Advertisement

ಗಾರ್ಮೆಂಟ್‌ ನೌಕರರಿಗೆ ಸೂರು ಸಿಗುವ ಕೆಲಸವಾಗಲಿ

01:09 AM Mar 08, 2023 | Team Udayavani |

ಜಯರಾಮ್‌ ಕೆ.ಆರ್‌, ಜಂಟಿ ಕಾರ್ಯದರ್ಶಿ, ಗಾರ್ಮೆಂಟ್ಸ್‌ ಆ್ಯಂಡ್‌ ಟೆಕ್ಸ್‌ ಟೈಲ್‌ ವರ್ಕರ್ಸ್‌ ಯೂನಿಯನ್‌
ಬೆಂಗಳೂರು: ರಾಜ್ಯವ್ಯಾಪಿ ಸುಮಾರು 4.5 ಲಕ್ಷ ಗಾರ್ಮೆಂಟ್‌ ಉದ್ಯೋಗಿ ಗಳಿದ್ದಾರೆ. ಇದರಲ್ಲಿ 3.5 ಲಕ್ಷದಷ್ಟು ಮಹಿಳೆಯರೇ ಆಗಿದ್ದಾರೆ.

Advertisement

ಸರಕಾರದ ಬೊಕ್ಕಸಕ್ಕೂ ಆದಾಯ ತಂದುಕೊಡುವ ಗಾರ್ಮೆಂಟ್‌ ಕ್ಷೇತ್ರ ಇದೀಗ ಹಲವು ರೀತಿಯ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದೆ. ರಾತ್ರಿ ಪಾಳಿ ಪದ್ಧತಿಯಂತೂ ಮಹಿಳಾ ಉದ್ಯೋಗಿಗಳನ್ನು ಇನ್ನಿಲ್ಲದಂತೆ ಕಾಡುತ್ತಿದೆ. ವಿರಾಮವಿಲ್ಲದೆ ದುಡಿಸಿ ಕೊಳ್ಳುವ ಪರಿಸ್ಥಿತಿ ಬೇರೂ ರಿಕೊಂಡಿದೆ. ಇಂತಹ ಹಲವು ನೀತಿಗಳಿಗೆ ಸರಕಾರ ತಿಲಾಂಜಲಿ ಹಾಕಬೇಕಾಗಿದೆ.

ಈ ಹಿಂದೆ ಎಚ್‌.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಗಾರ್ಮೆಂಟ್‌ ಕ್ಷೇತ್ರದ ಅಭಿವೃದ್ದಿಗಾಗಿ ಸುಮಾರು 97.5 ಕೋಟಿ ರೂ.ಬಜೆಟ್‌ನಲ್ಲಿ ಮೀಸಲಿಟ್ಟಿದ್ದರು. ಆದರೆ ಅದು ಕೇವಲ ಘೋಷಣೆಯಾಗಿಯೇ ಉಳಿದುಕೊಂಡಿದೆ. ಆ ನಂತರ ಅಧಿಕಾರಕ್ಕೆ ಬಂದ ಸರಕಾರಗಳು ಗಾರ್ಮೆಂಟ್‌ ಕ್ಷೇತ್ರವನ್ನು ಕಡೆಗಣಿಸಿವೆ. ಗಾರ್ಮೆಂಟ್‌ ನೌಕರರ ಹಿತಕಾಯುವ ಯೋಜನೆಗಳನ್ನು ಜಾರಿಗೆ ತರುವಲ್ಲಿ ಸೋತು ಹೋಗಿವೆ.

ಗಾರ್ಮೆಂಟ್‌ ಕ್ಷೇತ್ರದಲ್ಲಿ ದುಡಿಯುವ ಹೆಣ್ಣುಮಕ್ಕಳಿಗೆ ಸೂರುಕಲ್ಪಿಸುವ ನಿಟ್ಟಿನಲ್ಲಿ ಸರಕಾರ ಆಲೋಚನೆ ಮಾಡಬೇಕಾಗಿದೆ. ಸಾಮೂಹಿಕ ಗುಂಪು ಮನೆಗಳ ನಿರ್ಮಾಣ ಮಾಡುವುದು ಸೇರಿದಂತೆ ಗಾರ್ಮೆಂಟ್‌ ಉದ್ಯೋಗಿಗಳ ಹಿತಕಾಯುವ ಅಂಶಗಳು ಈ ಬಾರಿಯ ಚುನಾವಣ ಪ್ರಣಾಳಿಕೆಯಲ್ಲಿ ಇರಲಿ ಎಂದು ಗೌರ್ಮೆಂಟ್‌ ನೌಕರರ ಪರವಾಗಿ ಮನವಿ ಮಾಡುತ್ತೇನೆ.

ಜತೆಗೆ ಗಾರ್ಮೆಂಟ್‌ ಉದ್ಯೋಗಿಗಳ ಅಭಿವೃದ್ದಿಯ ದೃಷ್ಟಿಯಿಂದ ಈ ಕೆಳಕಂಡ ನಮ್ಮ ವಲಯದ ಬೇಡಿಕೆಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಿಕೊಂಡು ಅಧಿಕಾರಕ್ಕೆ ಬಂದಾಗ ಜಾರಿಗೆ ತರುವಂತೆ ಆಗ್ರಹಿಸುತ್ತೇವೆ.

Advertisement

ಈಗಾಗಲೇ ಕನಿಷ್ಠ ವೇತನ ಜಾರಿಯಲ್ಲಿದೆ. ಆದರೆ ಗಾರ್ಮೆಂಟ್‌ ಕ್ಷೇತ್ರಕ್ಕೆ ಬಂದಾಗ ಕನಿಷ್ಠ ವೇತನಕ್ಕಿಂತಲೂ ಕಡಿಮೆ ವೇತನವನ್ನು ಸಿಬ್ಬಂದಿಗೆ ನೀಡಲಾಗುತ್ತಿದೆ. ಈ ವೇತನ ತಾರತಮ್ಯ ತೊಲಗಬೇಕು.

ಗಾರ್ಮೆಂಟ್‌ ಕ್ಷೇತ್ರದಲ್ಲಿ ದುಡಿಮೆ ಅವಧಿ ಯನ್ನು 12 ಗಂಟೆ ಏರಿಕೆ ಮಾಡಲಾಗಿದೆ. ಇದರಿಂದಾಗಿ ಈ ಕ್ಷೇತ್ರದಲ್ಲಿ ದುಡಿಯುತ್ತಿರುವ ಮಹಿಳೆಯರು ಹಲವು ರೀತಿಯ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಅದನ್ನು ಈ ಹಿಂದೆ ಇದ್ದಂತಹ 8 ಗಂಟೆ ಅವಧಿಗೆ ಇಳಿಸಬೇಕು.

ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಕಾನೂನು ರೀತಿಯಲ್ಲಿ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ. ಕೆಲಸ ಮಾಡುವ ವೇಳೆ ಸರಿಯಾದ ವಿರಾಮ ಕೂಡ ದೊರೆಯುತ್ತಿಲ್ಲ. ರಜೆಗಳನ್ನು ಕೂಡ ಕಾಲ ಕಾಲಕ್ಕೆ ಸರಿಯಾಗಿ ನೀಡುತ್ತಿಲ್ಲ. ಊಟದ ವೇಳೆಗೂ ಕತ್ತರಿ ಹಾಕುವ ವ್ಯವಸ್ಥೆ ಇದೆ.

ಐಟಿ-ಬಿಟಿ ಬಿಟ್ಟರೆ ಸರಕಾರಕ್ಕೆ ಅಧಿಕವಾಗಿ ವಿದೇಶಿ ಬಂಡವಾಳ ಹೂಡಿಕೆಯನ್ನು ತಂದು ಕೊಡುವುದು ಗಾರ್ಮೆಂಟ್‌ ಕ್ಷೇತ್ರವಾಗಿದೆ. ಆ ಹಿನ್ನೆಲೆಯಲ್ಲಿ ಸರಕಾರ ಬೇರೆ ಬೇರೆ ರಾಜ್ಯಗಳಲ್ಲಿ ಗಾರ್ಮೆಂಟ್‌ ನೌಕರರಿಗೆ ನೀಡುವ ಸವಲತ್ತುಗಳನ್ನು ನಮ್ಮಲ್ಲಿರುವ ಗಾರ್ಮೆಂಟ್‌ ನೌಕರರಿಗೂ ಕಲ್ಪಿಸಬೇಕು.

ಸೂರಿಲ್ಲದೆ ಹಲವು ಮಂದಿ ಗಾರ್ಮೆಂಟ್‌ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.ಅಂತವರಿಗೆ ಸೂರುಕಲ್ಪಿಸುವ ನಿಟ್ಟಿನಲ್ಲಿ ಗುಂಪು ಮನೆಗಳ ನಿರ್ಮಾಣಕ್ಕೆ ಯೋಜನೆ ರೂಪಿಸಬೇಕು. 5 ಸಾವಿರ ಕಾರ್ಮಿಕರನ್ನು ಒಂದು ಕಡೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next