ಧಾರವಾಡ: ದೇಶದಲ್ಲಿ ಸಮುದಾಯ ಆಧಾರಿತ ವಿಕೇಂದ್ರೀಕೃತ ನೀರು ನಿರ್ವಹಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ರಾಜಸ್ಥಾನದ ಜಲತಜ್ಞ ಡಾ| ರಾಜೇಂದ್ರ ಸಿಂಗ್ ಹೇಳಿದರು.
ವಾಲ್ಮಿ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಅಖೀಲ ಭಾರತ ವಾಲ್ಮಿಗಳ ಸಮ್ಮೇಳನ-2023 ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯೆ ಶಿಕ್ಷೆಯಾಗದೇ ಪ್ರಕೃತಿಗೆ ಗೌರವ ನೀಡುವ ಪ್ರಕ್ರಿಯೆಯಾಗಬೇಕು. ಈ ದಿಸೆಯಲ್ಲಿ ಉತ್ತಮ ಭವಿಷ್ಯಕ್ಕಾಗಿ ಪ್ರಸ್ತುತ ಕಾರ್ಯನಿರ್ವಹಿಸಬೇಕು ಎಂದರು.
ಜಲ ಮತ್ತು ನೆಲ ನಿರ್ವಹಣೆಗೆ ಸಂಬಂಧಿಸಿದಂತೆ ರಾಷ್ಟ್ರಾದ್ಯಂತ ಸ್ಥಾಪನೆಯಾದ 14 ವಾಲ್ಮಿ ಸಂಸ್ಥೆಗಳಲ್ಲಿ ಬಹುತೇಕ ಸಂಸ್ಥೆಗಳು ನಿಷ್ಕ್ರಿಯಗೊಂಡಿವೆ. ವಾಲ್ಮಿ ಸಂಸ್ಥೆಗಳನ್ನು ಪುನರುಜ್ಜೀವನಗೊಳಿಸುವ ದಿಸೆಯಲ್ಲಿ ಗಮನಹರಿಸಬೇಕಾದುದು ಇಂದಿನ ಅಗತ್ಯ. ನೀರಿಲ್ಲದೇ ಜೀವವಿಲ್ಲ. ಅದೇ ರೀತಿ ನೆಲದ ನಿರ್ವಹಣೆಯೂ ಮಹತ್ವದ್ದಾಗಿದೆ. ಜಲ ಮತ್ತು ನೆಲ ನಿರ್ವಹಣೆ ಸಮಾಜದ ಉಳಿವಿಗೆ ಅತ್ಯಗತ್ಯವಾಗಿದ್ದು, ಈ ದಿಸೆಯಲ್ಲಿ ಕೆಲಸ ಮಾಡುತ್ತಿರುವ ವಾಲ್ಮಿಗಳನ್ನು ಬಲವರ್ಧನೆಗೊಳಿಸುವ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದರು.
ಹೈದ್ರಾಬಾದ್‌ನ ವಿ.ಪ್ರಕಾಶರಾವ್ ಮಾತನಾಡಿ, ಸರ್ಕಾರಗಳು ಕಾಡಾ ಮತ್ತು ಇತರ ಸಂಸ್ಥೆಗಳಿಗೆ ನೀಡುತ್ತಿರುವಂತೆಯೇ ವಾಲ್ಮಿ ಮತ್ತು ಅದರಂಥ ಇತರ ಸಂಸ್ಥೆಗಳಿಗೂ ಸೂಕ್ತ ಅನುದಾನ ನೀಡಿ ಅಭಿವೃದ್ಧಿ ಪಡಿಸಬೇಕಿದೆ. ನೀರಾವರಿ ವ್ಯವಸ್ಥೆ ಬಲಪಡಿಸಿ ಕಾಲುವೆಯ ಕೊನೆಯಂಚಿನ ರೈತರಿಗೂ ನೀರಾವರಿ ಸೌಲಭ್ಯ ದೊರಕಿಸಿಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಂಡಲ್ಲಿ ರೈತರಿಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.
Related Articles
ಜಲ ಮತ್ತು ನೆಲ ನಿರ್ವಹಣೆಗೆ ಸಂಬಂ ಧಿಸಿದ ವಾಲ್ಮಿ ಸಂಸ್ಥೆಗಳ ಬೆಳವಣಿಗೆಗೆ ಧನ ಸಹಾಯವೂ ಸೇರಿದಂತೆ ಉತ್ತಮ ಸಹಕಾರ ನೀಡುತ್ತಿರುವ ಕರ್ನಾಟಕ ಸರ್ಕಾರದ ಕ್ರಮವನ್ನು ಸ್ವಾಗತಿಸಿ, ಇತರ ರಾಜ್ಯ ಸರ್ಕಾರಗಳಿಗೆ ಮಾದರಿಯಾಗಿದೆ. ಈ ದಿಸೆಯಲ್ಲಿ ಇತರೆ ರಾಜ್ಯ ಸರ್ಕಾರಗಳು ಸೂಕ್ತ ಕ್ರಮ ಕೈಗೊಂಡಲ್ಲಿ ಜಲ ಮತ್ತು ನೆಲ ನಿರ್ವಹಣೆ ವಿಷಯದಲ್ಲಿ ಮಹತ್ತರ ಹೆಜ್ಜೆಯನ್ನು ಇರಿಸಿದಂತಾಗುತ್ತದೆ ಎಂದರು.
ಪುಣೆಯ ನ್ಯಾಶನಲ್ ವಾಟರ್ ಅಕಾಡೆಮಿ ನಿರ್ದೇಶಕ ಮಿಲಿಂದ ಪಾನ ಪಾಟೀಲ ಮಾತನಾಡಿ, ಜಲ ಮತ್ತು ನೆಲ ನಿರ್ವಹಣೆಗೆ ಸಂಬಂಧಿಸಿ ಕೆಲಸ ಮಾಡುತ್ತಿರುವ ವಾಲ್ಮಿಯಂಥ ಸಂಸ್ಥೆಗಳನ್ನು ಬಲಪಡಿಸಬೇಕಾದ ಅಗತ್ಯವಿದೆ ಎಂದರು. ಧಾರವಾಡ ವಾಲ್ಮಿ ನಿರ್ದೇಶಕ ಡಾ| ರಾಜೇಂದ್ರ ಪೋದ್ದಾರ ಮಾತನಾಡಿ, ದೇಶದಲ್ಲಿನ 14 ವಾಲ್ಮಿಗಳ ಸ್ಥಿತಿಗತಿಯ ಕುರಿತು ನಡೆಯುತ್ತಿರುವ ವಿಚಾರ ಸಂಕಿರಣದ ಕೊನೆಯಲ್ಲಿ ಈಗಿರುವ ವಾಲ್ಮಿಗಳ ಚಟುವಟಿಕೆಗಳನ್ನು ಇನ್ನಷ್ಟು ಚುರುಕುಗೊಳಿಸಿ ಅವುಗಳಿಗೆ ಶಕ್ತಿ ತುಂಬುವ ದಿಸೆಯಲ್ಲಿ ಕೇಂದ್ರ ಸರ್ಕಾರಕ್ಕೆ “ಧಾರವಾಡ ಘೋಷಣೆ’ ಎಂಬ ಹೆಸರಿನಲ್ಲಿ ರಚನಾತ್ಮಕ ಸಲಹೆಗಳನ್ನು ನೀಡುವ ಉದ್ದೇಶವಿದೆ
ಎಂದು ಹೇಳಿದರು.
ದೇಶದ 14 ವಾಲ್ಮಿಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಹಿರಿಯ ಅಧಿಕಾರಿಗಳು, ದೇಶ-ವಿದೇಶದ ತರಬೇತಿ ತಜ್ಞರು ಹಾಗೂ ರೈತರು ಪಾಲ್ಗೊಂಡಿದ್ದರು. ತಾಂತ್ರಿಕ ಗೋಷ್ಠಿಗಳಲ್ಲಿ ಪ್ರತಿ ವಾಲ್ಮಿಯ ಸ್ಥಿತಿಗತಿ ಹಾಗೂ ಸುಧಾರಣಾ ಕ್ರಮಗಳ ಕುರಿತು ಚರ್ಚಿಸಲಾಯಿತು. ಡಾ| ಬಿ.ವೈ. ಬಂಡಿವಡ್ಡರ ಸ್ವಾಗತಿಸಿ, ನಿರೂಪಿಸಿದರು. ದೇಶದ ವಾಲ್ಮಿಗಳ ಸ್ಥಿತಿಗತಿ ಕುರಿತಾದ ಪುಸ್ತಕ ಬಿಡುಗಡೆಗೊಳಿಸಲಾಯಿತು.
ಜೀವ ಕೊಟ್ಟ ಪ್ರಕೃತಿಯನ್ನು ಸೂಕ್ತ ಶಿಕ್ಷಣದ ಮೂಲಕ ಸಂರಕ್ಷಿಸಬೇಕಾದುದು ನಮ್ಮೆಲ್ಲರ ಹೊಣೆ. ಮಾನವನ ಅಗತ್ಯಗಳನ್ನು ಪೂರೈಸಲು ಪ್ರಕೃತಿಯಲ್ಲಿ ವ್ಯವಸ್ಥೆ ಇದೆ. ಆದರೆ ಅತಿ ಆಸೆ ಪೂರೈಸುವುದು ಅಸಾಧ್ಯ. ಆಧುನಿಕ ತಂತ್ರಜ್ಞಾನಗಳಾದ ನ್ಯಾನೋ ತಂತ್ರಜ್ಞಾನ, ಬಯೋ ತಂತ್ರಜ್ಞಾನ, ಮತ್ತು ಕೃತಕ ಬುದ್ಧಿಮತ್ತೆಯಂಥಹ ತಂತ್ರಜ್ಞಾನಗಳನ್ನು ನೈತಿಕತೆ ಆಧಾರದ ಮೇಲೆ ಬಳಸಿಕೊಂಡು ಜಲ ಮತ್ತು ನೆಲ ನಿರ್ವಹಣೆಯತ್ತ ಕ್ರಮ ಕೈಗೊಳ್ಳಬೇಕಾಗಿದೆ.
ಡಾ| ಎಸ್.ಎಂ. ಶಿವಪ್ರಸಾದ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ ನಿರ್ದೇಶಕ