Advertisement

ಒತ್ತು ಶ್ಯಾವಿಗೆ ಕಲಿಸಿದ ಪಾಠ

08:59 PM Sep 03, 2019 | mahesh |

ಶ್ಯಾವಿಗೆ ಮಾಡಲು ಒಂದು ಶುಭ ದಿನವನ್ನು ಗೊತ್ತು ಮಾಡಿದೆವು. “ಸರಿಯಾಗಿ ಬರಲಿ ದೇವರೆ’ ಅಂತ ಗಣಪತಿಗೆ ಒಂದು ರೂಪಾಯಿಯನ್ನೂ ತೆಗೆದಿಟ್ಟಿದ್ದಾಯ್ತು. ಅಕ್ಕಿಯನ್ನು ರುಬ್ಬಿ ಒಂದು ಅಂದಾಜಿನಲ್ಲಿ ನೀರು ಸೇರಿಸಿ, ಮಗುಚಿ ಬೇಯಲು ಇಟ್ಟೆವು. ಶ್ಯಾವಿಗೆಯ ಒರಳು ವೀರಯೋಧನಂತೆ ಸಿದ್ಧನಾಗಿ ನಿಂತಿತ್ತು.

Advertisement

ಸುಮಾರು ಮೂವತ್ತೈದು ವರ್ಷಗಳ ಹಿಂದಿನ ಘಟನೆಯಿದು. ಆಗ ಮದುವೆಯಾದ ಹೊಸದು. ಭಾವ ಮತ್ತು ಓರಗಿತ್ತಿಯ ಜೊತೆ ನಮ್ಮ ವಾಸ್ತವ್ಯ. ನನಗೆ ನಿತ್ಯದ ಅಡುಗೆ, ತಿಂಡಿ ತಿನಿಸುಗಳನ್ನು ಮಾಡಲು ಬರುತ್ತಿತ್ತೇ ಹೊರತು ವಿಶೇಷವಾದದ್ದು ಏನು ಮಾಡಲೂ ಬರುತ್ತಿರಲಿಲ್ಲ. ನಮ್ಮದೇ ಹೋಟೆಲ್‌ ಇದ್ದುದರಿಂದ ಓರಗಿತ್ತಿಗೂ ಹೆಚ್ಚಿನ ಅಡುಗೆ ಮಾಡಲು ಗೊತ್ತಿರಲಿಲ್ಲ. ಸ್ಪೆಷಲ್‌ ಆಗಿ ಏನನ್ನಾದರೂ ಮಾಡಿ, ಗಂಡ, ಭಾವನನ್ನು ಮೆಚ್ಚಿಸಬೇಕೆಂಬ ಹುಚ್ಚಾಸೆ. ಎಷ್ಟಾದರೂ ಹೊಸದಾಗಿ ಮದುವೆಯಾದವಳಲ್ವೇ?

ಅಕ್ಕ-ತಂಗಿಯರಿಬ್ಬರೂ ಸೇರಿ, ಏನು ಅಡುಗೆ ಮಾಡಬಹುದು ಅಂತ ತಲೆ ಕೆಡಿಸಿಕೊಂಡಾಗ ನಮಗೆ ಹೊಳೆದದ್ದು ಒತ್ತು ಶ್ಯಾವಿಗೆ. ಅದರ ಒರಳೇನೋ ಮನೆಯಲ್ಲಿತ್ತು. ಆದರೆ, ಅದನ್ನು ಮಾಡೋದು ಕಷ್ಟ ಅಂತಲೂ ಗೊತ್ತಿತ್ತು. ಯೋಚಿಸುತ್ತಾ ಕುಳಿತಾಗ ಒಂದು ಉಪಾಯ ಹೊಳೆಯಿತು. ಈಗಿನಂತೆ ಆಗೆಲ್ಲಾ ಗೂಗಲ್, ಯುಟ್ಯೂಬ್‌ಗಳೆಲ್ಲ ಇರಲಿಲ್ಲ. ಹಾಗಾಗಿ ನನ್ನ ಅಕ್ಕನಿಗೆ ಫೋನ್‌ ಮಾಡಿ, ಒತ್ತು ಶ್ಯಾವಿಗೆ ಹೇಗೆ ಮಾಡೋದು ಅಂತ ಕೇಳಲು ನಿರ್ಧರಿಸಿದೆ. ಆಗೆಲ್ಲಾ ತುಂಬಾ ಹೊತ್ತು ಫೋನ್‌ನಲ್ಲಿ ಮಾತಾಡಿದರೆ ಬಿಲ್‌ ಉದ್ದಕ್ಕೆ ಏರುತ್ತಿತ್ತಲ್ಲ; ಆದ್ದರಿಂದ ಅವಳು ಹೇಳಿದ್ದನ್ನು ಬೇಗ ಬೇಗ ಕೇಳಿಸಿಕೊಂಡು, ನೆನಪಿದ್ದಷ್ಟನ್ನು ಬರೆದುಕೊಂಡೆ.

ಶ್ಯಾವಿಗೆ ಮಾಡಲು ಒಂದು ಶುಭ ದಿನವನ್ನು ಗೊತ್ತು ಮಾಡಿದೆವು. “ಸರಿಯಾಗಿ ಬರಲಿ ದೇವರೆ’ ಅಂತ ಗಣಪತಿಗೆ ಒಂದು ರೂಪಾಯಿಯನ್ನೂ ತೆಗೆದಿಟ್ಟಿದ್ದಾಯ್ತು. ಅಕ್ಕಿಯನ್ನು ರುಬ್ಬಿ ಒಂದು ಅಂದಾಜಿನಲ್ಲಿ ನೀರು ಸೇರಿಸಿ, ಮಗುಚಿ ಬೇಯಲು ಇಟ್ಟೆವು. ಶ್ಯಾವಿಗೆಯ ಒರಳು ವೀರಯೋಧನಂತೆ ಸಿದ್ಧನಾಗಿ ನಿಂತಿತ್ತು. ಬೆಂದ ಮುದ್ದೆಗಳನ್ನು ಒಂದೊಂದಾಗಿ ಒರಳಿಗೆ ಹಾಕಿದೆವು. ಮೊದಲು ನಾನು ಒತ್ತಲು ಸಿದ್ಧಳಾದೆ.

ಬಿಸಿ ಇದ್ದುದರಿಂದ ಮೊದಮೊದಲು ಒತ್ತಲು ಸ್ವಲ್ಪ ಸುಲಭವಾಯಿತು. ತಣ್ಣಗಾಗುತ್ತಾ ಹೋದಂತೆ ಹಿಟ್ಟು, ಕೆಳಗಿಳಿಯುವುದೇ ಇಲ್ಲವೆಂದು ಮುಷ್ಕರ ಹೂಡಿಬಿಟ್ಟಿತು. ಅರ್ಧ ಒತ್ತುವಷ್ಟರಲ್ಲಿ ಬಲ ಹಾಕಿ, ಹಾಕಿ, ಸುಸ್ತಾಗಿ ಬೆವರಿಳಿಯತೊಡಗಿತು. ಈಗ ಓರಗಿತ್ತಿ ಒತ್ತುವ ವೇದಿಕೆಗೆ ಬಂದರು. ಅವರು ಒಂದು ಸಲ ತಮ್ಮ ಶಕ್ತಿಯನ್ನೆಲ್ಲಾ ಹಾಕಿ ಒತ್ತಿದರು ನೋಡಿ! ಅದೇನಾಯಿತೋ ಒರಳಿನ ಮೂರೂ ಕಾಲುಗಳು ಮೂರು ದಿಕ್ಕುಗಳಿಗೆ ತಿರುಚಿಕೊಂಡು, ಕಡೆಗೆ ನೆಲದ ಮೇಲೆ ಕುಳಿತು ಬಿಟ್ಟಿತು. ಅದನ್ನು ಎಬ್ಬಿಸೋದಂತೂ ಅಸಾಧ್ಯದ ಮಾತಾಗಿತ್ತು. ಅಳುವುದೊಂದೇ ಬಾಕಿ. ಅಸಹಾಯಕರಾಗಿ ಅಲ್ಲಿಗೇ ನಿಲ್ಲಿಸಿ, ಅನ್ನಕ್ಕೆ ಇಟ್ಟು ಬಿಟ್ಟೆವು.

Advertisement

ಶ್ಯಾವಿಗೆ ಸಾಹಸ ಶುರುಮಾಡುವ ಮೊದಲೇ ಅದಕ್ಕೆ ಬೇಕಾದ ತೆಂಗಿನಕಾಯಿ ಹಾಲು, ಚಿತ್ರಾನ್ನಕ್ಕೆ ಅಣಿಮಾಡಿಕೊಂಡಿದ್ದೆವು. ಮಾಡಿದ ಶ್ಯಾವಿಗೆಯಲ್ಲೇ ಸ್ವಲ್ಪವನ್ನು ಚಿತ್ರಾನ್ನ ಮಾಡಿ, ಉಳಿದುದನ್ನು ಹಾಲಿಗೆಂದು ಇಟ್ಟೆವು.

ಗಂಡಸರು ಊಟಕ್ಕೆ ಬಂದ ತಕ್ಷಣ ಅವರನ್ನು ಸ್ವಾಗತಿಸಿದ್ದು ಕೈಕಾಲು ಮುರಿದುಕೊಂಡು ಬಿದ್ದಿದ್ದ ಒರಳು. ಪ್ರಶ್ನಾರ್ಥಕವಾಗಿ ನಮ್ಮತ್ತ ನೋಡಿ, ಊಟಕ್ಕೆ ಕುಳಿತರು. ಅವರು ಚಿತ್ರಾನ್ನ° ತಿನ್ನಲು ಶುರುಮಾಡಿದಾಗ ನಮ್ಮಿಬ್ಬರ ಕಣ್ಣುಗಳು ಅವರನ್ನೇ ಎವೆಯಿಕ್ಕದೆ ನೋಡುತ್ತಿದ್ದವು. ಹೊಗಳಬಹುದು ಎಂಬ ನಮ್ಮ ನಿರೀಕ್ಷೆ ಸುಳ್ಳಾಗಿತ್ತು. ಇಬ್ಬರೂ ಅದನ್ನು ತಿನ್ನಲು ಒದ್ದಾಡುತ್ತಿದ್ದರು. ಗಳಿಗೆಗೊಮ್ಮೆ ನೀರು ಕುಡಿಯುತ್ತಾ, ಕಷ್ಟಪಟ್ಟು ನುಂಗುತ್ತಾ, ಅನ್ನ ಬಡಿಸಲು ಹೇಳಿ, ಮೊಸರಿನಲ್ಲಿ ಊಟ ಮಾಡಿ ಎದ್ದರು.

ಈಗ ನಮ್ಮಿಬ್ಬರ ಸರದಿ. ಏನಾಗಿರಬಹುದು ಎಂದು ಯೋಚಿಸುತ್ತಾ ಬಾಯಿಗಿಟ್ಟೆವು. ನಮಗೀಗ ಅವರಿಬ್ಬರ ಒದ್ದಾಟ ಅರ್ಥವಾಗಿತ್ತು. “ನೀರಿಳಿಯದ ಗಂಟಲಲ್ಲಿ ಕಡುಬು ತುರುಕಿದಂತೆ’ ಎಂಬ ಮುದ್ದಣ-ಮನೋರಮೆಯರ ಸಲ್ಲಾಪ ನೆನಪಿಗೆ ಬರುವಷ್ಟು ರುಚಿಯಾಗಿತ್ತು ಶ್ಯಾವಿಗೆ. ಆಮೇಲೆ ಗೊತ್ತಾಯ್ತು, ಹಿಟ್ಟಿಗೆ ನೀರು ಕಡಿಮೆಯಾಗಿ, ಗಟ್ಟಿಯಾಗಿದ್ದೇ ಇಷ್ಟೆಲ್ಲಾ ಅನಾಹುತಕ್ಕೆ ಕಾರಣ ಅಂತ. ಕೊನೆಗೆ, ಮಾಡಿದ ಶ್ಯಾವಿಗೆಯನ್ನು ತಿನ್ನಲಾಗದೆ ದನಗಳಿಗೆ ಹಾಕಿದೆವು.

ಸರಿಯಾಗಿ ಕಲಿಯದೆ ಇನ್ನೆಂದೂ ಹೊಸ ತಿಂಡಿಗಳನ್ನು ಮಾಡಲೇಬಾರದು ಎಂಬ ತೀರ್ಮಾನಕ್ಕೆ ಬಂದೆವು. ಅದರ ನಂತರ ನಾವೇನಾದರೂ ಮಾಡುತ್ತೇವೆ ಅಂತ ಹೇಳಿದರೆ ಸಾಕು; ಇಬ್ಬರೂ ಹೋಟೆಲ್‌ನಲ್ಲೇ ಹೊಟ್ಟೆ ತುಂಬಿಸಿಕೊಂಡು ಬರುತ್ತಿದ್ದರು!

– ಪುಷ್ಪ ಎನ್‌.ಕೆ. ರಾವ್‌

Advertisement

Udayavani is now on Telegram. Click here to join our channel and stay updated with the latest news.

Next