Advertisement

ಮೀನುಗಾರರ ಬೇಡಿಕೆಗೂ ಸ್ಪಂದನೆ ಸಿಗಲಿ

12:05 AM Mar 14, 2023 | Team Udayavani |

ದಯಾನಂದ ಕೆ. ಸುವರ್ಣ,
ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ
ರಾಜ್ಯದ ಆರ್ಥಿಕತೆಗೆ ತನ್ನದೇ ಕೊಡುಗೆ ನೀಡುವ ಮೂಲಕ ಕರಾವಳಿಯ ಆರ್ಥಿಕತೆಯನ್ನು ಸದೃಢವಾಗಿಸುವಲ್ಲಿ ಮೀನುಗಾರಿಕೆ ಪ್ರಮುಖ ಪಾತ್ರವಹಿಸುತ್ತಿದೆ. ಕಡಲ ಮೀನುಗಾರಿಕೆ ಮತ್ತು ಉಪ ಕಸುಬು ಗಳನ್ನು ಅವಲಂಬಿಸಿ ಸಾವಿರಾರು ಕುಟುಂಬಗಳು ಇವೆ. 2021-22ರಲ್ಲಿ 5.89 ಲಕ್ಷ ಮೆಟ್ರಿಕ್‌ ಟನ್‌ ಕಡಲ ಮೀನು ಉತ್ಪಾದನೆಯಾಗಿದೆ. ಕಡಲ ಮೀನುಗಾರಿಕೆಯಲ್ಲಿ 4,744 ಯಾಂತ್ರೀ ಕೃತ ದೋಣಿಗಳು, 10,084 ಮೋಟಾರು ದೋಣಿಗಳು ಹಾಗೂ 7,714 ಸಾಂಪ್ರದಾಯಿಕ ದೋಣಿಗಳಿವೆ. ಯಾಂತ್ರೀಕೃತ ದೋಣಿಗಳು ರಾಜ್ಯದ ಒಟ್ಟು ಕಡಲ ಮೀನು ಉತ್ಪಾದನೆಯ ಶೇ.85ಕ್ಕೂ ಅಧಿಕ ಪಾಲು ಹೊಂದಿವೆ. 1962.19 ಕೋಟಿ ಮೌಲ್ಯದ 1,20,427 ಮೆಟ್ರಿಕ್‌ ಟನ್‌ ಸಾಗರೋತ್ಪನ್ನಗಳನ್ನು 2021-22ರಲ್ಲಿ ಹೊರ ದೇಶ ಹಾಗೂ ರಾಜ್ಯಗಳಿಗೆ ರಫ್ತು ಮಾಡಲಾಗಿದೆ.

Advertisement

ಮೀನುಗಾರರ ಬಹುಪಾಲು ಬದುಕು ಕಡಲ ಮಧ್ಯೆ ದೋಣಿ ಯಲ್ಲೇ ಇರುತ್ತದೆ. ಮೀನುಗಾರರ ಅದೆಷ್ಟೋ ಬೇಡಿಕೆಗಳು ಈಡೇರದೆ ಉಳಿದುಕೊಂಡಿವೆ. ಈ ಬಾರಿಯ ಚುನಾವಣೆಯಲ್ಲಾದರೂ ರಾಜಕೀಯ ಪಕ್ಷಗಳ ಪ್ರಣಾಳಿಕೆ ಯಲ್ಲಿ ಮೀನುಗಾರರ ಪ್ರಮುಖ ಬೇಡಿಕೆಗಳು ಇರಲಿ ಮತ್ತು ಅದಕ್ಕೆ ಪರಿಹಾರವೂ ಸಿಗುವಂತಾಗಲಿ.

ಮಲ್ಪೆ ಸಹಿತ ಕೆಲವು ಬಂದರುಗಳಲ್ಲಿ ಹೂಳೆತ್ತುವ ಕಾರ್ಯ ಆಮೆಗತಿಯಲ್ಲಿ ಸಾಗುತ್ತಿದೆ. ಮೇ ಅಂತ್ಯಕ್ಕೆ ಮೀನುಗಾರಿಕೆಯ ಋತು ಮುಗಿದು ಬೋಟುಗಳನ್ನು ಲಂಗರು ಹಾಕಲಾಗುತ್ತದೆ. ಅಷ್ಟರೊಳಗೆ ಹೂಳೆತ್ತುವ ಕಾರ್ಯ ಆಗಬೇಕು.

ಪ್ರತೀ ವರ್ಷವೂ ಮೇ ಅಂತ್ಯದೊಳಗೆ ಹೂಳೆತ್ತಬೇಕು. ಬೋಟುಗಳಿಗೆ ದಿನಕ್ಕೆ ನಿಗದಿ ಮಾಡಿರುವ ಡೀಸೆಲ್‌ ಮಿತಿಯನ್ನು 300 ಲೀಟರ್‌ನಿಂದ 500 ಲೀಟರ್‌ಗೆ ಹೆಚ್ಚಿಸಬೇಕು ಮತ್ತು ಅದನ್ನು ಯಾವ ತಿಂಗಳಿನಲ್ಲಿ ಬೇಕಾದರೂ ಪಡೆಯಲು ಅವಕಾಶ ನೀಡಬೇಕು.

ನಾಡದೋಣಿ ಮೀನುಗಾರರಿಗೆ ನಿರ್ದಿಷ್ಟ ಪ್ರಮಾಣದ ಸೀಮೆಎಣ್ಣೆಯನ್ನು ಆಯಾ ತಿಂಗಳು ಸಿಗುವಂತೆ ಮಾಡಬೇಕು. ಪೆಟ್ರೋಲ್‌ ಎಂಜಿನ್‌ ಬರುವ ತನಕವೂ ಇದನ್ನು ಮುಂದುವರಿಸಬೇಕು.

Advertisement

ಮೀನುಗಾರ ಮಹಿಳೆಯರಿಗೆ 50,000 ರೂ. ವರೆಗೆ ಬಡ್ಡಿರಹಿತ ಸಾಲ ಪುನರ್‌ ಆರಂಭಿಸಬೇಕು ಮತ್ತು ಈ ಹಿಂದೆ ಆಗಿರುವ ಮೀನುಗಾರರ ಸಾಲಮನ್ನಾ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಆಗಬೇಕು.

ಎಲ್ಲ ಬಂದರುಗಳ ನಿರ್ವಹಣೆಗೆ ನಿರ್ದಿಷ್ಟ ಅನುದಾನವನ್ನು ಕಡ್ಡಾಯವಾಗಿ ಮೀಸಲಿಡಬೇಕು ಮತ್ತು ಮೀನುಗಾರಿಕೆಗೆ ನೀಡುವ ಒಟ್ಟಾರೆ ಅನುದಾನದ ಪ್ರಮಾಣವನ್ನು ಹೆಚ್ಚಿಸಬೇಕು.

ಭದ್ರತೆಯ ವಿಷಯವಾಗಿ ಎಲ್ಲ ಬಂದರುಗಳಲ್ಲೂ ಸಿಸಿ ಕೆಮರಾ ಅಳವಡಿಸಬೇಕು. ಮೀನುಗಾರರ ರಕ್ಷಣೆಗೆ ಸೀ ಆ್ಯಂಬುಲೆನ್ಸ್‌ ವ್ಯವಸ್ಥೆ ಮಾಡಬೇಕು.

ಸಮುದ್ರದ ಮಧ್ಯದಲ್ಲಿ ಮೀನುಗಾರರ ಮೇಲೆ ಹೊರ ರಾಜ್ಯದವರಿಂದ ಆಗುವ ಹಲ್ಲೆಯನ್ನು ತಡೆಯಲು ಕ್ರಮ ಆಗಬೇಕು. ಮೀನುಗಾರರಿಗೆ ಸರಕಾರದಿಂದ ನೀಡುವ ವಸತಿ ಯೋಜನೆಯ ಅನುದಾನ ಹೆಚ್ಚಳ ಮಾಡಬೇಕು.
ಕಡಲಿನಲ್ಲಿ ಸುರಕ್ಷತೆಗೆ ಆದ್ಯತೆ ನೀಡಬೇಕು. ಮೀನುಗಾರ ಮಹಿಳೆಯರಿಗೂ ಅಗತ್ಯ ಸೌಲಭ್ಯಗಳನ್ನು ನಿರ್ದಿಷ್ಟ ಕಾಲಮಿತಿಯಲ್ಲಿ ಒದಗಿಸಬೇಕು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next