಹ ಯಾವುದೇ ಚಟುವಟಿಕೆಗಳಿಗೆ ಆಸ್ಪದ ನೀಡಬಾರದು. ತಮ್ಮ ಪ್ರಚಾರದ ತೆವಲಿಗೋ, ಗೆಲುವಿನ ಅಮಲಿನಲ್ಲೋ ಏನೇನೋ ಬಹಿರಂಗ ಹೇಳಿಕೆಯನ್ನು ನೀಡಿ ಆರಂಭದಲ್ಲಿಯೇ ಗೊಂದಲ ಸೃಷ್ಟಿಯಾಗಲು ಅವಕಾಶ ಮಾಡಿಕೊಡಬಾರದು. ಆಡಳಿತ ಪಕ್ಷದ ನಾಯಕರ ಈ ಧೋರಣೆ, ಮನೋಭಾವ ಮುಂದುವರಿದದ್ದೇ ಆದಲ್ಲಿ ಪರಿಸ್ಥಿತಿ ಕೈಮೀರಲಿದೆ ಎಂಬುದನ್ನು ಮನಗಂಡು ಕಾಂಗ್ರೆಸ್‌ ವರಿಷ್ಠರು ತಮ್ಮ ನಾಯಕರಿಗೆ ಸೂಕ್ಷ್ಮ ವಿಚಾರಗಳಲ್ಲಿ ಒಂದಿಷ್ಟು ಮೌನ ವಹಿಸುವಂತೆ ಬುದ್ಧಿಮಾತು ಹೇಳಬೇಕು.

Advertisement

Udayavani is now on Telegram. Click here to join our channel and stay updated with the latest news.

Next