Advertisement

ಬೇಡಿಕೆ ಈಡೇರಿಕೆಗೆ ನೌಕರರು ಸಂಘಟಿತರಾಗಲಿ

03:28 PM Sep 13, 2022 | Team Udayavani |

ಬೀದರ: ಮಹಿಳಾ ನೌಕರರು ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಸಂಘಟಿತರಾಗಬೇಕು ಎಂದು ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯುನಿಯನ್ಸ್‌ (ಸಿಐಟಿಯು) ರಾಷ್ಟ್ರೀಯ ಅಧ್ಯಕ್ಷೆ ಕೆ. ಹೇಮಲತಾ ಹೇಳಿದರು.

Advertisement

ಅಂಚೆ ನೌಕರರ ರಾಷ್ಟ್ರೀಯ ಒಕ್ಕೂಟದ ವತಿಯಿಂದ ನಗರದ ರಂಗ ಮಂದಿರದಲ್ಲಿ ನಡೆದ ಮಹಿಳಾ ಅಂಚೆ ನೌಕರರ ರಾಷ್ಟ್ರೀಯ ಸಮ್ಮೇಳನ ಹಾಗೂ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಂಘಟಿತ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶೇ.4ರಷ್ಟು ಉದ್ಯೋಗಸ್ಥ ಮಹಿಳೆಯರನ್ನು ಹೊರತುಪಡಿಸಿ, ಉಳಿದವರ ಸ್ಥಿತಿ ಶೋಚನೀಯವಾಗಿದೆ. ಸುರಕ್ಷತೆ, ಕಡಿಮೆ ಸಂಬಳ, ಕೆಲಸದ ಅವಧಿ, ರಜೆ ಇಲ್ಲದೆ ಸಂಕಷ್ಟದಲ್ಲಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ನಿವೃತ್ತ ಪೊಸ್ಟ್‌ ಮಾಸ್ಟರ್‌ ಜನರಲ್‌ ಡಾ| ಎಂ. ವೆಂಕಟೇಶ್ವರಲು ಮಾತನಾಡಿ, ಅಂಚೆ ಇಲಾಖೆಯಲ್ಲಿ ಮಹಿಳಾ ನೌಕರರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವ ಕಾರಣ ಮೇಲಿಂದ ಮೇಲೆ ಕಾರ್ಯಾಗಾರಗಳು ಅಗತ್ಯವಾಗಿವೆ. ಉದ್ಯೋಗಸ್ಥ ಮಹಿಳೆಯರ ಬೇಡಿಕೆಗಳು ಪುರುಷರಿಗಿಂತ ಭಿನ್ನವಾಗಿವೆ. ಅವರ ಬೇಡಿಕೆಗಳಿಗೆ ಇಲಾಖೆ ಸಕಾರಾತ್ಮಕವಾಗಿ ಸ್ಪಂದಿಸುವ ವಿಶ್ವಾಸ ಇದೆ ಎಂದು ತಿಳಿಸಿದರು.

ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಡಾ| ಅಬ್ದುಲ್‌ ಖದೀರ್‌ ಮಾತನಾಡಿ, ಬೀದರಲ್ಲಿ ರಾಷ್ಟ್ರೀಯ ಸಮ್ಮೇಳನ ಹಮ್ಮಿಕೊಂಡಿರುವುದು ಸಂತಸ ಉಂಟು ಮಾಡಿದೆ. ಸಮ್ಮೇಳನ ಮಹಿಳಾ ಅಂಚೆ ನೌಕರರ ಸಮಸ್ಯೆಗಳ ಪರಿಹಾರಕ್ಕೆ ನೆರವಾಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.

Advertisement

ಕಾಮ್ರೆಡ್‌ ಆರ್‌.ಎನ್‌. ಪರಾಶರ್‌ ಅವರು, ಟ್ರೇಡ್‌ ಯುನಿಯನ್‌ ಸ್ಥಾಪನೆಯ ಉದ್ದೇಶ, ಯುನಿಯನ್‌ನಿಂದ ಕೈಗೊಂಡ ಹೋರಾಟ ಹಾಗೂ ಫಲಶ್ರುತಿಗಳನ್ನು ವಿವರಿಸಿದರು. ಓಡಿಶಾ, ಜಾರ್ಖಂಡ್‌, ಛತ್ತೀಸ್‌ಗಡ್‌, ಕೇರಳ, ತಮಿಳುನಾಡಿನ ಮಹಿಳಾ ಪ್ರತಿನಿಧಿಗಳು, ರೈಲ್ವೆ ಅಂಚೆ ಸೇವೆ ಸಿಬ್ಬಂದಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಕಲಾವಿದೆ ಉಷಾ ಪ್ರಭಾಕರ ಹಾಗೂ ರಶ್ಮಿ ಶರ್ಮಾ ನೇತೃತ್ವದ ತಂಡದ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಅಖೀಲ ಭಾರತ ಅಂಚೆ ನೌಕರರ ಸಂಘ ಕರ್ನಾಟಕದ ವಲಯ ಕಾರ್ಯದರ್ಶಿ ಜಿ. ಜಾನಕಿರಾಮ, ರೈಲ್ವೆ ಅಂಚೆ ನೌಕರರ ಸಂಘದ ಕಾರ್ಯಾಧ್ಯಕ್ಷ ಎ. ಶ್ರೀನಿವಾಸ, ಅಂಚೆ ಅಧೀಕ್ಷಕ ಮಹಮ್ಮದ್‌ ಆಸಿಫ್‌, ಒಕ್ಕೂಟದ ಬೀದರ ವಿಭಾಗದ ಅಧ್ಯಕ್ಷೆ ಮಂಗಲಾ ಭಾಗವತ್‌, ಕಾರ್ಯದರ್ಶಿ ಕಲ್ಲಪ್ಪ ಕೋಣಿ ಮೊದಲಾದವರು ಉಪಸ್ಥಿತರಿದ್ದರು.

ಎರಡನೇ ದಿನದ ಗೋಷ್ಠಿಯಲ್ಲಿ ಅಖೀಲ ಭಾರತ ಅಂಚೆ ನೌಕರರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಜನಾರ್ಧನ್‌ ಮುಜುಮದಾರ್‌ ಅವರು ಸಂಘಟನೆಯ ಧ್ಯೇಯೋದ್ದೇಶಗಳನ್ನು ಬಿಡಿಸಿಟ್ಟರು. ಸಂಘಟನೆ ಮಹಿಳಾ ನೌಕರರ ಹಿತರಕ್ಷಣೆಗೆ ಶ್ರಮಿಸುತ್ತಿದೆ. ಮಹಿಳೆಯರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡಲ್ಲಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದು ತಿಳಿಸಿದರು.

ಗುರುದ್ವಾರ ಹಾಗೂ ಹೊಟೇಲ್‌ ಕನಕಾದ್ರಿಯಲ್ಲಿ ಪ್ರತಿನಿಧಿಗಳಿಗೆ ವಸತಿ ವ್ಯವಸ್ಥೆ ಮಾಡಲಾಗಿತ್ತು. ಶಾಹೀನ್‌ ಶಿಕ್ಷಣ ಸಂಸ್ಥೆ ವತಿಯಿಂದ ಐತಿಹಾಸಿಕ ಸ್ಥಳಗಳ ವೀಕ್ಷಣೆಗೆ ವಾಹನ ಹಾಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ಮಳೆಯ ಮಧ್ಯೆಯೂ ಕರ್ನಾಟಕ ಸೇರಿ ದೇಶದ 22 ರಾಜ್ಯಗಳ 426 ಪ್ರತಿನಿಧಿಗಳು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next