Advertisement

ಬೆಳೆ ನಷ್ಟಕ್ಕೀಡಾಗಿರುವ ರೈತರ ಸಂಕಷ್ಟಕ್ಕೆ ಅಧಿಕಾರಿಗಳು ಸ್ಪಂದಿಸಲಿ

11:21 PM Sep 14, 2022 | Team Udayavani |

ಈ ಬಾರಿಯ ಮಳೆಗಾಲ ದೇಶದ ರೈತನ ಬೆನ್ನೆಲುಬು ಮುರಿದಿದೆ ಎಂದು ಹೇಳುವುದಕ್ಕೆ ಯಾವುದೇ ಅಡ್ಡಿ ಇಲ್ಲ. ಸತತ ಮಳೆ, ಪ್ರವಾಹದಿಂದಾಗಿ ರೈತ ಬೆಳೆದಿದ್ದ ಬಹುತೇಕ ಬೆಳೆಗಳು ಹಾಳಾಗಿವೆ. ಸಾಲಸೋಲ ಮಾಡಿ ಬೆಳೆದಿದ್ದ ರೈತ ಮುಂದೇನು ? ಎಂದು ಯೋಚನೆ ಮಾಡುತ್ತಾ ಕುಳಿತಿದ್ದಾನೆ. ಇಂಥ ಸಂಕಷ್ಟದ ಕಾಲದಲ್ಲಿ ರೈತನ ಜತೆ ನಿಂತುಕೊಳ್ಳಬೇಕಾಗಿರುವುದು ಎಲ್ಲರ ಕರ್ತವ್ಯ.

Advertisement

ಈ ಬಾರಿಯ ಮಳೆಗಾಲ ಮತ್ತು ಬೆಳೆನಷ್ಟದ ಕುರಿತಂತೆ ಉದಯವಾಣಿ ರಿಯಾಲಿಟಿ ಚೆಕ್‌ ನಡೆಸಿದ್ದು, ಭಾರೀ ಪ್ರಮಾಣದ ಹಾನಿಯಾಗಿರುವುದು ಕಂಡು ಬಂದಿದೆ.

ರಾಜ್ಯದಲ್ಲಿಯೇ ಸುಮಾರು ಐದರಿಂದ ಆರು ಸಾವಿರ ಕೋಟಿ ರೂ. ನಷ್ಟವಾಗಿದೆ ಎಂಬುದು ಸದ್ಯದ ಲೆಕ್ಕಾಚಾರ. ಇದರ ನಡುವೆಯೇ ರಾಜ್ಯ ಸರಕಾರ ಸದ್ಯದ ಪರಿಹಾರಕ್ಕಾಗಿ 1,200 ಕೋಟಿ ರೂ. ಬಿಡುಗಡೆ ಮಾಡುವಂತೆ ಮನವಿ ಮಾಡಿದೆ. ಅಷ್ಟೇ ಅಲ್ಲ, ಇತ್ತೀಚೆಗಷ್ಟೇ ಪ್ರವಾಹ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಭೆ ನಡೆಸಿದ್ದು, ಈ ವೇಳೆ ಬೆಳೆ, ಮೂಲಸೌಕರ್ಯ ಸೇರಿ 11 ಸಾವಿರ ಕೋಟಿ ರೂ. ಗಳಿಗೂ ಹೆಚ್ಚು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಇನ್ನು ಮಳೆ ಕೂಡ ರೈತನ ಮೇಲೆ ತನ್ನ ಕಡುಕೋಪ ಪ್ರದರ್ಶಿಸಿದೆ. ಈ ವರ್ಷ ಶೇ.144 ಪಟ್ಟು ಹೆಚ್ಚು ಮಳೆಯಾಗಿದೆ. ಸರಕಾರದ ಅಂಕಿ ಅಂಶದ ಪ್ರಕಾರ, 5.39 ಲಕ್ಷ ಹೆಕ್ಟೇರ್‌ ಕೃಷಿ, ತೋಟಗಾರಿಕೆ ಭೂಮಿ ಮತ್ತು 60 ಸಾವಿರ ಹೆಕ್ಟೇರ್‌ ವಾಣಿಜ್ಯ ಬೆಳೆ ಕೊಚ್ಚಿ ಹೋಗಿದೆ.

ಈಗ ರಾಜ್ಯ ಸರಕಾರ ಮಾಡಬೇಕಾಗಿರುವುದು ಇಷ್ಟೇ. ನಷ್ಟಕ್ಕೀ ಡಾಗಿರುವ ರೈತರ ನೆರವಿಗೆ ಮೊದಲು ಧಾವಿಸಿ ಹೋಗಬೇಕು. ಇನ್ನೂ ಎಷ್ಟು ನಷ್ಟವಾಗಿದೆ ಎಂಬ ಕುರಿತಾಗಿ ಪರಿಶೀಲನೆ, ಅವಲೋಕನದಂಥ ಕೆಲಸಗಳನ್ನು ಮಾಡುತ್ತಾ ಕುಳಿತುಕೊಳ್ಳದೇ ಅನ್ನದಾತರಿಗೆ ಮೊದಲು ನೆರವು ನೀಡಬೇಕು. ಇಲ್ಲದಿದ್ದರೆ ಅವರ ಧೈರ್ಯ ಹುದುಗಿ ಹೋಗುವುದರಲ್ಲಿ ಯಾವುದೇ ಸಂಶಯವಿಲ್ಲ.

Advertisement

ಏಕೆಂದರೆ ಈಗಾಗಲೇ ರಾಜ್ಯ ಸರಕಾರ ರೈತರಿಗೆ ಪರಿಹಾರ ಘೋಷಣೆ ಮಾಡಿದೆ. ಆದರೆ ವಸ್ತುಸ್ಥಿತಿಯಲ್ಲಿ ರೈತರಿಗೆ ಪರಿಹಾರದ ಹಣ ಸಿಕ್ಕಿಲ್ಲ. ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ತುಮಕೂರು, ಬೆಳಗಾವಿ, ಗದಗ, ಕಲಬುರಗಿ, ಬೀದರ್‌ ಸೇರಿ ಬಹುತೇಕ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಪರಿಹಾರದ ಬಗ್ಗೆ ಇನ್ನೂ ಗಮನವನ್ನೇ ನೀಡಿಲ್ಲ ಎಂಬುದು ರಿಯಾಲಿಟಿ ಚೆಕ್‌ನಲ್ಲಿ ಗೊತ್ತಾಗಿದೆ. ಅಲ್ಲದೆ, ಹಲವೆಡೆ ಅಧಿಕಾರಿಗಳು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪಗಳಿವೆ. ಸರಕಾರ ಕೈಗೊಂಡ ಯಾವುದೇ ನಿರ್ಧಾರವನ್ನು ಅನುಷ್ಠಾನಗೊಳಿಸಬೇಕಾದ ಹೊಣೆ ಅಧಿಕಾರಿಗಳದ್ದು, ಮಳೆ ಮತ್ತು ತುರ್ತು ಕಾಮಗಾರಿಗಾಗಿ ಜಿಲ್ಲಾಧಿಕಾರಿಗಳ ಪಿಡಿ ಅಕೌಂಟ್‌ನಲ್ಲಿ 664 ಕೋಟಿ ರೂ. ಹಣವಿದೆ ಎಂದಿದ್ದರೂ ಇದರ ಸಮರ್ಪಕ ಬಳಕೆಯಾಗಿಲ್ಲ ಎಂಬ ಆರೋಪವೂ ಇದೆ. ಆದರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೇ.90 ಮತ್ತು ಕೊಪ್ಪಳದಲ್ಲಿ ಪರಿಹಾರ ವಿತರಣೆ ಸಾಗುತ್ತಿದೆ ಎಂಬುದೇ ಸಮಾಧಾನಕರ ಅಂಶ.

ಈಗ ವಿಧಾನಮಂಡಲ ಅಧಿವೇಶನವೂ ನಡೆಯುತ್ತಿದೆ. ರಾಜ್ಯ ಸರಕಾರ ಮತ್ತು ವಿಪಕ್ಷಗಳು ಸೇರಿ ಈ ಕುರಿತಂತೆ ರಚನಾತ್ಮಕವಾಗಿ ಚರ್ಚೆ ನಡೆಸಬೇಕು. ಕೇವಲ ಬೆಂಗಳೂರು ಪ್ರವಾಹದ ಬಗ್ಗೆ ತಲೆ ಕೆಡಿಸಿಕೊಳ್ಳದೇ ರಾಜ್ಯದ ಇತರ ಭಾಗಗಳತ್ತಲೂ ನೋಡಬೇಕು. ಆದಷ್ಟು ಬೇಗ ರೈತನ ನೆರವಿಗೆ ಹೋದರೆ, ಇದರಿಂದ ಆತನಿಗಾದರೂ ಸಮಾಧಾನವಾದೀತು.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next