Advertisement

ಅಳಿವೆಬಾಗಿಲು ಕಡಲಾಳದಲ್ಲಿ ನಡೆಯಲಿ ಡ್ರೆಜ್ಜಿಂಗ್‌

03:45 PM Apr 08, 2023 | Team Udayavani |

ಮಹಾನಗರ: ನೇತ್ರಾವತಿ-ಫಲ್ಗುಣಿ ನದಿ ಗಳು ಕಡಲು ಸೇರುವ ಅಳಿವೆಬಾಗಿಲಿನಲ್ಲಿ ತುಂಬಿರುವ ಹೂಳಿನಿಂದಾಗಿ ಮೀನುಗಾರರ ಹಾಗೂ ವಾಣಿಜ್ಯ ವ್ಯವಹಾರದ ಬೋಟ್‌ಗಳ ಸಂಚಾರಕ್ಕೆ ತೊಡಕುಂಟಾಗಿದೆ. ಮರ ಳನ್ನು ಡ್ರೆಜ್ಜಿಂಗ್‌(ಬೃಹತ್‌ ಯಂತ್ರದ ಸಹಾಯ ದಿಂದ ಮೇಲಕ್ಕೆತ್ತುವ)ಮಾಡುವ ಕಾಮಗಾರಿಯ ಯೋಜನೆ ಇನ್ನೂ ಕಡತದಲ್ಲೇ ಉಳಿದಿದೆ.

Advertisement

ಮಂಗಳೂರಿನ ಅಳಿವೆಬಾಗಿಲು ವ್ಯಾಪ್ತಿ ಯಲ್ಲಿ ತುಂಬಿರುವ ಹೂಳನ್ನು ಪೂರ್ಣ ಪ್ರಮಾಣದಲ್ಲಿ ಮೇಲಕ್ಕೆತ್ತಲು 29 ಕೋ.ರೂ.ಗಳ ಮಹತ್ವದ ಯೋಜನೆ ಜಾರಿಗೆ ತರಲಾಗಿದೆ. ಡ್ರೆಜ್ಜಿಂಗ್‌ ಕಾಮಗಾರಿಗಾಗಿ ಹಲವು ಬಾರಿ ಟೆಂಡರ್‌ ಆಗಿದ್ದರೂ ಕಾನೂನಾತ್ಮಕ ಹಾಗೂ ತಾಂತ್ರಿಕ ಕಾರಣದಿಂದ ಯಾರಿಗೂ ಟೆಂಡರ್‌ ನೀಡಲು ಸಾಧ್ಯವಾಗಿರಲಿಲ್ಲ. ಇದರಿಂದಾಗಿ ಮೀನುಗಾರರ ಬಹುಕಾಲದ ಬೇಡಿಕೆ ಇನ್ನೂ ಈಡೇರದೆ ಸಮಸ್ಯೆಯಾಗಿಯೇ ಉಳಿದಿದೆ.
ಕೇಂದ್ರ ಹಾಗೂ ರಾಜ್ಯ ಸರಕಾರದ ಸಹ ಭಾಗಿತ್ವದಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಕೇಂದ್ರದಿಂದ 14.5 ಕೋ.ರೂ. ಹಾಗೂ ಇಷ್ಟೇ ಪ್ರಮಾಣದ ಹಣವನ್ನು ರಾಜ್ಯ ಸರಕಾರ ನೀಡಬೇಕಿದೆ. “ಸಾಗರ ಮಾಲ’ ಯೋಜನೆಯಡಿಯಲ್ಲಿ “ಕೋಸ್ಟಲ್‌ ಬರ್ತ್‌ ಸ್ಕೀಂ’ನಡಿಯಲ್ಲಿ ಈ ಯೋಜನೆಗೆ ಒಪ್ಪಿಗೆ ದೊರಕಿದೆ.

ಅಳಿವೆಬಾಗಿಲಿನಿಂದ 2ನೇ ಹಂತದ ವಾಣಿಜ್ಯ ದಕ್ಕೆ ಇರುವ 3.2 ಕಿ.ಮೀ. ವ್ಯಾಪ್ತಿಯಲ್ಲಿ ಹೂಳೆತ್ತಬೇಕಿದೆ. ಹೂಳೆತ್ತಲು ಪ್ರಸ್ತುತ ಮಂಗಳೂರಿನಲ್ಲಿ ಗ್ರಾÂಬ್‌ ಡ್ರೆಜ್ಜರ್‌ಗಳು ಇದ್ದು, ಮುಂದೆ ಬೃಹತ್‌ ಪ್ರಮಾಣದ ಕಟ್ಟರ್‌ ಸಕ್ಷನ್‌ ಮಾದರಿಯ ಡ್ರೆಜ್ಜಿಂಗ್‌ ಯಂತ್ರೋ ಪಕರಣಗಳು ಬರಬೇಕಿವೆ.

ಅಳಿವೆಬಾಗಿಲಿನಲ್ಲಿನ ಹೂಳಿನ ಸಮಸ್ಯೆ ಯನ್ನು ಶಾಶ್ವತವಾಗಿ ಪರಿಹರಿಸಲು “-7′ ಮೀ.ನಷ್ಟು ಆಳಕ್ಕೆ ಡ್ರೆಜ್ಜಿಂಗ್‌ (ಈಗ “-4′)ಮಾಡ ಬೇಕಾಗಿದೆ. ಸದ್ಯ ವರ್ಷಕ್ಕೊಮ್ಮೆ ಮೀನುಗಾರರ ಬೋಟು ಸಂಚರಿಸಲು ಸಾಕಾಗುವಷ್ಟು ಕನಿಷ್ಠ ಮಟ್ಟದಲ್ಲಿ ಡ್ರೆಜ್ಜಿಂಗ್‌ ಮಾಡಲಾಗುತ್ತಿದೆ. ಇದಕ್ಕೆ ಬರೋಬ್ಬರಿ ಕೋಟಿ ರೂ. ಖರ್ಚು ಮಾಡಲಾಗುತ್ತದೆ. ಆದರೆ ಮರು ವರ್ಷ ಅದೇ ಸಮಸ್ಯೆ ಎದುರಾಗುತ್ತದೆ. ಹೀಗಾಗಿ ಅಳಿವೆ ಬಾಗಿಲಿನಲ್ಲಿ ಪೂರ್ಣ ಪ್ರಮಾಣದಲ್ಲಿ ಡ್ರೆಜ್ಜಿಂಗ್‌ ನಡೆಯಬೇಕು ಎಂಬುದು ಈ ಭಾಗದ ಮೀನುಗಾರರ ಬಹುಕಾಲದ ಬೇಡಿಕೆ.

ಆಳ ಡ್ರೆಜ್ಜಿಂಗ್‌ ಉದ್ದೇಶ
ಮೀನುಗಾರಿಕಾ ಬೋಟ್‌ಗಳಿಗೆ ಅಳಿವೆ ಬಾಗಿಲಿನಲ್ಲಿ -3 ಮೀಟರ್‌ ಆಳಕ್ಕೆ ಡ್ರೆಜ್ಜಿಂಗ್‌ ಮಾಡಿದರೆ ಸಾಕಾಗುತ್ತದೆ. ಆದರೆ ಲಕ್ಷದ್ವೀಪಕ್ಕೆ ತೆರಳುವ (ಗೂಡ್ಸ್‌)ವಾಣಿಜ್ಯ ಬೋಟ್‌, ಮಂಜಿಗಳಿಗೆ -4 ಮೀಟರ್‌ ಆಳ ಡ್ರೆಜ್ಜಿಂಗ್‌ ಮಾಡಬೇಕು. ಹೀಗಾಗಿ ಪ್ರತೀ ವರ್ಷ -4 ಮೀಟರ್‌ನಷ್ಟು ಡ್ರೆಜ್ಜಿಂಗ್‌ ಮಾಡಲಾಗುತ್ತದೆ. ಆದರೆ ನೀರಿನ ಹರಿಯುವ ವೇಗಕ್ಕೆ ಮತ್ತೆ ಮರಳು ತುಂಬುವುದರಿಂದ ಪ್ರತೀ ವರ್ಷವೂ ಸಮಸ್ಯೆ ಎದುರಾಗುತ್ತಿದೆ.

Advertisement

ಬಹಳ ಅಪಾಯಕಾರಿ!
ಮೀನುಗಾರಿಕಾ ದೋಣಿಗಳ ಸಂಚಾರ, ಲಕ್ಷದ್ವೀಪಕ್ಕೆ ಮಿನಿ ಹಡಗುಗಳ ಸಂಚಾರಕ್ಕೆ ಅಳಿವೆಬಾಗಿಲಿನಲ್ಲಿ ತುಂಬಿ ರುವ ಬೃಹತ್‌ ಪ್ರಮಾಣದ ಹೂಳು ಬಹಳಷ್ಟು ಅಪಾಯಕಾರಿ. ಇದರಿಂದಾಗಿ ಈಗಾಗಲೇ ಹಲವು ಅವಘಡಗಳು ಸಂಭವಿಸಿವೆ. ಈ ಹಿಂದೆ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಒಂದೆರಡು ಬೋಟ್‌ಗಳು ಅಳಿವೆ ಬಾಗಿಲು ಬಳಿ ಅವಘಡಕ್ಕೀಡಾಗಿದ್ದು ಇನ್ನೂ ಅದರ ಅವಶೇಷವನ್ನು ತೆರವು ಮಾಡದ ಹಿನ್ನೆಲೆಯಲ್ಲಿ ಮೀನುಗಾರಿಕಾ ದೋಣಿ ಗಳು ಅಪಾಯ ಎದುರಿಸುತ್ತಿವೆ.

- ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next