Advertisement

ಸರ್ಕಾರಿ ನೌಕರರು ಜನರ ಸಮಸ್ಯೆಗೆ ಸ್ಪಂದಿಸಲಿ

05:10 PM Jan 06, 2022 | Team Udayavani |

ಸುರಪುರ: ಸರಕಾರಿ ಸೇವೆಯಲ್ಲಿ ವರ್ಗಾವಣೆ, ನಿವೃತ್ತಿ ಕಡ್ಡಾಯ. ಇದರಿಂದ ವಿಚಲಿತರಾಗುವ ಅಗತ್ಯವಿಲ್ಲ. ಸೇವಾವಧಿಯಲ್ಲಿ ಪಡೆದುಕೊಂಡಿರುವ ಅನುಭವವನ್ನು ಇತರರಿಗೆ ಮಾರ್ಗದರ್ಶನ ಮಾಡುವ ಮೂಲಕ ನಿವೃತ್ತಿ ಜೀವನ ಸಾರ್ಥಕ ಮಾಡಿಕೊಳ್ಳಬೇಕೆಂದು ತಹಶೀಲ್ದಾರ್‌ ಸುಬ್ಬಣ್ಣ ಜಮಖಂಡಿ ಹೇಳಿದರು.

Advertisement

ತಹಶೀಲ್ದಾರ್‌ ಕಾರ್ಯಾಲಯದಲ್ಲಿ ನಿವೃತ್ತ ಗ್ರೇಡ್‌-2 ತಹಶೀಲ್ದಾರ್‌ ಸೋಫಿಯಾಸುಲ್ತಾನ ಅವರಿಗೆ ಕಂದಾಯ ಇಲಾಖೆ ಸಿಬ್ಬಂದಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಸರಕಾರಿ ಹುದ್ದೆಯಲ್ಲಿ ನಾವೆಷ್ಟು ದಿನ ಕೆಲಸ ಮಾಡಿದೆವು ಎನುವುದು ಮುಖ್ಯವಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಸೇವೆ ನೀಡುವುದು ಮುಖ್ಯವಾಗುತ್ತದೆ. ಇದಕ್ಕೆ ಗ್ರೇಡ್‌-2 ತಹಶೀಲ್ದಾರ್‌ ಸೋಫಿಯಾಸುಲ್ತಾನ್‌ ಅವರು ನೀಡಿರುವ ಸೇವೆ ಉತ್ತಮ ನಿದರ್ಶನವಾಗಿದೆ ಎಂದರು.

ನನ್ನ ಅನುಪಸ್ಥಿತಿಯಲ್ಲಿ ಕಾರ್ಯಾಲಯದ ಉಸ್ತುವಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಅವರ ಕೆಲಸ ಕಾರ್ಯಗಳನ್ನು ತ್ವರಿತವಾಗಿ ಮಾಡಿಕೊಡುತ್ತಿದ್ದರು. ಕೋವಿಡ್‌ ಮತ್ತು ಚುನಾವಣೆ ಸಂದರ್ಭದಲ್ಲಿ ಹಗಲು-ರಾತ್ರಿ ನಮ್ಮೊಂದಿಗಿದ್ದು ಬದ್ಧತೆಯಿಂದ ಕೆಲಸ ಮಾಡಿದ್ದಾರೆ. ಯಾರಿಗೂ ತೊಂದರೆ ಕೊಟ್ಟಿಲ್ಲ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದ್ದಾರೆ. ಮಾತೃ ಹೃದಯಿಯಾಗಿದ್ದರು. ನಾನು ಸೇರಿದಂತೆ ಸಿಬ್ಬಂದಿ ಅವರನ್ನು ಅಮ್ಮಾ ಎಂದೇ ಕರೆಯುತ್ತಿದ್ದರು. ಅವರ ಕರ್ತವ್ಯ ನಿಷ್ಠೆ, ಪ್ರಾಮಾಣಿಕ ಸೇವೆ ನಮೆಗೆಲ್ಲ ಮಾದರಿಯಾಗಿದೆ ಎಂದು ಗುಣಗಾನ ಮಾಡಿದರು.

ಸನ್ಮಾನ ಸ್ವೀಕರಿಸಿದ ಮಾತನಾಡಿದ ನಿವೃತ್ತ ಗ್ರೇಡ್‌-2 ತಹಶೀಲ್ದಾರ್‌ ಸೋಫಿಯಾಸುಲ್ತಾನ್‌, ಇಲ್ಲಿನ ಸೇವೆ ಜೀವಮಾನದಲ್ಲಿ ಮರೆಯಲಾಗದು. ಇಲ್ಲಿಯ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ತೋರಿದ ಪ್ರೀತಿ, ವಿಶ್ವಾಸ, ಸಹಕಾರವೇ ನನಗೆ ಸುದೀರ್ಘ‌ ಸೇವೆ ನೀಡಲು ಸಾಧ್ಯವಾಯಿತು. ತಹಶೀಲ್ದಾರ್‌ರು ಮತ್ತು ಇಲಾಖೆ ಸಿಬ್ಬಂದಿ ಸಹಕಾರ ಎಂದು ಮರೆಯಲಾರೆ ಎಂದು ಭಾವುಕರಾದರು.

Advertisement

ಹುಣಸಗಿ ತಹಶೀಲ್ದಾರ್‌ ಅಶೋಕ ಸುರಪುರಕರ್‌ ಮಾತನಾಡಿದರು. ಸಮಾಜ ಕಲ್ಯಾಣಾಧಿಕಾರಿ ಸತ್ಯನಾರಾಯಣ ದರಬಾರಿ ವೇದಿಕೆಯಲ್ಲಿದ್ದರು. ಆಹಾರ ನಿರೀಕ್ಷಕ ಅಪ್ಪಯ್ಯ ಸ್ವಾಮಿ, ಶಿರಸ್ತೇದಾರ ರೇವಪ್ಪ ತೆಗ್ಗಿನ, ಬಿಸಿಎಂ ವಿಸ್ತೀರ್ಣಾಧಿಕಾರಿ ಬಸವರಾಜ, ರವಿ ನಾಯಕ, ಶಿವಲಿಂಗ ಚಲುವಾದಿ ಇತರರು ಅನಿಸಿಕೆ ಹಂಚಿಕೊಂಡರು. ಕಂದಾಯ ಇಲಾಖೆ ಸಿಬ್ಬಂದಿ, ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next