ರಾಯಚೂರು: ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಮಾಡುವಂತೆ ರಾಜ್ಯಸಭೆ ಸದಸ್ಯ ಎಚ್ .ಡಿ.ದೇವೇಗೌಡ ಸದನದಲ್ಲಿ ಕಣ್ಣೀರು ಹಾಕಿ ಕೇಳಿಕೊಂಡಿದ್ದಾರೆ. ಇಂಥ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತನಾಡದ ರಾಜ್ಯದ 26 ಸಂಸದರು ನಿಷ್ಪ್ರಯೋಜಕರಾಗಿದ್ದು, ಕೈಗೆ ಬಳೆ ತೊಟ್ಟು ಹೂ ಮುಡಿಯಲಿ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ ತಾಕೀತು ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚಕಾರ ಎತ್ತದ ಬಿಜೆಪಿಯ 26 ಸಂಸದರಿಂದ ರಾಜ್ಯಕ್ಕೆ ಏನು ಪ್ರಯೋಜನವಿಲ್ಲ. ಸಂಸದ ರಾಜಾ ಅಮರೇಶ್ವರ ನಾಯಕ ಸೇರಿದಂತೆ ಎಲ್ಲ ಸಂಸದರ ಆಡಳಿತ ನಿಷ್ಕ್ರಿಯವಾಗಿದೆ. ಅದಕ್ಕಾಗಿ ಅವರಿಗೆ ಜೆಡಿಎಸ್ ಪಕ್ಷದಿಂದ ಹೂವು, ಬಳೆ ಕಳುಹಿಸಲಾಗುವುದು. ನಾವು ಕೈಲಾಗದವರು ಎಂದು ಇವುಗಳನ್ನು ತೊಟ್ಟು ಕೂಡಲಿ ಎಂದರು.
ಯುಕೆಪಿ ಹಾಗೂ ನಾರಾಯಣಪುರ ಬಲದಂಡೆ ಕಾಲುವೆ ಅಭಿವೃದ್ಧಿಯಲ್ಲಿ ಎಚ್.ಡಿ.ದೇವೇಗೌಡ ಕೊಡುಗೆ ಅಪಾರವಾಗಿದೆ. ರೈತರ ಪರ ಕಾಳಜಿ ಹೊಂದಿರುವ ಅವರು ನಿಜವಾದ ಮಣ್ಣಿನ ಮಗನಾಗಿದ್ದಾರೆ. ತಮ್ಮ ಇಳಿವಯಸ್ಸಿನಲ್ಲೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ ದೇವೇಗೌಡರು ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ಧ್ವನಿ ಎತ್ತಿದ್ದಾರೆ. ಈ ಬಗ್ಗೆ ನನ್ನ ಕೊನೆಯುಸಿರು ಇರುವವರೆಗೂ ಹೋರಾಡುವುದಾಗಿ ಹೇಳಿದ್ದಾರೆ. ದೇವದುರ್ಗದಲ್ಲಿ ಈಚೆಗೆ ನಡೆದ ಸಮಾವೇಶದಲ್ಲಿ ನೀಡಿದ್ದ ಮಾತಿನಂತೆ ಸಂಸತ್ತಿನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಕುರಿತು ವಿಷಯ ಮಂಡಿಸಿದ್ದಾರೆ. ಈ ವಿಚಾರದಲ್ಲಿ ಪಕ್ಷ ನಿರಂತರ ಹೋರಾಟ ಹಮ್ಮಿಕೊಳ್ಳಲಿದೆ ಎಂದರು.
ನಾರಾಯಣಪುರ ಬಲದಂಡೆ ಕಾಲುವೆ ಹೋರಾಟ ಸಮಿತಿ ಸಂಚಾಲಕ ಶಿವಬಸಪ್ಪ ಮಾಲಿಪಾಟೀಲ್‌ರಿಗೆ ಈಗ ಎಚ್ಚರವಾಗಿದೆ. ಅವರೊಬ್ಬ ಚಡ್ಡಿ (ಆರ್‌ಎಸ್‌ಎಸ್)
ಸಂಘದಿಂದ ಬಂದ ವ್ಯಕ್ತಿ. ಎನ್‌ಆರ್‌ಬಿಸಿ ಆಧುನೀಕರಣ ಕಾಮಗಾರಿಯಲ್ಲಿ ಅಕ್ರಮ ನಡೆದಾಗ ಚಕಾರ ಎತ್ತದ ಅವರು ಯುಕೆಪಿ ರಾಷ್ಟ್ರೀಯ ಯೋಜನೆ ಘೋಷಣೆ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ಮೊದಲು ತಮ್ಮ ಪಕ್ಷದ 26 ಸಂಸದರಿಗೆ ಬುದ್ಧಿ ಹೇಳಲಿ ಎಂದು ತಾಕೀತು ಮಾಡಿದರು.
ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಜೆಡಿಎಸ್‌ನಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಮಾಜಿ ಸಿಎಂ, ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರ ಸ್ವಾಮಿ ತಿಳಿಸಿದ್ದಾರೆ. ಅದರಂತೆ ಮಸ್ಕಿ ಕ್ಷೇತ್ರಕ್ಕೆ ಪಕ್ಷದಿಂದ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು ಎಂದರು. ಜೆಡಿಎಸ್ ಪಕ್ಷದ ಕಾರ್ಯಾಧ್ಯಕ್ಷ ಎನ್.ಶಿವಶಂಕರ ವಕೀಲ, ಸದಸ್ಯರಾದ ಎಂ.ಪವನಕುಮಾರ, ರಾಮಕೃಷ್ಣ ಸೇರಿ ಇತರರು ಗೋಷ್ಠಿಯಲ್ಲಿದ್ದರು.