ಮಂಡ್ಯ: ರಾಜ್ಯದಲ್ಲಿ ಬಹುತೇಕ ಸರ್ಕಾರಗಳು ರಚನೆಯಾದ ಸಂದರ್ಭದಲ್ಲಿ ರಾಜಕೀಯವಾಗಿ ಬಲಯುತವಾಗಿದ್ದ ಮಂಡ್ಯ ಜಿಲ್ಲೆಗೆ ಯಾವುದಾದರೊಂದು ಸಚಿವ ಸ್ಥಾನ ಸಿಗುವ ಖಚಿತ ವಿಶ್ವಾಸ ಇರುತ್ತಿತ್ತು. ಆದರೆ, ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಮೊದಲ ಬಾರಿಗೆ ಸಕ್ಕರೆ ನಾಡು ಸಚಿವ ಸ್ಥಾನದಿಂದ ವಂಚಿತವಾಗಿರುವುದು ನಿರಾಸೆಗೆ ಕಾರಣವಾಗಿದೆ.
ಕಾಂಗ್ರೆಸ್ ಅಥವಾ ಜೆಡಿಎಸ್ ಮಂತ್ರಿ ಮಂಡಲ ರಚನೆಯಾಗುವ ವೇಳೆ ಜಿಲ್ಲೆಯಿಂದ ಯಾರಿಗೆ ಸಚಿವ ಸ್ಥಾನ ಸಿಗಬಹುದೆಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡುತ್ತಿತ್ತು. ಆ ಸರ್ಕಾರಗಳಲ್ಲಿ ಜಿಲ್ಲೆಯ ಯಾರಾದರೊಬ್ಬರಿಗೆ ಸಚಿವ ಸ್ಥಾನ ಸಿಗುವ ಖಚಿತತೆ ಇತ್ತು. ಆದರೆ, ಈಗ ಜಿಲ್ಲೆಯೊಳಗೆ ಬಿಜೆಪಿ ಶಾಸಕರು ಇಲ್ಲದಿರುವುದು ಹಾಗೂ ಆ ಪಕ್ಷ ಸೇರುವ ಭರದಲ್ಲಿರುವ ಕೆ.ಆರ್.ಪೇಟೆ ಕ್ಷೇತ್ರದ ಶಾಸಕ ಕೆ.ಸಿ.ನಾರಾಯಣಗೌಡರು ಅನರ್ಹಗೊಂಡಿರುವುದರಿಂದ ಮಂತ್ರಿಸ್ಥಾನ ಜಿಲ್ಲೆಗೆ ಮರೀಚಿಕೆಯಾಗಿದೆ.
2009ರಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಸಮಯದಲ್ಲಿ ನಿರೀಕ್ಷಿಸಿದಷ್ಟು ಸ್ಥಾನಗಳು ದೊರಕಿರಲಿಲ್ಲ. ಆಗ ಪಕ್ಷೇತರ ಶಾಸಕರ ಬೆಂಬಲ ಪಡೆದು ಸರ್ಕಾರ ರಚಿಸಿದ್ದರು. ಆ ಸಮಯದಲ್ಲಿ ಪಕ್ಷೇತರ ಶಾಸಕರಾಗಿ ಮಳವಳ್ಳಿ ಕ್ಷೇತ್ರದಿಂದ ಆಯ್ಕೆಯಾಗಿದ್ದ ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ನೀಡಲಾಗಿತ್ತು. ಆಗಲೂ ನರೇಂದ್ರಸ್ವಾಮಿ ಅವರನ್ನು ಮಂಡ್ಯ ಜಿಲ್ಲಾ ಉಸ್ತುವಾರಿ ಮಂತ್ರಿಯನ್ನಾಗಿ ಮಾಡಲಿಲ್ಲ. ಹೊರಗಿನವರಾದ ಆರ್.ಅಶೋಕ್, ಸಿ.ಪಿ.ಯೋಗೇಶ್ವರ್‌ಗೆ ಉಸ್ತುವಾರಿ ಹೊಣೆ ವಹಿಸಿದ್ದು ಈಗ ಇತಿಹಾಸ.
ಸಮ್ಮಿಶ್ರ ಸರ್ಕಾರದಲ್ಲಿ ಇಬ್ಬರು ಸಚಿವರು: ಕಳೆದ ಒಂದು ವರ್ಷದ ಅವಧಿಯ ಜೆಡಿಎಸ್-ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಜಿಲ್ಲೆಯಿಂದ ಮೊದಲ ಬಾರಿಗೆ ಜೆಡಿಎಸ್‌ನ ಇಬ್ಬರಿಗೆ ಮಂತ್ರಿಸ್ಥಾನ ದೊರಕಿತ್ತು. ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಂಪುಟದಲ್ಲಿ ಪ್ರಭಾವಿ ಶಾಸಕರಾದ ಡಿ.ಸಿ.ತಮ್ಮಣ್ಣ ಸಾರಿಗೆ ಖಾತೆ ಹಾಗೂ ಸಿ.ಎಸ್.ಪುಟ್ಟರಾಜು ಸಣ್ಣ ನೀರಾವರಿ ಖಾತೆಯನ್ನು ನಿರ್ವಹಿಸಿದ್ದರು. ಇಬ್ಬರು ಸಚಿವರು, ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಶಾಸಕರನ್ನು ಹೊಂದುವುದರೊಂದಿಗೆ ಮಂಡ್ಯ ಜಿಲ್ಲೆ ಜೆಡಿಎಸ್‌ನ ಅಧಿಕಾರದ ಶಕ್ತಿಕೇಂದ್ರ ಎನಿಸಿಕೊಂಡಿತ್ತು.
ರಾಜಕೀಯ ಅಧಿಕಾರವಿಲ್ಲ ಜಿಲ್ಲೆ ಅನಾಥ: ದೋಸ್ತಿ ಸರ್ಕಾರ ಪತನಗೊಂಡ ಬೆನ್ನಲ್ಲೇ ಜಿಲ್ಲೆಯೂ ರಾಜಕೀಯ ಅಧಿಕಾರದ ಶಕ್ತಿಯನ್ನು ಕಳೆದುಕೊಂಡಿದೆ. ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ರಚನೆಯಾದ ಸಚಿವ ಸಂಪುಟದಲ್ಲಿ ಮಂಡ್ಯ ಜಿಲ್ಲೆ ಮಂತ್ರಿ ಸ್ಥಾನದಿಂದ ವಂಚಿತವಾಗಿದೆ. ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪ ಜಿಲ್ಲೆಯ ಸುಪುತ್ರನಾಗಿದ್ದರೂ ಮಂಡ್ಯದ ಜನರು ಅವರನ್ನು ನಮ್ಮವರು ಎಂದು ಒಪ್ಪಿಕೊಂಡು ಬಿಜೆಪಿ ಪಕ್ಷವನ್ನು ಬೆಳೆಸುವ ವಾತಾವರಣ ಸೃಷ್ಟಿಯಾಗಿಲ್ಲ. ಯಡಿಯೂರಪ್ಪನವರು ಶಿವಮೊಗ್ಗ ಮಣ್ಣಿನ ಸೊಗಡಿನಲ್ಲಿರುವುದರಿಂದ ಹಾಗೂ ಅವರ ರಾಜಕೀಯ ಹುಟ್ಟು, ಬೆಳವಣಿಗೆ ಎಲ್ಲವೂ ಅಲ್ಲೇ ಆಗಿರುವುದರಿಂದ ಅವರನ್ನು ಮಂಡ್ಯದ ಮಣ್ಣಿನ ಮಗ ಎಂದು ಒಪ್ಪಿಕೊಳ್ಳಲು ಜಿಲ್ಲೆಯ ಜನರು ಸಿದ್ಧರಿಲ್ಲ. ಹೀಗಾಗಿ ಮಂಡ್ಯ ಜಿಲ್ಲೆಯಲ್ಲಿ ಈಗ ರಾಜಕೀಯ ಅಧಿಕಾರವಿಲ್ಲದೆ ಅನಾಥ ಪ್ರಜ್ಞೆ ಕಾಡುತ್ತಿದೆ.
ಸಚಿವ ಸ್ಥಾನ ಸಿಗುವ ಸಾಧ್ಯತೆ: ಜಿಲ್ಲೆಯಿಂದ ಬಿಜೆಪಿ ಸೇರುವ ಭರದಲ್ಲಿದ್ದ ಶಾಸಕ ಕೆ.ಸಿ.ನಾರಾಯಣಗೌಡರು ಅನರ್ಹರಾಗಿದ್ದಾರೆ. ಅವರ ಅನರ್ಹತೆ ಇಲ್ಲದಿದ್ದರೆ ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ಸಿಗುವ ಸಾಧ್ಯತೆಗಳಿದ್ದವು. ಅವರ ಅನರ್ಹತೆ ತೆರವಾದ ಬಳಿಕ ಮಂತ್ರಿ ಸ್ಥಾನ ಸಿಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಈಗ ಬಿಜೆಪಿ ಸರ್ಕಾರದೊಳಗೆ ಹಾಲಿ ಸಚಿವರಾಗಿರುವವರಲ್ಲಿ ಪ್ರಭಾವಿಗಳಿಗೆ ಮಂಡ್ಯ ಜಿಲ್ಲೆಯ ಉಸ್ತುವಾರಿ ವಹಿಸುವರೇ ಎಂಬುದನ್ನು ಕಾದುನೋಡಬೇಕಿದೆ.
ಮಂಡ್ಯ ಮೂಲತಃ ಒಕ್ಕಲಿಗರ ಪ್ರಾಬಲ್ಯವಿರುವ ಜಿಲ್ಲೆ. ಈ ಜಿಲ್ಲೆಗೆ ಆರ್.ಅಶೋಕ್ ಅವರನ್ನೇ ಮತ್ತೂಮ್ಮೆ ಉಸ್ತುವಾರಿ ಮಂತ್ರಿಯನ್ನಾಗಿ ಮಾಡುವರೋ ಅಥವಾ ಹೊಸಬರಿಗೆ ಮಣೆ ಹಾಕುವರೋ ಎನ್ನುವ ಕುತೂಹಲವೂ ಇದೆ. ಆರ್.ಅಶೋಕ್‌ಗೆ ಈಗಾಗಲೇ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿರುವ ಅನುಭವವಿದೆ. ಎಲ್ಲಾ ನಾಯಕರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿರುವುದರಿಂದ ಸುಲಭವಾಗಿ ಜಿಲ್ಲೆಯನ್ನು ನಿಭಾಯಿಸುವರೆಂಬ ವಿಶ್ವಾಸವೂ ಬಿಜೆಪಿ ನಾಯಕರಲ್ಲಿದೆ. ಒಂದು ವೇಳೆ ಆರ್.ಅಶೋಕ್ ಬಿಟ್ಟು ಹೊಸಬರಿಗೆ ಅವಕಾಶ ಕಲ್ಪಿಸುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ.
2009ರಲ್ಲಿ ಬಿಜೆಪಿ ನೇತೃತ್ವದ ಯಡಿಯೂರಪ್ಪ ಸರ್ಕಾರ ಅಧಿಕಾರದಲ್ಲಿದ್ದ ಸಮಯದಲ್ಲೂ ಮಂಡ್ಯ ಜಿಲ್ಲೆ ಅಭಿವೃದ್ಧಿಗೆ ವೇಗ ನೀಡಿತ್ತು. ಜೆಡಿಎಸ್ ಕೈವಶದಿಂದ ಜಿಲ್ಲೆಯನ್ನು ಬಿಡಿಸಲು ಸಾಕಷ್ಟು ಅನುದಾನ ನೀಡಿ ಪ್ರಗತಿಗೆ ಒತ್ತು ಕೊಡಲಾಗಿತ್ತು. ಈಗಲೂ ಮಂಡ್ಯ ಬಗ್ಗೆ ಬಿಜೆಪಿ ಅದೇ ಕಾಳಜಿ ಇದೆಯೇ ಎನ್ನುವುದು ಪ್ರಶ್ನೆಯಾಗಿದೆ.
● ಮಂಡ್ಯ ಮಂಜುನಾಥ್