ಬೀದರ: ಜನರು ಸಮಸ್ಯೆಗಳನ್ನು ತಮ್ಮ ಗಮನಕ್ಕೆ ತಂದಾಗ ಅಧಿಕಾರಿಗಳು ಕೂಡಲೇ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ಸೂಚಿಸಿದರು.
ಬೀದರ ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಉಡಬಾಳ ಗ್ರಾಮದಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಅನೇಕ ಸಮಸ್ಯೆಗಳಿರುತ್ತವೆ. ಹಳ್ಳಿ ಜನರು ನಿಮ್ಮ ಹತ್ತಿರ ಹೇಳಿಕೊಂಡಾಗ ಕೂಡಲೇ ಆ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡಬೇಕು. ಜನರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕೆಂದು ನಿರ್ದೇಶನ ನೀಡಿದರು.
ಈ ವೇಳೆ ಗ್ರಾಮದ ಅನೇಕರು ಸರ್ಕಾರದಿಂದ ಮನೆ ನಿರ್ಮಿಸಿಕೊಡುವಂತೆ ಶಾಸಕ ಬಂಡೆಪ್ಪ ಖಾಶೆಂಪುರ್ ಅವರಿಗೆ ಮನವಿ ಮಾಡಿದರು. ಕೆಲವರು ವೃದ್ಧಾಪ್ಯ, ವಿಧವಾ ವೇತನಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಶಾಸಕರ ಮುಂದಿಟ್ಟರು. ಇವುಗಳಿಗೆ ಪರಿಹಾರ ಒದಗಿಸಿಕೊಡುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಶಾಸಕರು ತಿಳಿಸಿದರು.
ಗ್ರಾಮಕ್ಕೆ ಹೊಸದೊಂದು ಅಂಗನವಾಡಿ ಕೇಂದ್ರ ಒದಗಿಸಿಕೊಡಬೇಕು. ಸದ್ಯ ಇರುವ ಅಂಗನವಾಡಿ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದ್ದು, ನಿರ್ಮೂಲನೆ ಮಾಡಬೇಕೆಂದು ಗ್ರಾಮಸ್ಥರೊಬ್ಬರು ಶಾಸಕರಿಗೆ ಮನವಿ ಮಾಡಿದರು.
ಕೆಕೆಆರ್‌ಡಿಬಿ ಅಡಿ ಅಂಗನವಾಡಿ ಕೇಂದ್ರ ಮಂಜೂರು ಮಾಡುವ ಭರವಸೆ ನೀಡಿದರು. ಉಡಬಾಳವಾಡಿಯ ಶಾಲೆಯಲ್ಲಿ ಶಿಕ್ಷಕರ ಕೊರತೆಯಿದೆ. ಆ ಶಾಲೆಗೆ ಹೆಚ್ಚಿನ ಶಿಕ್ಷಕರನ್ನು ನೀಡಬೇಕು. ಶಿಕ್ಷಕರ ಕೊರತೆ ನಿವಾರಣೆಗಾಗಿ ನಾವು ಈಗಾಗಲೇ ಬಿಇಒ, ಡಿಡಿಪಿಐಗಳಿಗೆ ಮನವಿ ಮಾಡಿದ್ದೇವೆ. ಆದರೆ, ಅವರಿಂದ ಇದುವರೆಗೂ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಸಮಸ್ಯೆಯಾಗುತ್ತಿದೆ. ಶಿಕ್ಷಕರನ್ನು ಒದಗಿಸಿಕೊಡಬೇಕೆಂದು ಸ್ಥಳೀಯರು ಶಾಸಕರ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ಖಾಶೆಂಪುರ್, ಮಕ್ಕಳ ಕಲಿಕೆಗೆ ತೊಂದರೆಯಾಗದಂತೆ ಶಿಕ್ಷಣ ಇಲಾಖೆ ಕ್ರಮ ವಹಿಸಬೇಕೆಂದರು.
ಗ್ರಾಮದಲ್ಲಿ ವಿದ್ಯುತ್ ಪರಿವರ್ತಕ (ಟಿಸಿ) ಸಮಸ್ಯೆಯಿದೆ ಎಂದು ಗ್ರಾಮಸ್ಥರು ಶಾಸಕರ ಮುಂದೆ ಅಳಲು ತೊಡಿಕೊಂಡರು. ಕೂಡಲೇ ಸಮಸ್ಯೆಗೆ ಪರಿಹಾರ ಒದಗಿಸಿಕೊಡುವಂತೆ ಶಾಸಕ ಬಂಡೆಪ್ಪ ಖಾಶೆಂಪುರ್ ಅವರು ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ರೈತರ ಜಮೀನುಗಳಿಗೆ ಹೋಗುವ ರಸ್ತೆಗಳು, ಗ್ರಾಮದಲ್ಲಿರುವ ಸಿಸಿ ರಸ್ತೆಗಳು, ಚರಂಡಿ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದರು. ಹಂತ-ಹಂತವಾಗಿ ಪರಿಹಾರ ಒದಗಿಸಿಕೊಡುವ ಭರವಸೆಯನ್ನು ಶಾಸಕರು ನೀಡಿದರು.
ಚಿಟಗುಪ್ಪ ತಾಪಂ ಇಒ ವೆಂಕಟ ಶಿಂಧೆ, ತಹಶೀಲ್ದಾರ್ ರವೀಂದ್ರ ದಾಮಾ, ಗ್ರಾಪಂ ಅಧ್ಯಕ್ಷ ನರಸರಡ್ಡಿ ಇದ್ದಾರಡ್ಡಿ, ಉಪಾಧ್ಯಕ್ಷೆ ಜಗದೇವಿ ಮಾಳಗೆ, ಸಂಧ್ಯಾರಾಣಿ, ಮಾಣಿಕರಾವ್, ಶಶಿಕಾಂತ್ ಇದ್ದರು.