Advertisement

ಪುತ್ತೂರು ಆಸ್ಪತ್ರೆ ಸಾಮರ್ಥ್ಯ 300 ಹಾಸಿಗೆಗೆ ಏರಿಕೆಯಾಗಲಿ

02:56 PM Mar 21, 2023 | Team Udayavani |

ಪುತ್ತೂರು: ಭವಿಷ್ಯದಲ್ಲಿ ಜಿಲ್ಲೆಯಾಗುವ ಅವಕಾಶವನ್ನು ಹೊಂದಿರುವ ಪುತ್ತೂರು ಕೆಲವೊಂದು ವಿಷಯಗಳಲ್ಲಿ ಮಾತ್ರ ಇನ್ನೂ ಹಿಂದೆ ಉಳಿದಿದೆ. ಪುತ್ತೂರಿಗೆ ಸರಕಾರಿ ಮೆಡಿಕಲ್‌ ಕಾಲೇಜು ಮಂಜೂರಾಗಬೇಕೆಂಬುದು ಹಲವು ವರ್ಷಗಳ ಬೇಡಿಕೆ. ಇದಕ್ಕೆ ಪೂರ್ವಭಾವಿಯಾಗಿ ತಾಲೂಕು ಆಸ್ಪತ್ರೆ 100 ಬೆಡ್‌ನಿಂದ 300 ಬೆಡ್‌ಗೆ ಅಭಿವೃದ್ಧಿಗೊಳ್ಳಬೇಕು. ಈ ಬಗ್ಗೆ ಪ್ರಸ್ತಾವನೆಯು ಸರಕಾರದ ಹಂತಕ್ಕೆ ತಲುಪಿ 10 ವರ್ಷಗಳು ಕಳೆದರೂ ಅನುಮೋದನೆ ಮಾತ್ರ ಸಿಕ್ಕಿಲ್ಲ!

Advertisement

ಮಂಡಲ ಉಸ್ತುವಾರಿಯಲ್ಲಿ ಪುತ್ತೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂಚಾರಿ ಆಸ್ಪತ್ರೆ 1928ರಲ್ಲಿ 25 ಬೆಡ್‌ಗಳ ಸರಕಾರಿ ಆಸ್ಪತ್ರೆಯಾಗಿ ಕಾರ್ಯ ಆರಂಭಿಸಿತ್ತು. 1942ರಲ್ಲಿ 33 ಬೆಡ್‌ ಗಳಿಗೆ ವಿಸ್ತರಣೆಯಾಯಿತು. 1950ರಲ್ಲಿ 20 ಹಾಸಿಗೆಗಳನ್ನು ಕಲ್ಪಿಸಿ 53 ಬೆಡ್‌ಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಲಾಯಿತು. 2000ನೇ ಇಸವಿಯಲ್ಲಿ 100 ಬೆಡ್‌ಗಳ ಆಸ್ಪತ್ರೆಯಾಗಿ ಮತ್ತೆ ಮೇಲ್ದರ್ಜೆಗೆ ಏರಿತ್ತು. ಅನಂತರದಲ್ಲಿ ರೋಗಿಗಳ ಸಂಖ್ಯೆ ವಿಪರೀತ ಏರಿಕೆಯಾಗಿದ್ದರೂ ವ್ಯವಸ್ಥೆಗಳಲ್ಲಿ ನಿರೀಕ್ಷಿತ ಪ್ರಗತಿಯಾಗಿಲ್ಲ.

ಅರ್ಹತೆ, ಅಗತ್ಯತೆ ಆಧಾರದಲ್ಲೇ ಬೇಡಿಕೆಗೆ ದಶ ವರ್ಷ ಸಂದಿದೆ. ತಾಲೂಕು ಆಸ್ಪತ್ರೆ ಮೇಲ್ದರ್ಜೆಗೆ ಏರಬೇಕು ಎಂಬ ಬಗ್ಗೆ ಈಗ ಹೋರಾಟ ಆರಂಭವಾಗಿದೆ. ನಾಲ್ಕಾರು ಬಾರಿ ನೀಲ ನಕಾಶೆ ತಯಾರಿಸಿದ್ದು, 180 ಕೋ.ರೂ.ಪ್ರಸ್ತಾವನೆಯೀಗ 250 ಕೋ.ರೂ.ಗೆ ಹೆಚ್ಚಳವಾಗಿದೆ. ಜತೆಗೆ ಸರಕಾರಿ ಆಸ್ಪತ್ರೆಗೆ ಹಳೆ ಸಬ್‌ ರಿಜಿಸ್ಟ್ರಾರ್‌ ಕಚೇರಿ ಜಾಗವನ್ನು ಆಸ್ಪತ್ರೆಗೆ ಸೇರ್ಪಡೆಗೊಳಿಸಲಾಗಿದೆ. ಹೀಗಾಗಿ ಬಹು ಅಪೇಕ್ಷಿತ ಬೇಡಿಕೆಗೆ ಮನ್ನಣೆ ಸಿಗಬೇಕು ಅನ್ನುವುದು ಪುತ್ತೂರಿಗರ ಹಕ್ಕೋತ್ತಾಯ.

ಶಕುಂತಳಾ ಟಿ. ಶೆಟ್ಟಿ, ಸಂಜೀವ ಮಠಂದೂರು ಅವಧಿಯಲ್ಲಿ ಇದಕ್ಕಾಗಿ ಪ್ರಯತ್ನ ನಡೆದಿವೆ. ಆದರೆ ಫಲಪ್ರದವಾಗಿಲ್ಲ. ಅಚ್ಚರಿ ಸಂಗತಿ ಅಂದರೆ, ಶಕುಂತಳಾ ಶೆಟ್ಟಿ ಶಾಸಕರಾಗಿದ್ದ ಅವಧಿಯಲ್ಲಿ ಅವರದ್ದೇ ಪಕ್ಷದ ಸರಕಾರ ಇತ್ತು. ಸಂಜೀವ ಮಠಂದೂರು ಅವಧಿಯಲ್ಲಿಯೂ ಅವರದ್ದೇ ಪಕ್ಷದ ಸರಕಾರ ಇದೆ. ಆದರೂ ಪ್ರಸ್ತಾವನೆಯ ಕಡತ ಸರಕಾರದ ಹಂತದಲ್ಲಿಯೇ ಬಾಕಿ ಆಗಿದೆ.

ಕೇಂದ್ರ ಸ್ಥಾನ
ಕೇರಳದ ಗಡಿ, ಸುಳ್ಯ, ಬಂಟ್ವಾಳ, ಬೆಳ್ತಂಗಡಿ, ಕಡಬ, ವಿಟ್ಲ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಪುತ್ತೂರು ತಾಲೂಕು ಮಾಣಿ- ಮೈಸೂರು, ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೂಲಕ ರಾಜಧಾನಿಗೆ ಸಂಪರ್ಕ ಕಲ್ಪಿಸುತ್ತಿದೆ. ತನ್ನ ಗಡಿ ವ್ಯಾಪ್ತಿಯ ನಾಲ್ಕು ತಾಲೂಕುಗಳಿಗೆ ಕೇಂದ್ರ ಸ್ಥಾನವಾಗಲು ಅರ್ಹತೆ ಹೊಂದಿದೆ. ಹೀಗಾಗಿ ತಾಲೂಕು ಆಸ್ಪತ್ರೆಗೆ ದಿನಂಪ್ರತಿ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಜತೆಗೆ ಮೆಡಿಕಲ್‌ ಕಾಲೇಜಿನ ಬೇಡಿಕೆಯು ಇದೆ. ಅವೆಲ್ಲದಕ್ಕಿಂತ ಪೂರಕವಾಗಿ ಗ್ರಾಮಾಂತರ ಜಿಲ್ಲಾ ಕೇಂದ್ರ ಸ್ಥಾಪನೆಯ ಬೇಡಿಕೆಯು ಇದೆ. ಈ ಮೂರು ಕೂಡ ಒಂದನ್ನೊಂದು ಅವಲಂಬಿಸಿದೆ.

Advertisement

ಅನುಕೂಲ ಏಕೆ
ಮಡಿಕೇರಿ ಗಡಿಭಾಗದಿಂದ ಬಂಟ್ವಾಳ ಗಡಿ ತನಕ ಸುಸಜ್ಜಿತ ಸರಕಾರಿ ಆಸ್ಪತ್ರೆ ಇಲ್ಲ. ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ಈ ಮೂರು ತಾಲೂಕಿನ ಜನರು ತುರ್ತು ಸಂದರ್ಭದಲ್ಲಿ ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಯನ್ನು ಸಂಪರ್ಕಿಸುವ ಅನಿವಾರ್ಯ ಇದೆ. 100 ಬೆಡ್‌ ಸೌಲಭ್ಯ ಹೊಂದಿರುವ ಪುತ್ತೂರು ಆಸ್ಪತ್ರೆಯನ್ನು 300 ಬೆಡ್‌ಗೆ ಏರಿಸಿದರೆ ಕಾಸರಗೋಡು, ಕೊಡಗು, ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ ತಾಲೂಕಿನವರಿಗೆ ಹೆಚ್ಚು ಪ್ರಯೋಜನ. ಜತೆಗೆ ಈ ಭಾಗದ ಜನರು ವೆನ್ಲಾಕ್‌ ಆಸ್ಪತ್ರೆಯನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಇಲ್ಲ.

ಜಿಲ್ಲೆಯ ಎರಡನೆ ಮಹಿಳಾ ಠಾಣೆ, ಪುತ್ತೂರು ಸುಳ್ಯ, ಕಡಬ, ಬೆಳ್ತಂಗಡಿ, ಬಂಟ್ವಾಳವನ್ನು ಒಳಗೊಂಡ ಸಹಾಯಕ ಆಯುಕ್ತರ ಉಪವಿಭಾಗ ಕಚೇರಿ, ಮೂರು ತಾಲೂಕು ವ್ಯಾಪ್ತಿಗೆ ಸೇರಿರುವ ಆರ್‌ಟಿಒ ಕಚೇರಿ, ಪ್ರಾಥಮಿಕ ಶಿಕ್ಷಣದಿಂದ ಎಂಜಿನಿಯರ್‌ ತನಕ ವ್ಯಾಸಾಂಗದ ಶಿಕ್ಷಣ ಸಂಸ್ಥೆಗಳು ಇಲ್ಲಿವೆ. ಸಾಧಾರಣವಾಗಿ ದಿನವೊಂದಕ್ಕೆ 20 ಸಾವಿರಕ್ಕೂ ಅಧಿಕ ಮಂದಿ ವಿವಿಧ ವ್ಯವಹಾರಗಳಿಗಾಗಿ ಪುತ್ತೂರು ನಗರಕ್ಕೆ ಪ್ರವೇಶಿಸುತ್ತಾರೆ. ಕಾಸರಗೋಡು, ಕೊಡಗು ಜಿಲ್ಲೆಯಿಂದಲೂ ವಾಣಿಜ್ಯ, ಶಿಕ್ಷಣ, ವೈದ್ಯಕೀಯ ನೆಲೆಯಲ್ಲಿ ಪುತ್ತೂರನ್ನು ಆಶ್ರಯಿಸುವವರ ಸಂಖ್ಯೆ ಗರಿಷ್ಠ ಪ್ರಮಾಣದಲ್ಲಿದೆ.

*ಕಿರಣ್‌ ಪ್ರಸಾದ್‌ ಕುಂಡಡ್ಕ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next