Advertisement

Davanagere; ರಾಮ ಮಂದಿರ ವಿಚಾರದಲ್ಲಿ ಕಾಂಗ್ರೆಸ್ ಸ್ಪಷ್ಟ ನಿಲುವು ತೋರಲಿ: ಸಿ.ಟಿ ರವಿ

05:00 PM Jan 13, 2024 | Team Udayavani |

ದಾವಣಗೆರೆ: ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ಕಾಂಗ್ರೆಸ್ ಗೊಂದಲದಲ್ಲಿದ್ದು ಈ ಕುರಿತು ಸ್ಪಷ್ಟ ನಿಲುವು ತೋರಬೇಕು. ಈಗಿನ ಕಾಂಗ್ರೆಸ್‌ನವರಿಗೆ ಶ್ರೀರಾಮ ಬೇಕೋ ಅಥವಾ ಬಾಬರ್ ಬೇಕೋ ಎಂಬ ಎರಡು ಆಯ್ಕೆಗಳು ಇವೆ. ಇದರಲ್ಲಿ ಯಾವುದು ಬೇಕು ಎಂಬದನ್ನು ಕಾಂಗ್ರೆಸ್ ಇದೇ ಸಂದರ್ಭದಲ್ಲಿ ಸ್ಪಷ್ಟ ಪಡಿಸಬೇಕು ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಸಿ.ಟಿ. ರವಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತ ಬಾಬರ್‌ನನ್ನು ಬಿಟ್ಟು  ಕೊಡಲಾಗದು. ಅತ್ತ ರಾಮನ ಜತೆ ನಿಂತುಕೊಳ್ಳಲೂ ಆಗಲ್ಲ ಎಂಬ ಸ್ಥಿತಿಗೆ ಕಾಂಗ್ರೆಸ್ ಬಂದು ತಲುಪಿದೆ. ಕಾಂಗ್ರೆಸ್‌ ನವರಿಗೆ ಬಾಬರ್ ಮೇಲೆ ಆಸಕ್ತಿ ಇದ್ದರೆ ಅವರಿಗೆ ಈ ದೇಶದಲ್ಲಿ ಜಾಗವೇ ಇಲ್ಲ. ಏಕೆಂದರೆ ರಾಮನಿಲ್ಲದೇ ಈ ರಾಷ್ಟ್ರವೇ ಇಲ್ಲ. ರಾಮನಿಲ್ಲದ ಭಾರತ ಕಲ್ಪನೆ ಮಾಡಿಕೊಳ್ಳಲು ಸಹ ಆಗದು. ರಾಮ, ರಾಮಮಂದಿರ ವಿಚಾರದಲ್ಲಿ ಕಾಂಗ್ರೆಸ್ ಸಣ್ಣತನದ ರಾಜಕಾರಣ ನಿಲ್ಲಿಸಬೇಕು ಎಂದರು.

ರಾಷ್ಟ್ರ ಕಾರಣಕ್ಕಾಗಿ ರಾಮಮಂದಿರ ಆಗಿದೆಯೇ ಹೊರತು ರಾಜಕಾರಣಕ್ಕಾಗಿ ಅಲ್ಲ. ರಾಮರಾಜ್ಯ ಆಶಯದೊಂದಿಗೆ ಮಂದಿರ ನಿರ್ಮಾಣವಾಗಿದೆ. ರಾಮಮಂದಿರ ವಿಚಾರದಲ್ಲಿ ರಾಜಕಾರಣ ಮಾಡಿಕೊಂಡು ಬಂದಿದ್ದೇ ಕಾಂಗ್ರೆಸ್ ಎಂದು ರವಿ ಆರೋಪಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಜ. 22ರ ಬಳಿಕ ಅಯೋಧ್ಯೆಗೆ ಹೋಗುವುದಾಗಿ ಹೇಳಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಯಾವಾಗ ಬೇಕಾದರೂ ಹೋಗಲಿ. ಆದರೆ, ತಮ್ಮಲ್ಲಿರುವ ನಿಜರಾಮನ ಭಕ್ತಿ ತೋರಿಸಲಿ. ಅವರೂ ನಿಜರಾಮನ ಭಕ್ತರಾಗಲಿ. ಅವರು ಈ ಹಿಂದೆ  ರಾಮಮಂದಿರಕ್ಕೆ ದೇಣಿಗೆ ಕೊಡುವುದಿಲ್ಲ ಯಾಕೆ ಕೊಡಬೇಕು ಎಂದು ಹೇಳಿದ್ದನ್ನೂ ಮಾಧ್ಯಮಗಳು ಈ ಸಂದರ್ಭದಲ್ಲಿ ಬಿತ್ತರಿಸಬೇಕು. ಅವರ ಹೃದಯದಲ್ಲಿ ಶ್ರೀರಾಮ ಎಷ್ಟರ ಮಟ್ಟಿಗಿದ್ದಾನೆ ಎಂಬುದು ಜನರಿಗೂ ಗೊತ್ತಾಗಲಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next