Advertisement

ಪದವೀಧರರು ಸಮಾಜಮುಖಿ ಚಿಂತಕರಾಗಲಿ; ಪ್ರೊ.ಕುಮಾರ್‌

06:13 PM Jun 20, 2022 | Team Udayavani |

ಹಾಸನ: ಪದವಿ ಪ್ರಮಾಣ ಪತ್ರ ಪಡೆಯುವುದಷ್ಟೇ ವಿದ್ಯಾರ್ಥಿಗಳಿಗೆ ಮುಖ್ಯವಾಗದೆ ಸಮಾಜಮುಖಿ ಕಾರ್ಯಗಳತ್ತ ತುಡಿತವಿರಬೇಕು. ಜೀವನದ ಎಲ್ಲ ಹಂತಗಳಲ್ಲೂ ಕಲಿಯುತ್ತಾ ಜ್ಞಾನ ಪಡೆಯುತ್ತಿರಬೇಕು ಎಂದು ಮೈಸೂರು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ. ಹೇಮಂತ್‌ ಕುಮಾರ್‌ ಅವರು ಹೇಳಿದರು.

Advertisement

ನಗರದ ಸರ್ಕಾರಿ ಕಲಾ ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು (ಸ್ವಾಯತ್ತ) ನಲ್ಲಿ ಭಾನುವಾರ ಏರ್ಪಡಿಸಿದ್ದ 3ನೇ ಘಟಿಕೋತ್ಸವದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ಜೀವನದ ಪ್ರತಿಯೊಂದು ಹಂತದಲ್ಲೂ ಒಂದೊಂದು ಪಾಠವನ್ನು ಕಲಿಯುತ್ತಲೇ ಇರುತ್ತೇವೆ. ಶಾಲಾ, ಕಾಲೇಜುಗಳಲ್ಲಿ ಕಲಿತು ಪರೀಕ್ಷೆ ಬರೆಯುತ್ತೇವೆ. ಆದರೆ, ಜೀವನದಲ್ಲಿ ಪರೀಕ್ಷೆಗೆ ಗುರಿಯಾಗಿ ನಂತರ ಪಾಠ ಕಲಿಯುತ್ತೇವೆ. ಹಾಗಾಗಿ ನಾವು ಎಷ್ಟೇ ಕಲಿತರೂ ಯಾವುದರಲ್ಲೂ ಪೂರ್ಣ ಪ್ರಮಾಣದ ಪರಿಣಿತರಲ್ಲ. ಕಲಿಯುವುದು ಜೀವನ ಪೂರ್ತಿ ಇದ್ದೆ ಇರುತ್ತದೆ ಎಂದರು.

ಜ್ಞಾನ ಗಳಿಸಿ: ಚಿಕ್ಕ ವಿಷಯವೂ ಕೂಡ ಜೀವನದ ಒಂದೊಂದು ಘಟ್ಟದಲ್ಲಿ ದೊಡ್ಡ ಯಶಸ್ಸನ್ನು ತಂದುಕೊಡಬಹುದು . ಹಾಗಾಗಿ ಯಾವುದನ್ನು ಕಡೆಗಣಿಸದೆ ಸಕಾರಾತ್ಮಕ ಮನೋಭಾವನೆ ರೂಢಿಸಿಕೊಂಡು ಭವಿಷ್ಯಕ್ಕಾಗಿ ಹೆಚ್ಚಿನ ಜ್ಞಾನವನ್ನು ರೂಢಿಸಿಕೊಳ್ಳಬೇಕು ಎಂದು ನವ ಪದವೀಧರರಿಗೆ ಸಲಹೆ ನೀಡಿದರು.

ದೇಶದ ಭವಿಷ್ಯ ನಿರ್ಧಾರ: ರಾಜ್ಯ ಉನ್ನತ ಶಿಕ್ಷಣ ಪರಿಷತ್‌ ಉಪಾಧ್ಯಕ್ಷ ಹಾಗೂ ವಿಶ್ರಾಂತ ಕುಲಪತಿ ಪ್ರೊ.ಬಿ.ತಿಮ್ಮೇಗೌಡ ಅವರು ಮಾತನಾಡಿ, ದೇಶದ ಒಳಿತಿಗಾಗಿ ಪ್ರತಿಭೆ ಮತ್ತು ಸಂಪ ನ್ಮೂಲಗಳನ್ನು ಅಭಿವೃದ್ಧಿಪಡಿಸಲು ಉನ್ನತ ಶಿಕ್ಷಣದ ಅಗತ್ಯವಿದೆ. ಮುಂದಿನ ದಶಕದಲ್ಲಿ ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಯುವಜನರನ್ನು ಹೊಂದಿರುತ್ತದೆ. ಯುವ ಜನತೆಗೆ ಉತ್ತಮ ಗುಣಮಟ್ಟದ ಶೈಕ್ಷಣಿಕ ಅವಕಾಶಗಳನ್ನು ಒದಗಿಸುವ ನಮ್ಮ ಸಾಮರ್ಥ್ಯವೇ ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದರು.

ಸಮಾಜಕ್ಕೆ ಮಾರ್ಗದರ್ಶಕರಾಗಿ: ಪದವಿ ಪಡೆದ ಯುವಕರು ಸಮಾಜದಲ್ಲಿ ಮಾರ್ಗದರ್ಶಕರಾಗಬೇಕು. ಆ ಮೂಲಕ ದೇಶದ ಯುವ ಶಕ್ತಿ ಅಭಿವೃದ್ಧಿಗೆ ಪೂರಕ
ಸಂಪನ್ಮೂಲವಾಗಬೇಕು. ಆ ನಿಟ್ಟಿನಲ್ಲಿ ಪದವೀಧರರು ತಮ್ಮ ಜ್ಞಾನದ ಮಟ್ಟವನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಬೇಕು ಎಂದು ಹೇಳಿದರು.

Advertisement

ಭವಿಷ್ಯದ ಜೀವನ ಸುಖಕರವಾಗಿರಲಿ : ಪದವೀಧರರಿಗೆ ಸಮಾಜದಲ್ಲಿ ಜವಾಬ್ದಾರಿಗಳಿರುತ್ತವೆ. ಸಮಾಜದಲ್ಲಿ ಪ್ರಬುದ್ಧ ನಾಗರಿಕನಾಗಿ, ಸಮಾಜ ತಿದ್ದುವಂತಹ ಕೆಲಸವನ್ನು ಪದವೀಧರರು ಮಾಡ ಬೇಕು. ಆ ನಿಟ್ಟಿನಲ್ಲಿ ಇಂದು ಪದವಿ ಪಡೆಯುತ್ತಿರುವವರು ಕಾರ್ಯೋನ್ಮುಖರಾಗಲಿ. ಭವಿಷ್ಯದ ಜೀವನ ಸುಖಕರವಾಗಿರಲಿ ಎಂದು ಶಾಸಕ ಪ್ರೀತಂ ಜೆ. ಗೌಡ ಹಾರೈಸಿದರು.

ಚಿನ್ನದ ಪದಕ ಪಡೆದ ಮತ್ತು ನೂರಕ್ಕೂ ಹೆಚ್ಚು ವಿವಿಧ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಕಲಾ ಕಾಲೇಜು ಪ್ರಾಂಶುಪಾಲ ಜಿ. ಪಾಲಾಕ್ಷ, ಪರೀಕ್ಷಾಂಗ ವಿಭಾಗದ ನಿಯಂತ್ರಕರಾದ ಟಿ.ಪಿ. ಪುಟ್ಟರಾಜು, ಡೀನ್‌ ಇರ್ಷಾದ್‌, ಪ್ರಾಧ್ಯಾಪಕರಾದ ಹೇಮಂತ್‌ ಕುಮಾರ್‌, ಬಿ.ಚ್‌. ಸುರೇಶ್‌, ಬಿ.ಎಸ್‌. ದೇವರಾಜು, ಡಿ ಎಸ್‌ ರಾಜು, ವಕೀಲ ಎಸ್‌ .ದ್ಯಾವೇಗೌಡ, ಎಂ.ಬಿ. ವಿಶಾಲ್‌, ರಮೇಶ್‌, ಡಿ.ಎಸ್‌. ರಾಜು, ಸೋಮಶೇಖರ್‌ ದೇಸಾಯಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಜೀವನಕ್ಕೆ ಭದ್ರತೆ ರೂಪಸಿಕೊಳ್ಳಿ; ಸಮಾಜಮುಖಿಯಾಗಿ
ಶಾಸಕ ಪ್ರೀತಂ ಜೆ.ಗೌಡ ಅವರು ಮಾತನಾಡಿ, ಉನ್ನತ ವ್ಯಾಸಂಗ ಮಾಡಿದ ಎಲ್ಲ ಪದವೀಧರರೂ ಸರ್ಕಾರಿ ಹುದ್ದೆಗೆ ಹೋಗಲು ಸಾಧ್ಯವಿಲ್ಲ. ಅವರ ವೈಯಕ್ತಿಕ ಹಾಗೂ ಇತರ ಕಾರಣಗಳಿಂದ ವ್ಯವಸಾಯ ಹಾಗೂ ವ್ಯಾಪಾರ ಬೇರೆ ಕಾರ್ಯಗಳಲ್ಲಿ ತೊಡಗಬೇಕಾಗುತ್ತದೆ. ಪದವಿ ಶಿಕ್ಷಣ ಜೀವನದ ಮಹತ್ತರ ಘಟ್ಟ. ಈ ಹಂತ ದಲ್ಲಿಯೇ ಭವಿಷ್ಯದಲ್ಲಿ ನಾವು ಏನಾಗಬೇಕು ಎಂಬುದನ್ನು ನಿರ್ಧರಿಸಿ ಭವಿಷ್ಯ ರೂಪಿಸಿಕೊಳ್ಳಬೇಕು. ಜೀವನಕ್ಕೆ ಭದ್ರತೆ ರೂಪಸಿಕೊಂಡರೆ ಮಾತ್ರ ಸಮಾಜಕ್ಕೆ ನಾವು ಕೊಡುಗೆ ನೀಡಬಹುದು . ಆ ನಿಟ್ಟಿನಲ್ಲಿ ಯುವ ಜನರು ಚಿಂತನೆ ಮಾಡಬೇಕು ಎಂದು ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next