Advertisement

ಗುಟ್ಟಾಗಿ ರಿಯಲ್ ಲೈಫ್ ನಲ್ಲೇ ಗಾರ್ಮೆಂಟ್ ಫ್ಯಾಕ್ಟರಿ ಕೆಲಸ ಮಾಡಿ ಸ್ಟಾರ್ ನಟನಾಗಿ ಮಿಂಚಿದ್ದ!

09:34 AM Mar 29, 2020 | Nagendra Trasi |

ತನ್ನ ಕಂಪನಿಯಲ್ಲಿ ಕೆಲಸ ಮಾಡುವ ಮ್ಯಾನೇಜರ್ ಮಗಳಾದ ಶ್ರುತಿಯನ್ನು ಶಿವರಾಜ್ ಪ್ರೀತಿಸಲು ಆರಂಭಿಸುತ್ತಾನೆ. ಆದರೆ ಆಕೆ ಶ್ರೀಮಂತ ವ್ಯಕ್ತಿಯ ಮಗನ ಪ್ರೀತಿಯನ್ನು ನಿರಾಕರಿಸುತ್ತಾಳೆ. ಅಲ್ಲದೇ ಯಾವುದೇ ಪ್ರಭಾವ ಬಳಸದೇ ಐದು ಸಾವಿರ ರೂಪಾಯಿ
ದುಡಿದು ತೋರಿಸುವಂತೆ ಸವಾಲು ಹಾಕುತ್ತಾಳೆ. ಅದಕ್ಕೆ ಆತ ಒಪ್ಪಿಕೊಳ್ಳುತ್ತಾನೆ. ನಂತರ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಸೇರಿಕೊಳ್ಳುತ್ತಾನೆ…ಇದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯಿಸಿದ “ಅರಸು” ಸಿನಿಮಾ!

Advertisement

ಇದು ರೀಲ್ ನಲ್ಲಿ ನೋಡಿದ ಕಥೆ. ಆದರೆ ನಿಜ ಜೀವನದಲ್ಲಿ ಹೀಗೆ ನಡೆದಿರಬಹುದಲ್ವಾ ಎಂಬ ಕುತೂಹಲವಿದ್ದರೆ…ನೀವು ಈ ನಟನ ಬಗ್ಗೆ ತಿಳಿದುಕೊಳ್ಳಲೇ ಬೇಕು. ರೀಲ್ ನಲ್ಲಾಗಿದ್ದು, ಈ ನಟನ ಬದುಕಿನಲ್ಲಿ ರಿಯಲ್ ಆಗಿ ನಡೆದಿತ್ತು.

ಹೀರೋ ತಂದೆಯ ಹೆಸರು ಹೇಳದೆ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ನಿರ್ವಹಿಸಿದ್ದ!
ಶಾಲೆಯಲ್ಲಿ ಶರವಣ ಕಲಿಯುವಿಕೆಯಲ್ಲಿ ಅಷ್ಟೇನೂ ಚುರುಕಾಗಿರಲಿಲ್ಲ. ತಂದೆ 60ರ ದಶಕದಲ್ಲಿಯೇ ಹೀರೋ ಆಗಿ ಖ್ಯಾತರಾಗಿದ್ದರು. ಆದರೆ ತಂದೆಯ ಹೆಸರು, ಪ್ರಭಾವ ಬಳಸದೇ ಏನಾದರೂ ಮಾಡಲೇಬೇಕು ಎಂಬ ಛಲ ತೊಟ್ಟಿದ್ದ ಶರವಣ ಒಂದು ವರ್ಷಗಳ ಕಾಲ ಗಾರ್ಮೆಂಟ್ ಎಕ್ಸ್ ಫೋರ್ಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿದ್ದ. ಮೊದಲ ತಿಂಗಳು ಸಿಕ್ಕಿದ ಒಂದು ಸಾವಿರ ರೂಪಾಯಿ ಸಂಬಳದಲ್ಲಿ ಈ ಯುವಕ ತನ್ನ ತಾಯಿಗೆ ಸೀರೆಯನ್ನು ಕೊಂಡೊಯ್ದಿದ್ದ. ಆದರೆ ತಮ್ಮೊಂದಿಗೆ ಕೆಲಸ ಮಾಡಿದ್ದು ಪ್ರತಿಷ್ಠಿತ ಹೀರೋನ ಮಗ ಎಂಬುದಾಗಲಿ, ಮುಂದೊಂದು ದಿನ ತಮಿಳು ಚಿತ್ರರಂಗದ ಮುಂದಿನ ಸೂಪರ್ ಸ್ಟಾರ್ ಎಂಬುದು ಕೂಡಾ ಯಾರಿಗೂ ತಿಳಿದಿರಲಿಲ್ಲವಾಗಿತ್ತು…ಈ ಅದ್ಭುತ ನಟ ಬೇರೆ ಯಾರೂ ಅಲ್ಲ ಶರವಣ ಅಲಿಯಾಸ್ ಸೂರ್ಯ!

ಸರವಣ ಎಂಬ ಯುವಕ ಸೂರ್ಯ ಆಗಿ ಬದಲಾಗಿದ್ದೇಗೆ?
ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆಯಲ್ಲಿಯೇ ತಮಿಳು ಸಿನಿಮಾ ನಿರ್ದೇಶಕ ವಸಂತ್ ಅವರು 1995ರಲ್ಲಿ ತಮ್ಮ ಆಸೈ ಸಿನಿಮಾದಲ್ಲಿ ಪ್ರಮುಖ ಪಾತ್ರ ಕೊಡುವುದಾಗಿ ಆಫರ್ ಕೊಟ್ಟಿದ್ದರು. ಆದರೆ ಸರವಣ ತನಗೆ ನಟನೆಯಲ್ಲಿ ಆಸಕ್ತಿ ಇಲ್ಲ ಎಂದು ನಿರಾಕರಿಸಿಬಿಟ್ಟಿದ್ದ. 1997 ಟರ್ನಿಂಗ್ ಪಾಯಿಂಟ್ ಎಂಬಂತೆ ವಸಂತ ಅವರ ನೇರುಕ್ಕು ನೇರ್ ಎಂಬ ಸಿನಿಮಾವನ್ನು ಮಣಿರತ್ನಂ ಪ್ರೊಡ್ಯೂಸ್ ಮಾಡಿದ್ದರು.ಈ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದು 22ರ ಹರೆಯದ ಸರವಣ. ಈಗಾಗಲೇ ಸರವಣನನ್ ಹೆಸರು ಖ್ಯಾತಿಯಾಗಿದ್ದರಿಂದ ಮಣಿರತ್ನಂ ಅವರು ಸೂರ್ಯ ಎಂದು ನಾಮಕರಣ ಮಾಡಿದ್ದರು. ಈ ಸಿನಿಮಾದಲ್ಲಿ ಸಹ ನಟನಾಗಿದ್ದ ನಟಿಸಿದ್ದ ವಿಜಯ್ ಕೂಡಾ ಇಂದು ಕಾಲಿವುಡ್ ನಲ್ಲಿ ಬೇಡಿಕೆಯ ನಟನಾಗಿದ್ದಾನೆ ಎಂಬುದು ಮರೆಯುವಂತಿಲ್ಲ!

ಬೆಳ್ಳಿಪರದೆಯಲ್ಲಿ ಸೂರ್ಯನ ಹಾದಿ ಸುಲಭವಾಗಿರಲಿಲ್ಲವಾಗಿತ್ತು. ಯಾಕೆಂದರೆ ಆರಂಭದಲ್ಲಿ ಹಲವು ಸಿನಿಮಾಗಳು ಯಶಸ್ಸು ಗಳಿಸಿಲ್ಲವಾಗಿತ್ತು. ಅಷ್ಟೇ ಅಲ್ಲ ವಿಶ್ವಾಸದ ಕೊರತೆ, ಡೈಲಾಗ್ ನೆನಪಿನಲ್ಲಿ ಇಟ್ಟುಕೊಳ್ಳುವುದು, ಫೈಟಿಂಗ್ ಹಾಗೂ ಡ್ಯಾನ್ಸ್ ಸೂರ್ಯನಿಗೆ ಕಷ್ಟದ ಕೆಲಸವಾಗಿತ್ತು. ಈ ಸಂದರ್ಭದಲ್ಲಿ ನಟ ಸೂರ್ಯನಿಗೆ ಆಪ್ತ ಸಲಹೆ ಕೊಟ್ಟಿದ್ದು ನಟ, ಖ್ಯಾತ ವಿಲನ್ ಪಾತ್ರದಲ್ಲಿಹೆಸರಾಗಿದ್ದ ರಘುವರನ್. ಹೌದು ಸಿನಿಮಾ ಕ್ಷೇತ್ರದಲ್ಲಿ ಸ್ವಂತ ಪ್ರತಿಭೆ ಮೇಲೆ ಬೆಳೆಯಬೇಕು ವಿನಃ ತಂದೆಯ ಹೆಸರಿನ ನೆರಳಿನಲ್ಲಿ ಅಲ್ಲ ಎಂಬುದಾಗಿ ಹೇಳಿದ್ದರು.

Advertisement

2001ರಲ್ಲಿ ಸಿದ್ದಿಖಿ ನಿರ್ದೇಶನದ ಫ್ರೆಂಡ್ಸ್ ಸಿನಿಮಾದಲ್ಲಿ ಸೂರ್ಯ ಎರಡನೇ ಹೀರೋ ಆಗಿ ನಟಿಸಿದ್ದ. ಸಹ ನಟನಾಗಿ ವಿಜಯ್ ಅಭಿನಯಿಸಿದ್ದ. ನಂತರ 2001ರಲ್ಲಿ ಬಿಡುಗಡೆಯಾಗಿದ್ದ ನಂದಾ ಸಿನಿಮಾ ಸೂರ್ಯನಿಗೆ ದೊಡ್ಡ ಮಟ್ಟದ ಬ್ರೇಕ್ ನೀಡಿತ್ತು. ತಮಿಳುನಾಡು ರಾಜ್ಯ ಪ್ರಶಸ್ತಿ ಕೂಡಾ ದೊರಕಿತ್ತು. ಸಿನಿ ಜೀವನದಲ್ಲಿ ಟರ್ನಿಂಗ್ ಪಾಯಿಂಟ್ ಕೊಟ್ಟಿದ್ದು ಗೌತಮ್ ಮೆನನ್ ಕಾಖಾ,
ಕಾಖಾ ಸಿನಿಮಾ. ನಂತರ ಬಾಲಾ ನಿರ್ದೇಶನದ ಪಿತಾಮಗನ್, ಎಆರ್ ಮುರುಗದಾಸ್ ಅವರ ಗಜನಿ, ಆರು, ಸಿಲ್ಲೂನು ಓರು ಕಾದಲ್, ವೇಲ್, ಆಯನ್, ಆಂಡವನ್, ಏಳಂ ಅರಿವು, ಸಿಂಗಂ ಹೀಗೆ ಸಾಲು, ಸಾಲು ಸೂಪರ್ ಹಿಟ್ ಸಿನಿಮಾ ಕೊಟ್ಟ ಹೆಗ್ಗಳಿಕೆ ನಟ ಸೂರ್ಯನದ್ದಾಗಿದೆ.

ಏಳು ವರ್ಷಗಳ ಪ್ರೀತಿ, ಪ್ರೇಮ, ಪ್ರಣಯ!
1999ರಲ್ಲಿ ಪೂವೆಲ್ಲಾಂ ಕೆಟ್ಟುಪ್ಪಾರ್ ಸಿನಿಮಾದಲ್ಲಿ ನಟಿ ಜ್ಯೋತಿಕಾ ಮತ್ತು ಸೂರ್ಯ ಒಬ್ಬರಿಗೊಬ್ಬರು ಪರಿಚಯವಾಗಿದ್ದರು. ಆದರೆ ಸೂರ್ಯ ಸಿನಿಮಾ ನಟನೆಯಲ್ಲಿ ಬ್ಯುಸಿಯಾಗಿದ್ದ. ಏತನ್ಮಧ್ಯೆ ಜ್ಯೋತಿಕಾ ಸಿನಿಮಾ ಶೂಟಿಂಗ್ ವೊಂದರ ವೇಳೆ ಸಹಾಯಕನ ಬಳಿ
ಚೀಟಿಯೊಂದನ್ನು ಕಳುಹಿಸಿಕೊಟ್ಟಿದ್ದಳು!.

ಆದರೆ ಅದನ್ನು ಓದಿದ ಸೂರ್ಯ ಈಗ ನನಗೆ ಸಮಯವಿಲ್ಲ, ಕೆಲವು ದಿನಗಳ ನಂತರ ನಾನೇ ಖುದ್ದಾಗಿ ಭೇಟಿಯಾಗುವೆ ಎಂದು ಹೇಳು ಎಂದು ಕಳುಹಿಸಿಕೊಟ್ಟಿದ್ದ. ಇದರಿಂದ ಕುಪಿತಗೊಂಡ ಜ್ಯೋತಿಕ ನೇರವಾಗಿ ಸೂರ್ಯನ ಬಳಿ ಬಂದು ಯಾಕೆ ನನ್ನಿಂದ ದೂರ ಹೋಗುತ್ತಿದ್ದೆಯಾ ಎಂದು ದಬಾಯಿಸಿದ್ದಳು. ಹೀಗೆ ನಂತರ ಇಬ್ಬರು ಒಟ್ಟಿಗೆ ಕುಳಿತು ಮಾತನಾಡಿದ ಬಳಿಕವೇ ಸ್ನೇಹಿತರಾಗಿ ನಂತರ ಒಬ್ಬರನ್ನೊಬ್ಬರು ಪ್ರೀತಿಸತೊಡಗಿದ್ದರು. ಒಟ್ಟು ಏಳು ವರ್ಷಗಳ ಒಡನಾಟದ ನಂತರ
2006ರಲ್ಲಿ ವಿವಾಹವಾಗಿದ್ದರು. ದಂಪತಿಗೆ ದಿಯಾ ಎಂಬ ಪುತ್ರಿ, ದೇವ್ ಎಂಬ ಪುತ್ರನಿದ್ದಾನೆ.

ಟ್ರಸ್ಟ್ ಮೂಲಕ ಬಡ ಮಕ್ಕಳಿಗೆ ವಿದ್ಯಾಭ್ಯಾಸ:

ತಂದೆ ಸಿವಕುಮಾರ್ ಅವರ ಶಿಕ್ಷಣ ಟ್ರಸ್ಟ್ ನಿಂದ ಪ್ರಭಾವಿತಗೊಂಡ ನಟ ಸೂರ್ಯ ಆಗರಂ ಫೌಂಡೇಶನ್ ಆರಂಭಿಸಿದ್ದ ಈ ಮೂಲಕ ತಮಿಳುನಾಡಿನಲ್ಲಿ ಶಾಲೆ ಬಿಟ್ಟ ಬಡ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ಹಾಗೂ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

*ನಾಗೇಂದ್ರ ತ್ರಾಸಿ

Advertisement

Udayavani is now on Telegram. Click here to join our channel and stay updated with the latest news.

Next