Advertisement
ವಾಸ್ತವದಲ್ಲಿ ಪರಿಸ್ಥಿತಿಯಲ್ಲಿ ಅಷ್ಟೇನೂ ಬದಲಾವಣೆ ಅಥವಾ ಜನರ ಮನಃಸ್ಥಿತಿಯಲ್ಲಿ ಸ್ವಚ್ಛತೆಯ ಅರಿವಾಗಲೀ, ಪರಿಸರ ಮಾಲಿನ್ಯದ ಬಗೆಗೆ ಜಾಗೃತಿಯಾಗಲೀ ಮೂಡಿದಂತೆ ಕಾಣು ತ್ತಿಲ್ಲ. ಸ್ವಚ್ಛತಾ ಅಭಿಯಾನ ಆರಂಭಗೊಳ್ಳುವ ಮೊದಲು ನಮ್ಮ ಸುತ್ತಮುತ್ತಲಿನ ಪರಿಸರ ಹೇಗೆ ಕಸದ ರಾಶಿಯಿಂದ ತುಂಬಿತ್ತೋ ಈಗ ಅದಕ್ಕಿಂತ ಭಯಾನಕ ಪ್ರಮಾಣದಲ್ಲಿ ಹೆಚ್ಚಿದೆ. ರಸ್ತೆಯುದ್ದಕ್ಕೂ ಪ್ಲಾಸ್ಟಿಕ್ ಹಾಗೂ ಇನ್ನಿತರ ಕಸ, ತ್ಯಾಜ್ಯಗಳು ಹರಡಿ ಬಿದ್ದಿವೆ. ರಸ್ತೆಯ ಇಕ್ಕೆಲಗಳನ್ನು ನೋಡುವಾಗ ಹೃದಯಕ್ಕೆ ಮುಳ್ಳು ಚುಚ್ಚಿದಂತಾಗುತ್ತಿದೆ. ಇದಕ್ಕೆ ನಾವು ವ್ಯವಸ್ಥೆಯನ್ನು ದೂರುವುದರಲ್ಲಿ ಎಳ್ಳಷ್ಟೂ ಅರ್ಥವಿಲ್ಲ. ಇದು ನಮ್ಮ ಸ್ವಯಂಕೃತ ಅಪರಾಧವಲ್ಲದೆ ಇನ್ನೇನು?
Related Articles
Advertisement
ಸ್ಕೂಟರ್, ಬೈಕ್, ಕಾರುಗಳಲ್ಲಿ ಬೆಳ್ಳಂಬೆಳಗ್ಗೆ ಹೊರಡುವ ಸುಶಿಕ್ಷಿತ ಯುವಜನರು, ಮಧ್ಯ ವಯಸ್ಕರು ತಮ್ಮ ವಾಹನದಲ್ಲಿ ಇಟ್ಟಿರುವ ಕಸ ತುಂಬಿದ ಪ್ಲಾಸ್ಟಿಕ್ ಚೀಲವನ್ನು ರಸ್ತೆ ಬದಿಗೋ, ನದಿ, ತೋಡು, ಚರಂಡಿಗಳಿಗೋ ಬೀಸಿ ಒಗೆಯುವಾಗ ತಮ್ಮ ಗುಂಡಿಯನ್ನು ತಾವೇ ತೋಡುತ್ತಿದ್ದೇವೆ, ತಮ್ಮ ಮುಂದಿನ ತಲೆಮಾರಿನ ಭವಿಷ್ಯಕ್ಕೇ ಕೊಡಲಿ ಪೆಟ್ಟು ನೀಡುತ್ತಿದ್ದೇವೆ ಎಂಬ ಕನಿಷ್ಠ ಪ್ರಜ್ಞೆಯೂ ಅವರಿಗಿರುವುದಿಲ್ಲ. ಸ್ವಾರ್ಥದ ಗೂಡಲ್ಲಿ ಬಂಧಿಯಾಗಿರುವ ನಾವು ನಮ್ಮ ಶವ ಪೆಟ್ಟಿಗೆಯೊಳಗೆ ನಾವೇ ಸೇರಿಕೊಂಡು ಅದರ ಮುಚ್ಚಳದ ಮೊಳೆಯನ್ನು ಸಹ ನಾವೇ ಹೊಡೆದು ಕೊಳ್ಳುವ ಪ್ರಯತ್ನದಲ್ಲಿದ್ದೇವೆ. ಯಾವುದೇ ಸತ್ಕಾರ್ಯ, ಸದುದ್ದೇಶಗಳಲ್ಲಿ ಇಲ್ಲದ ಏಕತೆ ಕಸ ಎಸೆಯುವುದರಲ್ಲಂತೂ ಇದ್ದೇ ಇದೆ.
ವಸ್ತುಗಳನ್ನು ಖರೀದಿಸಲು ಹೋಗುವಾಗ ನಮ್ಮದೇ ಕೈಚೀಲ ಒಯ್ಯುವ, ಮನೆಯ ಹಸಿಕ ಸವನ್ನು ಗೊಬ್ಬರವಾಗಿಸುವ, ಅವರವರ ಮನೆಯ ಕಸವನ್ನು ಜವಾಬ್ದಾರಿಯಿಂದ ವಿಲೇವಾರಿ ಮಾಡುವ ಪ್ರಜ್ಞೆ ನಮಗಿದ್ದರೆ ರಸ್ತೆ ಬದಿಯಲ್ಲಿ ಕಸ ಈ ರೀತಿ ರಾಶಿ ಬೀಳುತ್ತಿರಲಿಲ್ಲ. ಒಂದು ಮಳೆ ಸುರಿದ ಕೂಡಲೇ ಚರಂಡಿಯೆಲ್ಲ ಮುಚ್ಚಿ ಕೃತಕ ನೆರೆ ಉಂಟಾಗುತ್ತಿರಲಿಲ್ಲ. ರಸ್ತೆಯಲ್ಲಿ ಗಲೀಜು, ಕೊಚ್ಚೆ ತುಂಬಿ ಪ್ರಯಾಣಿಕರು ಪರದಾಡುತ್ತಿರಲಿಲ್ಲ.
ಸ್ವಚ್ಛತೆಯ ಕುರಿತಷ್ಟೇ ಅಲ್ಲ, ನಮ್ಮ ದೇಶದ ಇತರ ಅಗತ್ಯಗಳ ಬಗ್ಗೆಯೂ ನಾವು ಕೇವಲ ಸಂಖ್ಯೆಯಷ್ಟೇ ಆಗಿರದೇ ಸಂಪನ್ಮೂಲವಾಗಬೇಕಿದೆ. ಈ ದಿಸೆಯಲ್ಲಿ ಚಿಂತನೆ ಅತ್ಯಗತ್ಯ. ನಮ್ಮಿಂದ, ನಮ್ಮ ಕುಟುಂಬ ದಿಂದ ಬದಲಾವಣೆ ಆರಂಭಿಸೋಣ. ಮಾಲಿನ್ಯದಿಂದ ಭೂಮಿ, ಮನುಕುಲವನ್ನು ಉಳಿಸೋಣ. ನಮ್ಮ ಉಳಿವಿಗಾಗಿ, ನಮ್ಮ ಮುಂದಿನ ತಲೆಮಾರುಗಳ ಸುರಕ್ಷತೆಗಾಗಿ ಇವೆಲ್ಲದಕ್ಕಿಂತ ಮುಖ್ಯವಾಗಿ ಭೂಮಿಯ ಉಳಿವಿಗಾಗಿ ಸ್ವತ್ಛತೆಯನ್ನು ಕಾಪಾಡೋಣ.
ಪ್ರಜ್ಞಾವಂತ ಜನಸಮೂಹ ದೇಶದ ಸಂಪನ್ಮೂಲ :
ದೇಶದ ಸಂಪನ್ಮೂಲಗಳರೆಲ್ಲ ಅತ್ಯಂತ ಬೆಲೆಬಾಳು ವಂತದ್ದು ಆ ದೇಶದ ಪ್ರಜ್ಞಾವಂತ ಜನಸಮೂಹ. ಪ್ರಜೆಗಳು ಸಂಪನ್ಮೂಲವಾಗುವುದಕ್ಕೂ ಕೇವಲ ಸಂಖ್ಯೆಯಾಗುವುದಕ್ಕೂ ವ್ಯತ್ಯಾಸವಿದೆ. ಜನರು ತಮ್ಮ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ತಿಳಿವಳಿಕೆ ಹೊಂದಿರುವುದು ಬಲುಮುಖ್ಯ. ಹೆಚ್ಚು ಹೆಚ್ಚು ಶಿಕ್ಷಣ ಪಡೆದಾಗ, ಆಧುನಿಕತೆ, ವೈಜ್ಞಾನಿಕತೆಗಳಿಗೆ ತೆರೆದುಕೊಂಡಾಗ, ಜಗತ್ತೇ ಕೈಬೆರಳ ತುದಿಯಲ್ಲಿ ಸಿಕ್ಕಿ ಜ್ಞಾನವೆಂಬುದು ಪ್ರತಿಯೊಬ್ಬರ ಸೊತ್ತೂ ಆಗಿರುವಾಗ ಜನ ಮೂರ್ಖತನಗಳಿಂದ ದೂರವಾಗಬೇಕಿತ್ತು.
– ಜೆಸ್ಸಿ ಪಿ.ವಿ., ಕೆಯ್ಯೂರು