ಕನ್ನಡದಲ್ಲೂ ಬ್ಯಾಂಕ್ ಪರೀಕ್ಷೆಗೆ ಅವಕಾಶ ಕೊಡಿ
Team Udayavani, Jun 28, 2019, 5:03 AM IST
ನವದೆಹಲಿ: ಬ್ಯಾಂಕ್ ಪರೀಕ್ಷೆಗಳನ್ನು ಕನ್ನಡದಲ್ಲೂ ಬರೆಯಲು ಅವಕಾಶ ನೀಡಬೇಕೆಂದು ರಾಜ್ಯಸಭೆಯಲ್ಲಿ ಜಿ.ಸಿ ಚಂದ್ರಶೇಖರ್ ಆಗ್ರಹಿಸಿದರು.
ಬ್ಯಾಂಕ್ ಪರೀಕ್ಷೆಗಳು ಸೇರಿ ಹಲವು ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಸದ್ಯ ಅವಕಾಶವಿಲ್ಲ. ಕನ್ನಡ ಭಾಷೆಯ ಆಯ್ಕೆ ಇಲ್ಲದ್ದರಿಂದ ಉದ್ಯೋಗ ಪಡೆಯುವಲ್ಲಿ ಕನ್ನಡಿಗರು ಸಮಸ್ಯೆ ಎದುರಿಸುವಂತಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವೆ ನಿರ್ಮಲಾ ಸೀತಾ ರಾಮನ್, ಈ ವಿಚಾರವನ್ನು ಪರಿಶೀಲಿಸಲಾಗುತ್ತದೆ ಎಂದರು.
ಈ ಮಧ್ಯೆ, ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಕಳುಹಿಸಿದ ಪ್ರತ್ಯೇಕ ಧ್ವಜದ ಪ್ರಸ್ತಾವನೆ ಯನ್ನೂ ಚಂದ್ರಶೇಖರ್ ಪ್ರಸ್ತಾಪಿಸಿದರು. ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಾಕಿ ಇಡಲಾಗಿದೆ ಎಂದು ಗೃಹ ಸಚಿವಾಲಯ ಹೇಳಿದೆ. ಆದರೆ, ಚುನಾವಣೆ ಮುಗಿದ ನಂತರವೂ ಈ ಬಗ್ಗೆ ನಿರ್ಧಾರ ಕೈಗೊಂಡಿಲ್ಲ ಎಂದರು. ಅಷ್ಟೇ ಅಲ್ಲ, ಕನ್ನಡ ಧ್ವಜದ ಬಗ್ಗೆ ರಾಜ್ಯಸಭೆಯಲ್ಲಿ ಕನ್ನಡದಲ್ಲೇ ಮಾತನಾಡಿ ಗಮನ ಸೆಳೆದರು.