ನವದೆಹಲಿ: ಸಿಬಿಎಸ್‌ಇ ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆ ಮಾಡಲು ಹೊರಟಿರುವ ಸಿಬಿಎಸ್‌ಇ ಮಂಡಳಿ, 2020ರಲ್ಲಿ ನಡೆಯಲಿರುವ ಪರೀಕ್ಷೆಯಲ್ಲಿ ಪ್ರಶ್ನೆಗಳ ಸಂಖ್ಯೆಯನ್ನೇ ಕಡಿಮೆ ಮಾಡಲು ನಿರ್ಧರಿಸಿದೆ. ಉದಾಹರಣೆಗೆ, ಸದ್ಯ 12ನೇ ತರಗತಿ ಗಣಿತ ಪರೀಕ್ಷೆಯಲ್ಲಿ 19 ಪ್ರಶ್ನೆಗಳು ಇರುತ್ತಿದ್ದವು. ಆದರೆ ಮುಂಬರುವ ಪರೀಕ್ಷೆಯಲ್ಲಿ 12 ಪ್ರಶ್ನೆಗಳು ಇರಲಿದೆ. ಅಷ್ಟೇ ಅಲ್ಲ, ಪ್ರಶ್ನೆಗಳ ಆಯ್ಕೆಗಳೂ ಜಾಸ್ತಿ ಇರಲಿವೆ. ಅಂದರೆ 13-14 ಪ್ರಶ್ನೆಗಳ ಪೈಕಿ 10 ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಉತ್ತರಿಸಬೇಕಾಗುತ್ತದೆ. ಇನ್ನು ಹತ್ತನೇ ತರಗತಿಯ ಇಂಗ್ಲಿಷ್, 12ನೇ ತರಗತಿಯ ಹಿಂದಿ, ಇತಿಹಾಸ ಮತ್ತು ಬಯಾಲಜಿ ಪ್ರಶ್ನೆ ಪತ್ರಿಕೆಗಳಲ್ಲಿ ವಿವರಣಾತ್ಮಕ ಪ್ರಶ್ನೆಗಳನ್ನು ಹೆಚ್ಚಿಸಲಾಗಿದೆ. ಎರಡು ಅಂಕಗಳ ಪ್ರಶ್ನೆಗಳನ್ನು ಹೆಚ್ಚಿಸಿ, 5ರಿಂದ8 ಅಂಕದ ಪ್ರಶ್ನೆಗಳನ್ನು ಕಡಿಮೆ ಮಾಡಲಾಗಿದೆ.
12ನೇ ತರಗತಿ ಸಂಸ್ಕೃತದಲ್ಲಿ ವಿವರಣಾತ್ಮಕ ಪ್ರಶ್ನೆಗಳ ಸಂಖ್ಯೆ 53 ರಿಂದ 37ಕ್ಕೆ ಹಾಗೂ ರಾಜಕೀಯ ಶಾಸ್ತ್ರದಲ್ಲಿ 25ರಿಂದ 14 ಕ್ಕೆ ವಿವರಣಾತ್ಮಕ ಪ್ರಶ್ನೆಗಳ ಸಂಖ್ಯೆಯನ್ನು ಇಳಿಸಲಾಗುತ್ತದೆ. ಅದೇ ರೀತಿ, ಫಿಸಿಕ್ಸ್ ಮತ್ತು ಕೆಮಿಸ್ಟ್ರಿಯಲ್ಲಿ 17 ಪ್ರಶ್ನೆಗಳ ಬದಲಿಗೆ ಕೇವಲ 5 ಪ್ರಶ್ನೆಗಳು ಇರಲಿವೆ.
ಪ್ರತಿ ವಿಷಯಕ್ಕೂ ಆಂತರಿಕ ವಿಶ್ಲೇಷಣೆ ಮತ್ತು ಪ್ರಾಯೋಗಿಕ ಪರೀಕ್ಷೆಗಳು ಕಡ್ಡಾಯವಾಗಿರಲಿವೆ. ಆಂತರಿಕ ವಿಶ್ಲೇಷಣೆಗೆ 20 ಅಂಕ ನಿಗದಿಸಲಾಗಿದ್ದು, ಪ್ರಾಯೋಗಿಕಕ್ಕೆ 30ರಿಂದ 70 ಅಂಕಗಳವರೆಗೆ ಇರುತ್ತವೆ.