Advertisement

ಎಲ್ಲ ಪಕ್ಷಗಳು ಹೊಸ ಮಾದರಿಯ ಪ್ರಚಾರಕ್ಕೆ ನಾಂದಿ ಹಾಡಲಿ

12:58 AM Jan 10, 2022 | Team Udayavani |

ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್‌, ಗೋವಾ, ಮಣಿಪುರ ರಾಜ್ಯಗಳ ವಿಧಾನಸಭೆ ಚುನಾವಣೆಗಾಗಿ ಶನಿವಾರವಷ್ಟೇ ಕೇಂದ್ರ ಚುನಾವಣ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ. ಅದರಂತೆ ಫೆ.10ರಿಂದ ಮಾ.7ರ ವರೆಗೆ ಈ ರಾಜ್ಯಗಳ ಚುನಾವಣೆ ನಡೆಯಲಿದ್ದು, ಮಾ.10ಕ್ಕೆ ಫ‌ಲಿತಾಂಶ ಹೊರಬೀಳಲಿದೆ.

Advertisement

ಕೊರೊನಾ ಸಂಕಷ್ಟದ ಸಮಯದಲ್ಲೇ ಈ ಚುನಾವಣೆ ನಡೆಯುತ್ತಿದ್ದು, ಕೇಂದ್ರ ಚುನಾವಣ ಆಯೋಗ, ರಾಜಕೀಯ ಪಕ್ಷಗಳು ಮತ್ತು ನಾಗರಿಕರು ಎಚ್ಚರಿಕೆಯಿಂದಲೇ ಇರಬೇಕಾದ ಅನಿವಾರ್ಯತೆಯೂ ಇದೆ. ಚುನಾವಣೆ ವಿಚಾರದಲ್ಲಿ ಒಂದಷ್ಟು ನಿರ್ಲಕ್ಷ್ಯ ವಹಿಸಿದರೂ ಕೊರೊನಾ ಸೊಂಕು ಹೆಚ್ಚಿನ ಪ್ರಮಾಣದಲ್ಲಿ ಹಬ್ಬುವ  ಎಲ್ಲ ಸಾಧ್ಯತೆಗಳೂ ಇವೆ.

ಈ ಅಂಶವನ್ನು ಗಮನದಲ್ಲಿ ಇರಿಸಿಕೊಂಡೇ ಕೇಂದ್ರ ಚುನಾವಣ ಆಯೋಗ. ಜ.15ರ ವರೆಗೆ ಯಾವುದೇ ರ್ಯಾಲಿ, ಪಾದಯಾತ್ರೆ, ರೋಡ್‌ ಶೋ ನಡೆಸದಂತೆ ರಾಜಕೀಯ ಪಕ್ಷಗಳಿಗೆ ಸೂಚನೆ ನೀಡಿದೆ. ಅಂದರೆ ಈ ಎಲ್ಲದಕ್ಕೂ ನಿರ್ಬಂಧ ಹೇರಿದೆ. ಜ.16ರ ಬಳಿಕ, ಪರಿಸ್ಥಿತಿ ನೋಡಿಕೊಂಡು ಇವುಗಳಿಗೆ ಅನುಮತಿ ನೀಡುವ ಅಥವಾ ನಿರಾಕರಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದೆ.

ಈಗಿನ ಪರಿಸ್ಥಿತಿಯಲ್ಲಿ ಕೇಂದ್ರ ಚುನಾವಣ ಆಯೋಗ ತೆಗೆದುಕೊಂಡಿರುವ ಈ ಕ್ರಮ ಉತ್ತಮವಾದದ್ದೇ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳೂ ಆಗಬೇಕು. ಹಾಗೆಯೇ ಕೊರೊನಾ ಸಂಕಷ್ಟವನ್ನು ಯಶಸ್ವಿಯಾಗಿ ನಿವಾರಿಸಬೇಕು. ಕೊರೊನಾದ ನೆಪವೊಡ್ಡಿ ಚುನಾವಣೆಗಳನ್ನು ಮುಂದೂಡಿದರೆ ಆಡಳಿತ ಯಂತ್ರ ಕುಸಿಯುವ ಭೀತಿ ಉಂಟಾಗುತ್ತದೆ. ಹೀಗಾಗಿ ಲಭ್ಯ ಸಂಪನ್ಮೂಲಗಳನ್ನು ಬಳಸಿಕೊಂಡೇ ಚುನಾವಣೆಗಳನ್ನು ನಡೆಸುತ್ತಿರುವುದು ಸೂಕ್ತವಾಗಿದೆ.

ಕೇಂದ್ರ ಚುನಾವಣ ಆಯೋಗದ ಈ ನಿರ್ಬಂಧ ರಾಜಕೀಯ ಪಕ್ಷಗಳಿಗೆ ಹೊಸ ಸವಾಲನ್ನು ನೀಡಿದೆ. ಪಕ್ಷಗಳ ನಾಯಕರು, ಮತದಾರರನ್ನು ಸೆಳೆಯಲು ಆನ್‌ಲೈನ್‌ ಅಥವಾ ವರ್ಚುವಲ್‌ ಮಾರ್ಗವನ್ನು ಅನುಸರಿಸಬೇಕು. 2014ರ ಚುನಾವಣೆಯಲ್ಲೇ ಬಿಜೆಪಿ, ಎಲ್ಲ ಮತದಾರರನ್ನು ರ್ಯಾಲಿಗಳ ಮೂಲಕ ತಲುಪಲು ಸಾಧ್ಯವಿಲ್ಲ ಎಂಬುದನ್ನು ಮನಗಂಡು ಹೊಸ ಮಾದರಿಯ ಪ್ರಚಾರ ತಂತ್ರದ ಮೊರೆ ಹೋಗಿತ್ತು. ಈಗಲೂ ಅಷ್ಟೇ ಎಲ್ಲ ರಾಜಕೀಯ ಪಕ್ಷಗಳು ವರ್ಚುವಲ್‌ ರ್ಯಾಲಿಗಳ ಮೂಲಕ ಜನರ ಹತ್ತಿರ ಹೋಗಬಹುದು.

Advertisement

ಇದನ್ನೂ ಓದಿ:ರಸ್ತೆ ಬಂದ್‌ ಮಾಡಿ ಮಹಾರಾಷ್ಟ್ರ ಸಂಪರ್ಕ ಕಡಿತ; ಕರ್ಫ್ಯೂ ಯಶಸ್ವಿ

ಕೊರೊನಾ ಎಂಬುದು ಈಗ ನಮ್ಮ ಸುತ್ತಲೇ ಇರುವ ರೋಗವಾಗಿ ಮಾರ್ಪಟ್ಟಿದೆ. ಇದರಿಂದ ಸದ್ಯಕ್ಕೆ ಮುಕ್ತಿ ಸಿಗುವುದು ಕಷ್ಟವೇ ಸರಿ. ಒಂದರ ಮೇಲೊಂದರಂತೆ ರೂಪಾಂತರಿಗಳ ಕಾಟವೂ ಹೆಚ್ಚಾಗಿದೆ. ಹೀಗಾಗಿ ಈ ಪಂಚರಾಜ್ಯ ಚುನಾವಣೆಯಲ್ಲಿ ಹೊಸ ಮಾದರಿಯನ್ನೇ ಹುಟ್ಟುಹಾಕಬಹುದು. ಇದನ್ನು ಮುಂದಿನ ದಿನಗಳಲ್ಲಿ ಎಲ್ಲ ಚುನಾವಣೆಗಳಲ್ಲಿ ಬಳಕೆ ಮಾಡುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ.

ಏಕೆಂದರೆ ಈ ಪಂಚರಾಜ್ಯ ಚುನಾವಣೆಗಳ ಬಳಿಕ 2022ರಲ್ಲೇ ಬೇರೆ ಬೇರೆ ರಾಜ್ಯಗಳ ಚುನಾವಣೆ ಬರಲಿದೆ. ಮುಂದಿನ ವರ್ಷವೂ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಚುನಾವಣೆ ಇದೆ. 2024ಕ್ಕೆ ಲೋಕಸಭೆ ಚುನಾವಣೆಯೂ ಬರಲಿದೆ. ಒಂದು ವೇಳೆ ಕೊರೊನಾ ಈ ವರ್ಷವೇ ಸಂಪೂರ್ಣವಾಗಿ ನಿರ್ಮೂಲನೆಯಾದರೂ, ಹೆಚ್ಚು ವೆಚ್ಚವಿಲ್ಲದೇ ಅತ್ಯಾಧುನಿಕ ಮತ್ತು ಸುಧಾರಿತ ತಂತ್ರಜ್ಞಾನಗಳ ಮೂಲಕ ಚುನಾವಣೆ ನಡೆಸಲು ಒಂದು ಹೊಸ ಮಾರ್ಗ ಸಿಕ್ಕಂತಾಗುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next