ಶಿಗ್ಗಾವಿ: ದೇಶದ ಸ್ವಾತಂತ್ರ್ಯ ನಂತರ ಕೃಷಿ ಕ್ಷೇತ್ರಕ್ಕೆ ದೊಡ್ಡ ಪ್ರಮಾಣದ ಬಂಡವಾಳ ಹೂಡಿಕೆಯಾಗಿಲ್ಲ. ಕೃಷಿ ಸಾಲ, ಗ್ರಾಮೀಣ ಆರ್ಥಿಕ ನೀತಿ ಬದಲಾಗಬೇಕೆಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಪಟ್ಟಣದ ಕೃಷಿ ಉತ್ಪನ್ ಮಾರುಕಟ್ಟೆ ಸಮಿತಿ ಆವರಣದಲ್ಲಿ ಕೃಷಿ ಯಂತ್ರೋಪಕರಣ ಸಂಗ್ರಹಣಾ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಪ್ರಸಕ್ತ ಸಾಲಿನಲ್ಲಿ ರಾಜ್ಯದ ರೈತ ಸಮುದಾಯ ಸಂಕಷ್ಟ ಅನುಭವಿಸಿದೆ. ಈ ಮೊದಲು ಮುಂಗಾರು ಮಳೆಯಾಗದೇ ತಡವಾಗಿ ಹಂಗಾಮು ಆರಂಭವಾಗಿತ್ತು. ನಂತರ ಅತಿಯಾದ ಮಳೆ, ಪ್ರವಾಹದಿಂದ ಇದ್ದಬಿದ್ದ ಬೆಳೆ ನಾಶ ಮಾಡಿ ರೈತ ಸಮುದಾಯದ ಬೆನ್ನೆಲುಬು ಮುರಿಯುವಂತಾಗಿದ್ದು, ಇದರಿಂದ ಕೃಷಿಕರ ಸಾಕಷ್ಟು ಹಿನ್ನಡೆ ಅನುಭವಿಸುವಂತಾಗಿದೆ ಎಂದರು.
ರೈತರು ಸಾಮೂಹಿಕ ಸಹಕಾರ ಕೃಷಿ ಪದ್ಧತಿ ಅನುಸರಿಸಿ ಖರ್ಚು ವೆಚ್ಚ ಕಡಿಮೆ ಮಾಡಿ ಸುಧಾರಣಾ ಕ್ರಮ ಕೈಗೊಳ್ಳಬೇಕು. ಬದಲಾದ ಕಾಲಕ್ಕೆ ಸಮುದಾಯ ಸಹಕಾರ ರೂಪದಲ್ಲಿ ಕೃಷಿಕಾರ್ಮಿಕರು ಬಳಕೆ ಮಾಡಬೇಕೆಂದ ಅವರು, ಸರ್ಕಾರವೂ ರೈತರ ಸಂಕಷ್ಟದ ನೆರವಿಗೆ ದಾವಿಸಿದೆ. ಕೇಂದ್ರ ಸರ್ಕಾರ ಜಾರಿ ಮಾಡಿದ್ದ ಕೃಷಿ ಸಮ್ಮಾನ ಯೋಜನೆ 6 ಸಾವಿರ ರೂ.ಗೆ ರಾಜ್ಯ ಸರ್ಕಾರ 4 ಸಾವಿರ ರೂ. ಬೆಂಬಲ ಸೇರ್ಪಡೆಗೊಳಿಸಿ ನೀಡಲಾಗುವುದು. ಜತೆಗೆ ನೆರೆಯಿಂದ ಕೃಷಿ ಜಮೀನು ಹಾನಿ ಮತ್ತು ಬಿತ್ತನೆ ಬೀಜ ಗೊಬ್ಬರ. ಕಾರ್ಮಿಕರ ಶ್ರಮ ಬೆಳೆಯ ಪ್ರಮಾಣ ಅನುಸರಿಸಿ ಹಾನಿ ಪರಿಗಣಿಸಲಾಗುವುದು. ಈಗಾಗಲೇ ಹಾನಿ ಪ್ರಮಾಣದ ಶೇ. 40 ಕ್ಷೇತ್ರದ ವರದಿ ತಯಾರಿಸಿದ್ದು, ಶೇ. 60 ರಷ್ಟು ಸರ್ವೇ ಬಾಕಿ ಉಳಿದುಕೊಂಡಿದೆ. ಆದಷ್ಟು ಬೇಗ ಕೇಂದ್ರಕ್ಕೆ ವರದಿ ನೀಡಿ ಪರಿಹಾರ ಪಡೆಯಲಾಗುವುದು ಎಂದರು.
ತಾಲೂಕಿಗೆ ಕಳೆದ ಸಾಲಿನ ಬೆಳೆ ವಿಮೆ ಪರಿಹಾರದ 33 ಕೋಟಿ ರೂ. ಸಂದಾಯವಾಗಿದೆ. ಇದರಿಂದ 10 ಸಾವಿರ ರೈತರಿಗೆ ಲಾಭವಾಗಿದೆ. ಪ್ರಸಕ್ತ ಸಾಲಿನಲ್ಲಿ ಬೆಳೆವಿಮೆ ಕಂತನ್ನು ಹೆಚ್ಚು ರೈತರು ಭರಣ ಮಾಡಿಲ್ಲ. ಮುಂದಿನ ಸಾಲಿನಲ್ಲಿ ವಿಮಾ ಸೌಲಭ್ಯತೆ ದೊರಕುವುದು ಕಷ್ಟವೆಂದರು. ರಾಜ್ಯ ಸರ್ಕಾರ ನೀರಾವರಿ ಅಥವಾ ಬೇರೆ ಹೊಣೆಗಾರಿಕೆ ನೀಡುವ ಬದಲು ಗೃಹ ಖಾತೆ ನೀಡಿ ರಾಜ್ಯದ ನಾಗರಿಕ ಸಂರಕ್ಷಣೆಯ ಹೆಚ್ಚಿನ ಹೊಣೆ ನೀಡಿ ಜವಾಬ್ದಾರಿ ಹೆಚ್ಚಿಸಿದೆ. ಕಾನೂನು ಸುವ್ಯವಸ್ಥೆ ಪಾಲನೆ ದಕ್ಷತೆ ಹಾಗೂ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿ ಕ್ಷೇತ್ರದ ಜನತೆಗೆ ಹೆಸರು ತರುವ ಕಾರ್ಯ ಮಾಡುವುದಾಗಿ ತಿಳಿಸಿದರು.
ಎಪಿಎಂಸಿ ಅಧ್ಯಕ್ಷೆ ಪ್ರೇಮಾ ಪಾಟೀಲ, ಸದಸ್ಯ ಹನುಮರೆಡ್ಡಿ ನಡುವಿನಮನಿ, ತಿಪ್ಪಣ್ಣ ಸಾತಣ್ಣವರ, ತಾಪಂ ಅಧ್ಯಕ್ಷೆ ಪಾರವ್ವ ಆರೇರ, ಜಿಪಂ ಸದಸ್ಯ ಶೋಭಾ ಗಂಜಿಗಟ್ಟಿ, ದೀಪಾ ಅತ್ತಿಗೇರಿ, ದೇವಣ್ಣ ಚಾಕಲಬ್ಬಿ, ಲಕ್ಷ ್ಮವ್ವ ಮುಂದಿನಮನಿ, ಶಿವಾನಂದ ಮ್ಯಾಗೇರಿ, ಶ್ರೀಕಾಂತ ಬುಳ್ಳಕ್ಕನವರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿಜಾಪುರ ಹಾಗೂ ಕಾರ್ಯಕರ್ತರು ಇದ್ದರು.