Advertisement

ವಿಜಯಪುರ: ಕೊನೆಗೂ ಸೆರೆ ಸಿಕ್ಕಿತು ಪ್ರಾಣಿ ಭಕ್ಷಕ ಚಿರತೆ

03:36 PM Jun 05, 2020 | keerthan |

ವಿಜಯಪುರ: ಅವಳಿ ಜಿಲ್ಲೆಯ ಗಡಿ ಗ್ರಾಮಗಳಲ್ಲಿ ಭಯ ಸೃಷ್ಟಿಸಿದ್ದ ಸಾಕುಪ್ರಾಣಿ ಹಂತಕ ಚಿರತೆ ಶುಕ್ರವಾರ ಸೆರೆ ಸಿಕ್ಕಿದೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ದೇವರಗೆಣ್ಣೂರ ಗ್ರಾಮದ ಕಬ್ಬಿನ ಗದ್ದೆ, ಬಾಳೆ ತೋಟದ ಹತ್ತಿರ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ.

Advertisement

ಕಳೆದ ಮೂರು ವಾರಗಳಿಂದ ಈ ಚಿರತೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಬಿದರಿ, ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸುತಗುಂಡಿ, ಬಬಲಾದ, ದೇವರಗೆಣ್ಣೂರ, ಕೆಂಗಲಗುತ್ತಿ ಗ್ರಾಮಗಳಲ್ಲಿ ರೈತರು ಸಾಕಿದ ಪ್ರಾಣಿಗಳ ಮೇಲೆ ದಾಳಿ ನಡೆಸಿ, ಹತ್ಯೆ ಮಾಡಿ ಭಕ್ಷಿಸುತ್ತಿತ್ತು.

ಕಳೆದ ಇಪ್ಪತ್ತು ದಿನಗಳಲ್ಲಿ ಮೇಕೆ, ಕುರಿ, ಆಕಳ ಕರು, ಎಮ್ಮೆ ಕರು, ಕುದುರೆ ಮರಿ ಸೇರಿ 15 ಕ್ಕೂ ಹೆಚ್ಚು ಪ್ರಾಣಿಗಳ ಮೇಲೆ ದಾಳಿ ನಡೆಸಿ, ಹತ್ಯೆ ಮಾಡಿ ಕಬ್ಬಿನ ಗದ್ದೆಗೆ ಹೊತ್ತೊಯ್ದು ಭಕ್ಷಿಸಿತ್ತು.

ಇದರಿಂದ ಈ ಭಾಗದ ಜನರಲ್ಲಿ ಅದರಲ್ಲೂ ರೈತರಲ್ಲಿ ಆತಂಕ ಸೃಷ್ಟಿಸಿದ ಚಿರತೆ ಸೆರೆ ಹಿಡಿಯದ ಅರಣ್ಯ ಇಲಾಖೆ ಚಿರತೆ ಅಲ್ಲ ಹೈನಾ ಎಂದು ಪ್ರತ್ಯಕ್ಷದರ್ಶಿ ರೈತರ ಮಾತು ಅಲ್ಲಗಳೆದು ಕಾಲಹರಣ ಮಾಡುತ್ತಿತ್ತು.

ಅಲ್ಲದೆ ಚಿರತೆ ಪ್ರತ್ಯಕ್ಷವಾಗಿರುವ ಪರಿಸರ ಕಬ್ಬಿನ ಗದ್ದೆಗಳಿಂದ ಕೂಡಿದ್ದು, ಕಾರ್ಯಾಚರಣೆಗೂ ತೊಡಕಾಗಿತ್ತು. ಇದರಿಂದ ಅವಳಿ ಜಿಲ್ಲೆಯ ಗಡಿಯಲ್ಲಿ ಅರಣ್ಯ ಇಲಾಖೆಯ ವಿರುದ್ದ ಜನಾಕ್ರೋಶ ವ್ಯಕ್ತವಾಗಿತ್ತು.

Advertisement

ಈ ಕುರಿತು ಉದಯವಾಣಿ ಕಳೆದ ನಾಲ್ಕು ದಿನಗಳಿಂದ ಸತತ ವಿಶೇಷ ಸರಣಿ ವರದಿ ಪ್ರಕಟಿಸುವ ಮೂಲಕ ಜನರ ಧ್ವನಿಯಾಗಿತ್ತು.

ಇದರಿಂದ ಎಚ್ಚೆತ್ತ ಅರಣ್ಯ ಇಲಾಖೆಯ ಬೋನು ಇರಿಸುವ, ಟ್ರ್ಯಾಕಿಂಗ್ ಕ್ಯಾಮರಾ ಅಳವಡಿಸುವ ಹಾಗೂ ಹಗಲು ರಾತ್ರಿ ಗಸ್ತು ವ್ಯವಸ್ಥೆ ಮಾಡಿತ್ತು.

ಪರಿಣಾಮ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಶುಕ್ರವಾರ ಚಿರತೆ ಸೆರೆ ಸಿಕ್ಕಿದೆ. ಅಲ್ಲಿಗೆ ಜನತೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next