Advertisement

ರಾಜಕೀಯ ಆರೋಪಗಳು ಎಲ್ಲೆ ಮೀರದಿರಲಿ

12:25 AM Sep 22, 2022 | Team Udayavani |

ರಾಜ್ಯ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಇರುವಾಗಲೇ ರಾಜಕೀಯ ಪಕ್ಷಗಳ ನಡುವಿನ ವಾಕ್ಸಮರ ತಾರಕಕ್ಕೆ ಏರುತ್ತಿದೆ. ಪ್ರಜಾಪ್ರಭುತ್ವದಲ್ಲಿ ಇದು ಸಹಜ ಕೂಡ. ಆದರೆ ಬುಧವಾರ ನಡೆದಿರುವ ಪೋಸ್ಟರ್‌ ರಾಜಕೀಯ ಮಾತ್ರ ಯಾವುದೇ ಪ್ರಜಾಪ್ರಭುತ್ವವಾದಿಗಳು ಒಪ್ಪುವಂಥದ್ದಲ್ಲ. ರಾಜಕೀಯ ಹೋರಾಟ ಏನೇ ಇರಲಿ ವೈಯಕ್ತಿಕ ಮಟ್ಟಕ್ಕೆ ಇಳಿದು ಪೋಸ್ಟರ್‌ ಅಂಟಿಸುವ ಮಟ್ಟಕ್ಕೆ ಇಳಿಯುವುದು ಉತ್ತಮ ಬೆಳವಣಿಗೆಯಲ್ಲ. ಅದು ಆಡಳಿತ ಪಕ್ಷವಾಗಲಿ ಅಥವಾ ವಿಪಕ್ಷವಾಗಲಿ. ಯಾರಿಗೂ ಶೋಭೆ ತರದು.

Advertisement

ಸರಕಾರದ ವೈಫ‌ಲ್ಯ ಅಥವಾ ಆಕ್ರಮ ಆರೋಪ, ಹಗರಣಗಳ ಬಗ್ಗೆ ಚರ್ಚಿಸಲು ಹಾಗೂ ಆರೋಪ ಮಾಡಲು ವೇದಿಕೆ ಇದ್ದೇ ಇದೆ. ವಿಧಾನಮಂಡಲ ಅಧಿವೇಶನದಲ್ಲಿ ಪ್ರಸ್ತಾವಿಸುವ ಅವಕಾಶವೂ ಇದೆ. ಅದು ಆಗುತ್ತಿದೆ ಸಹ. ಇಷ್ಟಾದರೂ ಮುಖ್ಯಮಂತ್ರಿ ಫೋಟೋ ಹಾಕಿ ಪೇ ಸಿಎಂ ಎಂದು ಪೋಸ್ಟರ್‌ ಅಂಟಿಸುವುದು. ಇದಕ್ಕೆ ಪ್ರತಿಯಾಗಿ ತಿರುಗೇಟು ಎಂಬಂತೆ ಬಿಜೆಪಿ ರಿಡೂ ಸಿದ್ದರಾಮಯ್ಯ, ಇಡಿ ಡಿಕೆಶಿ, ಬರ್ನಲ್‌ ಬ್ರದರ್ಸ್‌ ಎಂಬ ಶೀರ್ಷಿಕೆಯಡಿ ಪೋಸ್ಟರ್‌ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿರು ವುದು ಯಾವುದೂ ಸಮರ್ಥನೀಯ ಅಲ್ಲವೇ ಅಲ್ಲ.
ರಾಷ್ಟ್ರ ಮಟ್ಟದಲ್ಲಿ ಕರ್ನಾಟಕದ ರಾಜಕಾರಣಕ್ಕೆ ಒಂದು ಘನತೆ ಇದೆ. ಅದಕ್ಕೆ ಕುತ್ತು ತರುವ ಯಾವುದೇ ಕ್ರಮ, ಪ್ರಯತ್ನ, ಪ್ರಚೋದನ ಕಾರ್ಯಗಳು ಸರಿಯಲ್ಲ. ಆಯಾ ಪಕ್ಷದ ನಾಯಕರು ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು. ಇವೆಲ್ಲವೂ ಒಂದು ಅರ್ಥದಲ್ಲಿ ನಮ್ಮ ರಾಜ್ಯದ ಮಾನ ಮರ್ಯಾದೆ ಹರಾಜು ಹಾಕುವಂಥದ್ದು. ಇತ್ತೀಚೆಗೆ ನಮ್ಮ ಮುಖ್ಯಮಂತ್ರಿಗಳು ತೆಲಂಗಾಣಕ್ಕೆ ಹೋಗಿದ್ದಾಗ ಅಲ್ಲಿ 40 ಪರ್ಸೆಂಟ್‌ ಸಿಎಂಗೆ ಸ್ವಾಗತ ಎಂದು ಪೋಸ್ಟರ್‌ ಅಂಟಿಸಿದ್ದು ಖಂಡನೀಯ. ಇಂತಹ ಕೃತ್ಯ ಅಥವಾ ಪ್ರಯತ್ನಗಳಿಗೆ ಯಾರೂ ಬೆಂಬಲ ನೀಡಬಾರದು.

ಮುಖ್ಯಮಂತ್ರಿ ಎಂದರೆ ಪಕ್ಷಾತೀತವಾಗಿ ಅವರು ರಾಜ್ಯಕ್ಕೆ ಮುಖ್ಯಮಂತ್ರಿ. ಆ ಸ್ಥಾನದ ಘನತೆ ಹಾಗೂ ಗೌರವ ಕಾಪಾಡುವುದು ರಾಜ್ಯದ ಪ್ರತಿಯೊಬ್ಬರ ಕರ್ತವ್ಯ. ಅದಕ್ಕೆ ಚ್ಯುತಿ ತರುವ ಪ್ರಯತ್ನಗಳು ನಡೆದಾಗ ಕಡಿವಾಣ ಹಾಕಬೇಕು. ನಿಯಂತ್ರಣ ಮಾಡಬೇಕು. ಅದು ಬಿಟ್ಟು ಹಾಗೆಯೇ ಬಿಟ್ಟರೆ ನಾಳೆ ಮತ್ತೊಂದು ರೀತಿಯ ಅಭಿಯಾನ ಆರಂಭವಾಗುತ್ತದೆ. ಏಟಿಗೆ ಎದಿರೇಟು, ಕ್ರಮಕ್ಕೆ ಪ್ರತಿ ಕ್ರಮ, ಸೇಡಿಗೆ ಪ್ರತಿ ಸೇಡು ಎಂದು ಮುಂದುವರಿದರೆ ಅದಕ್ಕೆ ಅಂತ್ಯವೇ ಇರುವುದಿಲ್ಲ. ಯಾವುದೇ ಒಂದು ಕ್ರಮವೂ ಎಲ್ಲೆ ಮೀರಬಾರದು.

ಇಡೀ ದೇಶದಲ್ಲಿ ಕರ್ನಾಟಕದ ರಾಜಕಾರಣ ಹಾಗೂ ಇಲ್ಲಿನ ನಾಯಕರ ಬಗ್ಗೆ ಅತ್ಯಂತ ದೊಡ್ಡ ಮಟ್ಟದ ಗೌರವ ಇದೆ. ನಮ್ಮ ರಾಜ್ಯದ ರಾಜಕಾರಣಿಗಳು ಇತರರಿಗೆ ಮಾದರಿಯಾಗಿದ್ದಾರೆ. ಹೀಗಿರುವಾಗ ಪೋಸ್ಟರ್‌ ಅಂಟಿಸುವ ಕೀಳು ಅಭಿರುಚಿಯ ಅಭಿಯಾನ ನಡೆಸುವುದು ಸಾಧುವಲ್ಲ. ರಾಜ್ಯದ ಎಲ್ಲ ಪಕ್ಷಗಳ ನಾಯಕರು ಈ ಬಗ್ಗೆ ಯೋಚಿಸಬೇಕು. ಇಂತಹ ಕೃತ್ಯಗಳಿಗೆ ಬೆಂಬಲ ಕೊಡುವ ಹಾಗೂ ಪ್ರಚೋದನಾತ್ಮಕವಾಗಿ, ವೈಯಕ್ತಿಕವಾಗಿ ಟೀಕೆ ಮಾಡುವ ಮಟ್ಟಕ್ಕೆ ಇಳಿಯಬಾರದು.

ರಾಜಕೀಯ ಹೋರಾಟ, ರಾಜಕೀಯ ಆರೋಪಗಳು ಒಂದು ಚೌಕಟ್ಟಿನಲ್ಲಿಯೇ ಇರಬೇಕು. ಇಲ್ಲವಾದರೆ ಮುಂದಿನ ಪೀಳಿಗೆಗೆ ನಾವು ಬಿಟ್ಟುಹೋಗುವ ಆದರ್ಶವಾದರೂ ಎಂತಹುದು. ಇದು ಎಲ್ಲ ರಾಜಕೀಯ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಮಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next