Advertisement

ಬಿಜೆಪಿಯವರು ಮೊದಲು ಸಿಎಜಿ ವರದಿ ಅಧ್ಯಯನ ಮಾಡಲಿ

06:00 AM Dec 09, 2018 | Team Udayavani |

ಬೆಂಗಳೂರು: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ 35 ಸಾವಿರ ಕೋಟಿ ರೂ. ಹಣ ದುರುಪಯೋಗವಾಗಿದೆ ಎಂದು ಬಿಜೆಪಿಯವರು ಆರೋಪ ಮಾಡುವ ಮುನ್ನ ಅಧ್ಯಯನ ಮಾಡಬೇಕಿತ್ತು ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ವಿಧಾನಪರಿಷತ್‌ ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌ ಹೇಳಿದ್ದಾರೆ.

Advertisement

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದಲ್ಲಿ ಯಾವುದೇ ಹಣ ದುರುಪಯೋಗವಾದರೂ ಅದರ ಅಧ್ಯಯನಕ್ಕೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಇದೆ. ಬಿಜೆಪಿಯ ಆರ್‌.ಅಶೋಕ್‌ ಅವರೇ ಆ ಸಮಿತಿ ಅಧ್ಯಕ್ಷರಾಗಿದ್ದಾರೆ. ಆದರೂ ಮತ್ತೂಂದು ಸದನ ಸಮಿತಿ ರಚನೆಗೆ ಬಿಜೆಪಿ ನಾಯಕರು ಆಗ್ರಹಿಸುವ ಮೂಲಕ ಅಶೋಕ್‌ ಅವರ ಸಾಮರ್ಥ್ಯ ಅನುಮಾನಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಸಿಎಜಿ ವರದಿ ಆಧರಿಸಿ ಪುಸ್ತಕ ಬಿಡುಗಡೆ ಮಾಡಿ ರಾಜಕೀಯ ಲಾಭ ಮಾಡಿಕೊಳ್ಳಲು ಬಿಜೆಪಿಯವರು ಮುಂದಾಗಿದ್ದಾರೆ. ಆದರೆ, ಅವರ ಮಾತುಗಳು ಬಾಲಿಶತನದ್ದು . ಕನಿಷ್ಠ ಆಡಳಿತದ ಅನುಭವ ಇರುವ ಯಡಿಯೂರಪ್ಪ, ಜಗದೀಶ್‌ ಶೆಟ್ಟರ್‌ ಅವರ ಜತೆಯಲ್ಲಾದರೂ ಮಾತುಕತೆ ನಡೆಸಬೇಕಿತ್ತು. ಇದ್ಯಾವುದೂ ಮಾಡದೆ ಅನನುಭವಿಗಳಂತೆ ಸಿ.ಟಿ.ರವಿ ಅವರಂತಹ ನಾಯಕರು ಮಾತನಾಡುತ್ತಾರೆ ಎಂದರೆ ಹೇಗೆ ಎಂದು ಪ್ರಶ್ನಿಸಿದರು.

ಪ್ರತಿ ವರ್ಷ ಆಡಳಿತ ವ್ಯವಸ್ಥೆಯಲ್ಲಿ  ಕೆಲವು ಹೊಂದಾಣಿಕೆಗಳು ನಡೆಯುತ್ತವೆ. ಖರ್ಚು, ವೆಚ್ಚಕ್ಕೆ ಅನುಪಾಲನಾ ವರದಿಯನ್ನು ನೀಡುವುದು ವಿಳಂಬವಾಗುತ್ತದೆ. 2001ರಿಂದಲೂ ಈ ರೀತಿ ಬಹಳಷ್ಟು ಅನುಪಾಲನಾ ವರದಿಗಳು ಸಲ್ಲಿಕೆಯಾಗಿಲ್ಲ. ಅದರಲ್ಲೂ ಬಿಜೆಪಿ ಆಡಳಿತದ್ದ ಅವಧಿಯಲ್ಲಿಯೇ ಹೆಚ್ಚು ವರದಿಗಳು ಸಲ್ಲಿಕೆಯಾಗಿಲ್ಲ. ಇನ್ನು ಲೆಕ್ಕ ಹೊಂದಾಣಿಕೆಯಾಗದ ಸಾಕಷ್ಟು ವಿಷಯಗಳು ಪ್ರತಿ ವರ್ಷವೂ ಇದ್ದೇ ಇರುತ್ತದೆ. ಬಿಜೆಪಿ ಸರ್ಕಾರದಲ್ಲಿ ಯಡಿಯೂರಪ್ಪ, ಸದಾನಂದಗೌಡ, ಜಗದೀಶ್‌ ಶೆಟ್ಟರ್‌ ಅವರು ಮುಖ್ಯಮಂತ್ರಿಯಾಗಿದ್ದಾಗ ಸರಾಸರಿ ಶೇ.42ರಷ್ಟು ಖರ್ಚು, ವೆಚ್ಚಗಳ ಲೆಕ್ಕ ಹೊಂದಾಣಿಕೆಯಾಗಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ಮೇಲೆ ಅದರ ಪ್ರಮಾಣ ಶೇ.19ರಷ್ಟಾಗಿದೆ ಎಂದು ತಿರುಗೇಟು ನೀಡಿದರು.

ಖರ್ಚು ಮಾಡಿದ ವೆಚ್ಚಗಳ ಬಗ್ಗೆ ಅಧಿಕಾರಿಗಳು ಆಯಾ ಹಣಕಾಸಿನ ವರ್ಷದಲ್ಲೇ ವರದಿ ಸಲ್ಲಿಸದೇ ಇರುವುದರಿಂದ  ಈ ರೀತಿಯ ವ್ಯತ್ಯಾಸಗಳಾಗಿರುತ್ತವೆ. ಅದು ಯಾವುದೇ ಹಗರಣ, ಭ್ರಷ್ಟಾಚಾರವೂ ಅಲ್ಲ. ಆರೋಪ ಮಾಡಿರುವ ಬಿಜೆಪಿ ಶಾಸಕರಿಗೆ ಈ ಬಗ್ಗೆ ಸರಿಯಾದ ಮಾತಿ ಇಲ್ಲ ಎಂದರು.

Advertisement

ಈ ರೀತಿಯ ಆರ್ಥಿಕ ವ್ಯತ್ಯಯಗಳ ಬಗ್ಗೆ ಅಧ್ಯಯನ ಮಾಡಲು ವಿಧಾನಮಂಡಲದ 20  ಶಾಸಕರಿರುವ ಲೆಕ್ಕ ಪತ್ರ ಸಮಿತಿ ರಚಿಸಲಾಗುತ್ತದೆ. ಎಲ್ಲ ಪಕ್ಷದ ಸದಸ್ಯರು ಇರುತ್ತಾರೆ. ಪ್ರಮುಖವಾಗಿ  ವಿರೋಧ ಪಕ್ಷದ ನಾಯಕರೇ ಅಧ್ಯಕ್ಷರಾಗಿರುತ್ತಾರೆ.ಆ ಸಮಿತಿಯು ಸಭೆಗಳಲ್ಲಿ ಆರ್ಥಿಕ ವ್ಯತ್ಯಾಸಗಳ ಬಗ್ಗೆ ಅಧ್ಯಯನ ಮಾಡಬಹುದು. ತಪ್ಪುಗಳು ಆಗಿದ್ದರೆ  ಸರ್ಕಾರಕ್ಕೆ ತಪ್ಪಿತಸ್ಥರ ರುದ್ದ ಕ್ರಮ ಕೈಗೊಳ್ಳಲು ಶಿಫಾರಸು ಮಾಡಬಹುದು. ಅದು ಬಿಟ್ಟು ಬಿಜೆಪಿಯವರು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುವುದು ಸರಿಯಲ್ಲ ಎಂದು ಹೇಳಿದರು.

ಪ್ರಧಾನಿ ಸ್ಥಾನದ ಘನತೆಗೆ ಕುಂದು
*ಚುನಾವಣಾ ಪ್ರಚಾರದ ಸಭೆಯಲ್ಲಿ ಪ್ರಧಾನಿ ಮೋದಿ ಸೋನಿಯಾ ಗಾಂಧಿ ಅವರನ್ನು ವಿಧವೆ ಎಂದು ಪರೋಕ್ಷವಾಗಿ ಲೇವಡಿ ಮಾಡಿ ತಮ್ಮ ಘನತೆಗೆ ಕುಂದು ತಂದಿದ್ದಾರೆ . ಸೋನಿಯಾ ಗಾಂಧಿ ಅವರು ವಿಧವೆಯಾಗಿದ್ದು ಯಾಕೆ ಎಂದು ದೇಶಕ್ಕೆ ಗೋತ್ತಿದೆ. ದೇಶಕ್ಕಾಗಿ ಯಾವುದೇ ಬಲಿದಾನ ಮಾಡದ ಮೋದಿ ಅವರು ಹಗುರವಾಗಿ ಮಾತನಾಡಿ ದೇಶದ ಮಳೆಯರಿಗೆ ಅಪಮಾನ ಮಾಡಿದ್ದಾರೆ.
– ರಿಜ್ವಾನ್‌ ಅರ್ಷದ್‌, ವಿಧಾನಪರಿಷತ್‌ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next