Advertisement

State Government School; ದಸರಾ ರಜೆ ಕ್ರಿಸ್ಮಸ್‌ಗೆ ಹೊಂದಿಸಲು ಅವಕಾಶ

01:42 AM May 05, 2024 | Team Udayavani |

ಉಡುಪಿ: ರಾಜ್ಯ ಸರಕಾರಿ ಶಾಲೆಗಳಿಗೆ ದಸರಾ ರಜೆಯನ್ನು ಬದಲಾವಣೆ ಮಾಡಲು ಈವರೆಗೂ ಅವಕಾಶ ಇರಲಿಲ್ಲ. ಇದೀಗ ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆ ಹೊರಡಿಸಿರುವ ರಾಜ್ಯ ಪಠ್ಯಕ್ರಮದ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ 2024-25ನೇ ಸಾಲಿನ ವಾರ್ಷಿಕ ಶೈಕ್ಷಣಿಕ ಚಟುವಟಿಕೆಗಳ ಮಾರ್ಗಸೂಚಿಯಲ್ಲಿ ಕ್ರಿಸ್ಮಸ್‌ ಅವಧಿಗೆ ಮಧ್ಯಾಂತರ ರಜೆ ನೀಡಲು ಮನವಿ ಸಲ್ಲಿಸುವ ಶಾಲೆಗಳಿಗೆ ರಜೆ ಮಂಜೂರಾತಿ ಸಿಗಲಿದೆ.

Advertisement

ಕ್ರೈಸ್ತ ಸಮುದಾಯದ ಆಡಳಿತ ಮಂಡಳಿಯ ಸಂಸ್ಥೆಗಳಿಗೆ ದಸರಾ ರಜೆಯ ಬದಲಿಗೆ ಕ್ರಿಸ್ಮಸ್‌ ಸಂದರ್ಭ ದಲ್ಲಿ ರಜೆ ನೀಡಲು ಅವಕಾಶ ಹಿಂದಿನಿಂದಲೂ ಇದೆ ಮತ್ತು ಈ ಸಂಬಂಧ ಸರಕಾರದ ಆದೇಶವೂ ಇದೆ. ಹೀಗಾಗಿಯೇ ಅನೇಕ ಕ್ರೈಸ್ತರ ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ತರಗತಿಗಳಿಗೆ ಸಮಸ್ಯೆಯಾಗದಂತೆ ದಸರಾ ಮಧ್ಯಾಂತರ ರಜೆಯನ್ನು ಕ್ರಿಸ್ಮಸ್‌ ಸಂದರ್ಭದಲ್ಲಿ ನೀಡಿ, ದಸರಾ ಅವಧಿ ಯಲ್ಲಿ ತರಗತಿಗಳನ್ನು ನಡೆಸುತ್ತಾರೆ. ಇನ್ನು ಕೆಲವು ಕ್ರೈಸ್ತ ಸಂಸ್ಥೆಗಳು ಮಧ್ಯಾಂತರ ರಜೆಯಲ್ಲಿ ಎರಡು ಭಾಗ ಮಾಡಿ ಸ್ವಲ್ಪದಿನ ದಸರಾ ಅವಧಿಯಲ್ಲಿ ಇನ್ನುಳಿದ ದಿನವನ್ನು ಕ್ರಿಸ್ಮಸ್‌ ಅವಧಿಯಲ್ಲಿ ನೀಡುತ್ತವೆ.

2024-25ನೇ ಸಾಲಿನ ದಸರಾ ರಜೆ (ಮಧ್ಯಾಂತರ ರಜೆ) ಅಕ್ಟೋಬರ್‌ 3ರಿಂದ ಆರಂಭಗೊಂಡು ಅಕ್ಟೋಬರ್‌ 20ರ ವರೆಗೆ (18) ದಿನ ಇರಲಿದೆ. ಈ ಅವಧಿಯಲ್ಲಿ ಕ್ರಿಸ್ಮಸ್‌ ರಜೆ ಬೇಡಿಕೆಯನ್ನು ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳು ತಮ್ಮ ವ್ಯಾಪ್ತಿಯ ಜಿಲ್ಲಾ ಉಪನಿರ್ದೇಶಕರಿಗೆ ಸಲ್ಲಿಸಿದಲ್ಲಿ, ಈ ಬಗ್ಗೆ ಆಯಾ ಉಪನಿರ್ದೇಶಕರು ಪರಿಶೀಲಿಸಿ ನಿರ್ಧರಿಸಲಿದ್ದಾರೆ. ಒಂದೊಮ್ಮೆ ಕ್ರಿಸ್ಮಸ್‌ ಅವಧಿಯಲ್ಲಿ ಮಧ್ಯಾಂತರ ರಜೆ ನೀಡಲು ಅವಕಾಶ ಕಲ್ಪಿಸಿದರೆ, ಅಕ್ಟೋಬರ್‌ನ ಮಧ್ಯಾಂತರ ರಜೆಯಲ್ಲಿ ಕಡಿತಗೊಳಿಸಿ ತರಗತಿಗಳನ್ನು ಸರಿದೂಗಿಸಲು ಕ್ರಮ ತೆಗೆದುಕೊಳ್ಳಬೇಕು ಎಂಬ ನಿರ್ದೇಶನವನ್ನು ಇಲಾಖೆಯಿಂದ ಉಪನಿರ್ದೇಶಕರಿಗೆ ನೀಡಲಾಗಿದೆ.

ಈವರೆಗೂ ರಾಜ್ಯ ಪಠ್ಯಕ್ರಮದ ಸರಕಾರಿ ಶಾಲೆಗಳಿಗೆ ದಸರಾ ಅವಧಿಯಲ್ಲಿಯೇ ಮಧ್ಯಾಂತರ ರಜೆ ನೀಡಲಾಗುತ್ತಿತ್ತು. ಆದರೆ ಕೆಲವು ಖಾಸಗಿ/ಅನುದಾನಿತ ಶಾಲಾಡಳಿತ ಮಂಡಳಿಗಳು ಅಗತ್ಯ ಬೇಡಿಕೆ ಸಲ್ಲಿಸಿ, ಮಧ್ಯಾಂತರ ರಜೆಯನ್ನು ಕ್ರಿಸ್ಮಸ್‌ ಅವಧಿಯಲ್ಲಿ ಪಡೆಯುತ್ತಿವೆ. ಸರಕಾರಿ ಶಾಲೆಯ ಮಕ್ಕಳಿಗೆ ಕ್ರಿಸ್ಮಸ್‌ ದಿನದಂದು ಮಾತ್ರ ರಜೆ ನೀಡಲಾಗುತ್ತದೆ. ಉಳಿದಂತೆ ಮಧ್ಯಾಂತರ ರಜೆ ದಸರಾ ಅವಧಿಯಲ್ಲಿ ಇರುತ್ತದೆ. ಈ ಬಾರಿ ಏನಾಗಲಿದೆ ಎಂಬ ಮಾಹಿತಿ ಇಲ್ಲ. ಸರಕಾರಿ ಶಾಲೆಗಳಿಗೆ ಕ್ರಿಸ್ಮಸ್‌ ಅವಧಿಯಲ್ಲಿ ಮಧ್ಯಾಂತರ ರಜೆಗೆ ಮನವಿ ಸಲ್ಲಿಸುವ ಸಾಧ್ಯತೆ ತೀರ ಕಡಿಮೆಯಿರುತ್ತದೆ. ಕಾರಣ ಎಸ್‌ಡಿಎಂಸಿಯಿಂದ ನಿರ್ಧರಿಸಿ, ಪಾಲಕ, ಪೋಷಕರ ಅನುಮತಿ ಪಡೆದು ಮನವಿ ಸಲ್ಲಿಸಬೇಕಾಗುತ್ತದೆ. ಹೀಗಾಗಿ ಬಹುತೇಕ ಶಾಲೆಗೆಳು ಈ ಹಿಂದಿನ ಪದ್ಧತಿಯನ್ನು ಬದಲಿಸುವುದು ಕಷ್ಟಸಾಧ್ಯ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಕೆಲವು ಕಡೆ ಅಸಮಾಧಾನ
ಮಧ್ಯಾಂತರ ರಜೆಯನ್ನು ಪೂರ್ಣ ವಾಗಿ ಕ್ರಿಸ್ಮಸ್‌ ಸಂದರ್ಭದಲ್ಲೇ ನೀಡುವುದಕ್ಕೆ ಕೆಲವು ಕಡೆ ಪೋಷಕರ ವಿರೋ ಧವೂ ಇದೆ. ಅಗತ್ಯ ಇರುವ ಕಡೆಗಳಲ್ಲಿ ದಸರಾ ಸಂದರ್ಭದಲ್ಲಿ ಸ್ವಲ್ಪದಿನ ಹಾಗೂ ಕ್ರಿಸ್ಮಸ್‌ ಸಂದರ್ಭದಲ್ಲಿ ಸ್ವಲ್ಪ ದಿನ ನೀಡುವ ವ್ಯವಸ್ಥೆ ಮಾಡಕೊಳ್ಳಬೇಕು. ಮಧ್ಯಾಂತರ ರಜೆ ಬಹುಪಾಲು ಶಿಕ್ಷಣ ಸಂಸ್ಥೆಗಳಿಗೆ ಅಕ್ಟೋಬರ್‌ನಲ್ಲೇ ಇರುವುದರಿಂದ ಎಲ್ಲ ವಿದ್ಯಾರ್ಥಿ ಗಳಿಗೂ ಒಟ್ಟಿಗೆ ರಜೆ ಸಿಕ್ಕಂತೆ ಆಗುತ್ತದೆ. ಹೀಗಾಗಿ ಮಧ್ಯಾಂತರ ರಜೆಯನ್ನು ಪೂರ್ಣವಾಗಿ ಕ್ರಿಸ್ಮಸ್‌ ಅವಧಿಯಲ್ಲೇ ನೀಡುವುದು ಸರಿಯಲ್ಲ ಎಂದು ಕೆಲ ಪೋಷಕರು ಅಸಮಾಧಾನ ಹೊರ ಹಾಕಿದ್ದಾರೆ.

Advertisement

ಕ್ರೈಸ್ತ ಶಿಕ್ಷಣ ಸಂಸ್ಥೆಗಳಿಗೆ ಮಧ್ಯಾಂತರ ರಜೆಯನ್ನು ಕ್ರಿಸ್ಮಸ್‌ ಸಂದರ್ಭ ನೀಡಲು ಅವಕಾಶವಿದೆ. ಅದರಂತೆ ಇಲಾಖೆಗೆ ಮನವಿಸಲ್ಲಿಸಿ, ಅವಕಾಶ ಮಾಡಿಕೊಳ್ಳುತ್ತಾರೆ. ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಈವರೆಗೂ ಆ ರೀತಿಯ ಯಾವುದೇ ವ್ಯವಸ್ಥೆ ಇರಲಿಲ್ಲ. ದಸರಾ ಸಂದರ್ಭದಲ್ಲಿ ಮಕ್ಕಳಿಗೆ ರಜೆ ನೀಡಲಾಗುತ್ತದೆ. 2024-25ನೇ ಶೈಕ್ಷಣಿಕ ವರ್ಷದಲ್ಲೂ ಇದು ಬದಲಾಗುವ ಸಾಧ್ಯತೆ ಇಲ್ಲ.
– ಗಣಪತಿ ಕೆ., ಡಿಡಿಪಿಐ ಉಡುಪಿ

 

Advertisement

Udayavani is now on Telegram. Click here to join our channel and stay updated with the latest news.

Next