ರಾಜೀನಾಮೆಯನ್ನು ನಿಮ್ಮ ವಿವೇಚನೆಯಂತೆ ಇತ್ಯರ್ಥಪಡಿಸಬೇಕೆಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ ರಾಜೀನಾಮೆ ಅರ್ಜಿ ವಿಲೇವಾರಿ ಮಾಡದೆ ಅನರ್ಹತೆಯ ಅಸ್ತ್ರ ಪ್ರಯೋಗಿಸಿರುವುದರ ಹಿಂದೆ ಯಾವ ಲೆಕ್ಕಾಚಾರ ಇದೆ ಎನ್ನುವುದು ಜಿಜ್ಞಾಸೆಗೆ ಅರ್ಹವಾದ ವಿಚಾರ.
ಕರ್ನಾಟಕದ ರಾಜಕೀಯ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.ಇದೀಗ ಸ್ಪೀಕರ್ ಕೆ. ಆರ್. ರಮೇಶ್‌ಕುಮಾರ್ ಪಕ್ಷದ ವಿರುದ್ಧ ಬಂಡೆದ್ದು ರಾಜೀನಾಮೆ ನೀಡಿದ್ದ 14 ಶಾಸಕರನ್ನು ಅನರ್ಹಗೊಳಿಸಿದ್ದಾರೆ. ಕಳೆದ ಗುರುವಾರ ಅನರ್ಹಗೊಂಡ ಮೂವರು ಶಾಸಕರನ್ನೂ ಸೇರಿಸಿದರೆ 17 ಶಾಸಕರು ಹಾಲಿ ವಿಧಾನಸಭೆಯಿಂದ ಅನರ್ಹಗೊಂಡಂತಾಯಿತು. ಈ ಮೂಲಕ ಸದನದ ಸಂಖ್ಯಾಬಲ 207ಕ್ಕೆ ಕುಸಿದಿದ್ದು ಬಹುಮತಕ್ಕೆ 104 ಶಾಸಕರು ಇದ್ದರೆ ಸಾಕು. ಇಷ್ಟು ಶಾಸಕರು ಬಿಜೆಪಿ ಬಳಯಿರುವುದರಿಂದ ವಿಶ್ವಾಸಮತ ಸಾಬೀತುಪಡಿಸುವುದು ಖಚಿತ.
ಆದರೆ ಸ್ಪೀಕರ್ ನಡೆ ಮಾತ್ರ ಅಚ್ಚರಿ ಹುಟ್ಟಿಸಿರುವುದಲ್ಲದೆ ವ್ಯಾಪಕ ಟೀಕೆಗೂ ಗುರಿಯಾಗಿದೆ. ಕಾನೂನು ತಜ್ಞರು ಮತ್ತು ಬಿಜೆಪಿ ನಾಯಕರು ಸ್ಪೀಕರ್ ನಡೆ ಸಂವಿಧಾನಾತ್ಮಕವಾಗಿ ಮತ್ತು ಕಾನೂನು ದೃಷ್ಟಿಕೋನದಿಂದ ಸಮರ್ಪಕವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಶಾಸಕರು ತಿಂಗಳ ಹಿಂದೆಯೇ ರಾಜೀನಾಮೆ ನೀಡಿದ್ದಾರೆ. ಈ ರಾಜೀನಾಮೆಯನ್ನು ನಿಮ್ಮ ವಿವೇಚನೆಯಂತೆ ಇತ್ಯರ್ಥಪಡಿಸಬೇಕೆಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ ರಮೇಶ್ ಕುಮಾರ್ ರಾಜೀನಾಮೆ ಅರ್ಜಿಗಳನ್ನು ವಿಲೇವಾರಿ ಮಾಡದೆ ದಿಢೀರ್ ಎಂದು ಅನರ್ಹತೆಯ ಅಸ್ತ್ರ ಪ್ರಯೋಗಿಸಿರುವುದರ ಹಿಂದೆ ಯಾವ ಲೆಕ್ಕಾಚಾರ ಇದೆ ಎನ್ನುವುದು ಜಿಜ್ಞಾಸೆಗೆ ಅರ್ಹವಾದ ವಿಚಾರ. ರಾಜ್ಯ ಕಂಡ ಅತ್ಯುತ್ತಮ ಸ್ಪೀಕರ್ ಎಂದು ಹೆಸರು ಗಳಿಸಿದ್ದ ರಮೇಶ್ ಕುಮಾರ್ ಈ ಸಲದ ರಾಜಕೀಯ ರಂಪಾಟದಲ್ಲಿ ತನ್ನ ಘನತೆಗೆ ತಕ್ಕಂತೆ ನಡೆದುಕೊಂಡಿಲ್ಲ ಎಂಬ ಅಪವಾದಕ್ಕೂ ಗುರಿಯಾಗಿದ್ದಾರೆ. ಶಾಸಕರ ರಾಜೀನಾಮೆ ಪ್ರಹಸನ ಪ್ರಾರಂಭವಾದ ಬಳಿಕ ಸ್ಪೀಕರ್ ನಡೆ ಹೆಜ್ಜೆಗೂ ಹೆಜ್ಜೆಗೂ ಅನುಮಾನ ಹುಟ್ಟಿಸುವಂತಿತ್ತು. ಸ್ಪೀಕರ್ ಹುದ್ದೆಗೆ ಆಯ್ಕೆಯಾದವರು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕೆನ್ನುವುದು ಸಂವಿಧಾನದ ಆಶಯ. ಆದರೆ ರಮೇಶ್ ಕುಮಾರ್ ತನ್ನ ಪಕ್ಷದ ಸರಕಾರವನ್ನು ಉಳಿಸಲು ಪ್ರಯತ್ನಿಸಿದರೇ ಎನ್ನುವ ಅನುಮಾನ ಬರುವುದು ಸಹಜ.
ಶಾಸಕರ ಅನರ್ಹತೆ ವಿಚಾರವನ್ನು ಅಂತಿಮವಾಗಿ ನ್ಯಾಯಾಲಯವೇ ಇತ್ಯರ್ಥಪಡಿಸುತ್ತದೆ. ಸ್ಪೀಕರ್ ಕೈಗೊಂಡ ನಿರ್ಧಾರ ಸರಿಯೇ ಅಥವಾ ತಪ್ಪೇ, ಸಂವಿಧಾನ ಬದ್ಧವಾಗಿದೆಯೇ, ನಿಯಮಾವಳಿಗಳಿಗೆ ವಿರುದ್ಧವಾಗಿದೆಯೇ ಎನ್ನುವುದೆಲ್ಲ ನ್ಯಾಯಾಲಯದಲ್ಲಿ ಇತ್ಯರ್ಥವಾಗಬೇಕಾದ ವಿಚಾರಗಳು.
ಆದರೆ ಶಾಸಕರನ್ನು ಅನರ್ಹಗೊಳಿಸುವ ಮೂಲಕ ಪಕ್ಷಾಂತರ ಮಾಡುವವರಿಗೆ ತಕ್ಕ ಪಾಠವೊಂದನ್ನು ಕಲಿಸಿದಂತಾಯಿತು ಎನ್ನುವುದು ಮಾತ್ರ ನಿಜ. ಸ್ಪೀಕರ್ ನಿರ್ಧಾರದಿಂದ ಯಾವ ಪಕ್ಷಕ್ಕೆ ಲಾಭವಾಯಿತು, ಯಾವ ಪಕ್ಷಕ್ಕೆ ಹಾನಿಯಾಯಿತು ಎಂದೆಲ್ಲ ಚರ್ಚಿಸುವ ಬದಲು ಒಟ್ಟಾರೆಯಾಗಿ ಪ್ರಜಾತಂತ್ರ ವ್ಯವಸ್ಥೆಯ ಮೇಲೆ ಇದರಿಂದಾಗುವ ಪರಿಣಾಮ ಏನು ಎನ್ನುವುದು ಈ ಸಂದರ್ಭದಲ್ಲಿ ಮುಖ್ಯವಾಗುತ್ತದೆ.
ಅನರ್ಹಗೊಂಡ ಸದಸ್ಯರು ಪಕ್ಷಾಂತರ ನಿಷೇಧ ಕಾಯಿದೆ ಪ್ರಕಾರ ವಿಧಾನಸಭೆಯ ಈ ಅವಧಿ ಮುಗಿಯುವ ತನಕ ಯಾವುದೇ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಹಾಗೂ ಯಾವುದೇ ಸಾಂವಿಧಾನಿಕ ಹುದ್ದೆಯನ್ನು ಹೊಂದುವಂತಿಲ್ಲ.ಚುನಾವಣೆಯಲ್ಲಿ ಒಂದು ಪಕ್ಷದಿಂದ ಗೆದ್ದ ಬಳಿಕ ಸಚಿವ ಸ್ಥಾನ ಸಿಗಲಿಲ್ಲ ಎಂದೋ, ಸರಿಯಾದ ಸ್ಥಾನಮಾನ ಸಿಗಲಿಲ್ಲ ಎಂದೋ ಬಂಡೆದ್ದು , ರಾಜೀನಾಮೆ ಮೂಲಕ ಬ್ಲ್ಯಾಕ್‌ವೆುçಲ್ ಮಾಡುವವರಿಗೆ ಈ ರೀತಿಯ ಕ್ರಮಗಳ ಮೂಲಕ ಕಠಿನ ಸಂದೇಶ ರವಾನಿಸುವ ಅಗತ್ಯವಿದೆ.
ಈಗೀಗ ಪಕ್ಷಾಂತರ ಪಿಡುಗು ವ್ಯಾಪಕವಾಗಿ ಹರಡುತ್ತಿದ್ದು, ಈ ಸಂದರ್ಭದಲ್ಲಿ ಸ್ಪೀಕರ್ ನಿಭಾಯಿಸಬೇಕಾದ ಪಾತ್ರವೂ ಬಹಳ ಮುಖ್ಯವಾಗುತ್ತದೆ.ಕಠಿನ ನಿರ್ಧಾರಗಳನ್ನು ಕೈಗೊಳ್ಳಬೇಕಾದ ಸಂದರ್ಭದಲ್ಲಿ ಸ್ಪೀಕರ್ ಉಭಯಸಂಕಟಕ್ಕೀಡಾಗುವುದು ಸಹಜ. ಸ್ಪೀಕರ್‌ಗೆ ಸಂವಿಧಾನ ಮತ್ತು ನಿಯಮಾವಳಿಗಳ ರಕ್ಷೆಯಿದ್ದರೂ ಕೆಲವೊಮ್ಮೆ ಪ್ರಮಾದಗಳು ಆಗುತ್ತವೆ. ಈ ಹಿನ್ನೆಲೆಯಲ್ಲಿ ಸ್ಪೀಕರ್ ಹುದ್ದೆಯನ್ನು ಮರು ವ್ಯಾಖ್ಯಾನಿಸಬೇಕಾದ ಅಗತ್ಯವಿದೆ.