ಶಿವಮೊಗ್ಗ:ಕೆ.ಎಸ್.ಈಶ್ವರಪ್ಪ ಅವರು ಪ್ರತಿನಿಧಿಸುತ್ತಿರುವ ಶಿವಮೊಗ್ಗ ನಗರ ವಿಧಾನಸಭಾ ಟಿಕೆಟ್ ಗೆ ಆಯನೂರು ಮಂಜುನಾಥ್ ಅವರು ಬೇಡಿಕೆ ಇಟ್ಟಿರುವ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಪ್ರತಿಕ್ರಿಯೆ ನೀಡಿದ್ದು, ಅಭಿಪ್ರಾಯ ವ್ಯಕ್ತಪಡಿಸುವುದು ಎಲ್ಲರ ಹಕ್ಕು.ಆದರೆ, ಅದನ್ನು ಸರಿಯಾದ ಕ್ರಮದಲ್ಲಿ ವ್ಯಕ್ತಪಡಿಸಲಿ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಚಿಹ್ನೆಯಡಿ ಸ್ಪರ್ಧಿಸಿದರೆ ಗೆಲ್ಲುವ ಅವಕಾಶ ಹೆಚ್ಚು.ಹೀಗಾಗಿ ಅನೇಕ ಆಕಾಂಕ್ಷಿಗಳು ಟಿಕೆಟ್ ಬಯಸುವುದು ಸಹಜ.ಪಕ್ಷದ ಘನತೆಗೆ ದಕ್ಕೆ ತರುವಂತಹ ಕೆಲಸ ಪಕ್ಷ ಗಮನಿಸುತ್ತದೆ. ಇಲ್ಲಿನ ಘಟನೆಗಳನ್ನು ರಾಜ್ಯ ಸಮಿತಿಗೆ ತರಲಾಗಿದೆ.ದೊಡ್ಡ ಪಕ್ಷದಲ್ಲಿ ಇಂತಹ ಘಟನೆ ಸಾಮಾನ್ಯ ಎಂದರು.
ಇದನ್ನೂ ಓದಿ :ಸುರಕ್ಷಿತ ಕ್ಷೇತ್ರ ಹಿಡಿದುಕೊಂಡು ಒಂದೇ ಕಡೆ ಗೂಟ ಹೊಡೆದುಕೊಂಡು ಕೂತಿಲ್ಲ: ಆಯನೂರು
ಆಯನೂರು ಮಂಜುನಾಥ್ ಹಿರಿಯರು. ಅವರು ನಾಲ್ಕು ಮನೆಗಳನ್ನು ಕಂಡಿದ್ದಾರೆ, ಇಡೀ ಜಿಲ್ಲೆಗೆ ಸಂಬಂಧಿಸಿದ ವಿಚಾರಗಳನ್ನು ರಾಜ್ಯ ಸಮಿತಿಗೆ ಕಳುಹಿಸಲಾಗಿದೆ.ಎಲ್ಲವನ್ನು ಸರಿದಾರಿಗೆ ತರುವ ಕೆಲಸ ಪಕ್ಷದಿಂದ ಆಗುತ್ತದೆ. ನಿಶ್ಚಿತವಾಗಿ ಜಿಲ್ಲೆಯಲ್ಲಿ ಏಳಕ್ಕೆ ಏಳು ಕ್ಷೇತ್ರಗಳನ್ನೂ ಗೆಲ್ಲುತ್ತೇವೆ.ತಪ್ಪು ತಿಳುವಳಿಕೆ ಇದ್ದವರನ್ನು ಸರಿ ಮಾಡುತ್ತೇವೆ ಎಂದರು.