ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡುವ ಬದಲಿಗೆ ಆಯಾ ಸಮಾಜಗಳ ಆರ್ಥಿಕ ಪರಿಸ್ಥಿತಿ ಆಧರಿಸಿ ಮೀಸಲಾತಿ ಕಲ್ಪಿಸುವ ಮೂಲಕ ದೇಶದಲ್ಲಿ ಬಡತನ ನಿರ್ಮೂಲನೆ ಮಾಡಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲೆಡೆ ಮೀಸಲಾತಿ ನೀಡಬೇಕೆಂದು ವಿವಿಧ ಸಮಾಜದವರು ಒತ್ತಾಯ ಮಾಡುತ್ತಿದ್ದಾರೆ. ಜನಸಂಖ್ಯೆ ಆಧಾರವಾಗಿಟ್ಟುಕೊಂಡು ಮೀಸಲಾತಿ ನೀಡುತ್ತಾ ಬಂದಿದ್ದೇವೆ. ಆದರೂ ಬಡತನ ನಿರ್ಮೂಲನೆ ಆಗಿಲ್ಲ.
ಹೀಗಾಗಿ ಜನಸಂಖ್ಯೆಗಿಂತಲೂ ಸಮಾಜದ ಆರ್ಥಿಕ ಪರಿಸ್ಥಿತಿ ಗಮನಿಸಿ ಮೀಸಲಾತಿ ಸೌಲಭ್ಯ ನೀಡುವ ಮೂಲಕ ಬಡತನ ನಿರ್ಮೂಲನೆ ಮಾಡಬೇಕೆಂದರು. ಒಕ್ಕಲಿಗ ಸಮಾಜಕ್ಕೆ ಮೀಸಲಾತಿ ಹೆಚ್ಚಿಸಲು ಸರ್ಕಾರಕ್ಕೆ ಗಡುವು ನೀಡಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಶೇ.12ರಷ್ಟು ಮೀಸಲಾತಿ ನೀಡಬೇಕೆಂದು ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ ಒಕ್ಕಲಿಗರ ಜನಸಂಖ್ಯೆ ಉಪಜಾತಿಗಳು ಸಹಿತ ಆರ್ಥಿಕ ಪರಿಸ್ಥಿತಿಯ ವರದಿಯನ್ನು ಸಿದ್ಧಪಡಿಸಿಕೊಂಡು ಸರ್ಕಾರಕ್ಕೆ ಗಡುವು ನೀಡಬೇಕು ಎಂದು ಸಲಹೆ ನೀಡಿರುವುದಾಗಿ ಸ್ಪಷ್ಟಪಡಿಸಿದರು.