Advertisement

ಶರಣರ ಹೋರಾಟ ಮುಂದುವರಿಯಲಿ

11:49 AM Jan 22, 2019 | Team Udayavani |

ಬೆಳಗಾವಿ: ಸಮಾಜದಲ್ಲಿರುವ ತಾರತಮ್ಯದ ವಿರುದ್ದ 12ನೇ ಶತಮಾನದಲ್ಲಿ ಶರಣರು ನಡೆಸಿದ ಹೋರಾಟವನ್ನು ಇಂದಿಗೂ ಮುಂದುವರಿಸಿಕೊಂಡು ಹೋಗಬೇಕಾದ ಪರಿಸ್ಥಿತಿಯಿದೆ ಎಂದು ಸಂಸದ ಸುರೇಶ ಅಂಗಡಿ ಹೇಳಿದರು.

Advertisement

ನಗರದ ಕುಮಾರಗಂಧರ್ವ ಕಲಾಮಂದಿರದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಳಗಾವಿ ಮಹಾನಗರ ಪಾಲಿಕೆ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

12ನೇ ಶತಮಾನದಲ್ಲಿ ನಡೆದ ಸಾಮಾಜಿಕ ಕ್ರಾಂತಿಯು ಜಾತಿ ತಾರತಮ್ಯದ ವಿರುದ್ಧ ಧ್ವನಿಯಾಗಿತ್ತು. ಆದರೆ ಇಂದಿಗೂ ಜಾತಿ, ಮತ, ಲಿಂಗ ಎಂಬುದೇ ಮುಂದುವರೆದಿದ್ದು, ಇದರ ವಿರುದ್ಧ ನಿರಂತರ ಹೋರಾಟ ನಡೆಯುವ ಅಗತ್ಯವಿದೆ ಎಂದರು.

ವಿಶೇಷ ಉಪನ್ಯಾಸ ನೀಡಿದ ಡಾ| ಈಶ್ವರ ಮಂಟೂರ, ಅಂಬಿಗರ ಚೌಡಯ್ಯ ನಿರಾಶ್ರಿತರನ್ನು, ಬಡವರನ್ನು ಎತ್ತಿ ಹಿಡಿದವರು. ಅವರ ವಚನಗಳಲ್ಲಿ ಬದುಕಿನ ಸೂತ್ರಗಳಿವೆ. ತಮ್ಮ ವಚನಗಳ ಮೂಲಕ ಜನಸಾಮಾನ್ಯರಲ್ಲಿ ವೈಚಾರಿಕತೆ ಅರಿವು ಮೂಡಿಸಲು ಹಾಗೂ ಮೂಢನಂಬಿಕೆ ಮತ್ತು ಅರ್ಥವಿಲ್ಲದ ಆಚರಣೆಗಳನ್ನು ತೊಲಗಿಸಲು ಶ್ರಮಿಸಿದ ಅಂಬಿಗರ ಚೌಡಯ್ಯ ನಿಜಕ್ಕೂ ನಿಜ ಶರಣ ಎಂದು ಹೇಳಿದರು.

ಮಹಾಪೌರ ಬಸಪ್ಪ ಚಿಕ್ಕಲದಿನ್ನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಮಹಾಪೌರ ಮಧುಶ್ರೀ ಪೂಜಾರ, ತಹಶೀಲ್ದಾರ ಮಂಜುಳಾ ನಾಯಕ, ಜಿಲ್ಲಾ ಪಂಚಾಯತ ಸದಸ್ಯ ಸಿದ್ದು ಸುನಗಾರ, ಜಿಲ್ಲಾ ಗಂಗಾಮತಸ್ಥರ ಸಮಾಜ ಸಂಘದ ಅಧ್ಯಕ್ಷ ಗಂಗಾರಾಮ ತಳವಾರ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀಶೈಲ ಕರಿಶಂಕರ ಸ್ವಾಗತಿಸಿದರು. ಇದಕ್ಕೂ ಮುನ್ನ ಜಯಂತಿ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮೆರವಣಿಗೆ ನಡೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next