ಬಂಟ್ವಾಳ: ಜನತೆ ಕೋವಿಡ್-19 ಲಾಕ್ ಡೌನ್ ಕಾರಣ ಮನೆಯಲ್ಲಿಯೇ ಬೀಡುಬಿಟ್ಟಿದ್ದರೆ, ಚಿರತೆಯೊಂದು ಆಹಾರ ಹುಡುಕಿಕೊಂಡು ಹೋಗಿ ಬಾವಿಗೆ ಬಿದ್ದ ಘಟನೆ ಬಂಟ್ವಾಳ ತಾಲೂಕಿನ ತುಂಬೆ ಸಮೀಪದ ಮಜಿ ಎಂಬಲ್ಲಿ ನಡೆದಿದೆ.
ಇಲ್ಲಿನ ಮಜಿ ಮೋನಪ್ಪ ಎಂಬವರ ಜಮೀನಿನಲ್ಲಿರುವ ಬಾವಿಗೆ ರಾತ್ರಿ ಹೊತ್ತು ಚಿರತೆ ಬಿದ್ದಿತ್ತು. ರಾತ್ರಿ ಹೊತ್ತಿನಲ್ಲಿ ಬಾವಿ ಕಾಣದೆ ಒಳಗೆ ಬಿದ್ದಿರಬೇಕು ಎಂದು ಅಂದಾಜಿಸಲಾಗಿದೆ. ಅಲ್ಲಿಂದ ಹೊರಬರಲಾಗದೆ ಚಿರತೆ ಒದ್ದಾಡುತ್ತಿತ್ತು.
ಸ್ಥಳೀಯರು ಮಾಹಿತಿಯನ್ನು ಸಂಬಂಧಪಟ್ಟವರಿಗೆ ನೀಡಿದ್ದು, ಕೊನೆಗೆ ಅರಣ್ಯ ಇಲಾಖೆ, ಅಗ್ನಿ ಶಾಮಕದಳ ಸಿಬ್ಬಂದಿ ಹಾಗೂ ಪೊಲೀಸರು ಕಾರ್ಯಚರಣೆ ನಡೆಸಿ ಸುರಕ್ಷಿತವಾಗಿ ಮೇಲಕ್ಕೆತ್ತಿದ ಘಟನೆ ನಡೆದಿದೆ.
ವೈದ್ಯರು ಪರೀಕ್ಷೆ ನಡೆಸಿದ್ದು, ಸುಮಾರು ಎರಡು ವರ್ಷ ಮರಿ ಚಿರತೆ ಇದಾಗಿದೆ ಎಂದು ತಿಳಿಸಿದ್ದಾರೆ. ಸುರಕ್ಷಿತವಾಗಿರುವ ಚಿರತೆಯನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದಾರೆ.
ವಲಯ ಅರಣ್ಯಾಧಿಕಾರಿ ಶ್ರೀಧರ್, ಪ್ರೀತಂ, ಜಿತೇಶ್, ಬಾಸ್ಕರ್, ವಿನಯ್, ಬಂಟ್ವಾಳ ಗ್ರಾಮಾಂತರ ಎಸ್.ಐ.ಪ್ರಸನ್ನ, ಟ್ರಾಫಿಕ್ ಎಸ್.ಐ.ರಾಜೇಶ್ ಕೆ.ವಿ.ಸಿಬ್ಬಂದಿ ಜನಾರ್ಧನ, ಕಿರಣ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಗಳು ಕಾರ್ಯಚರಣೆ ನಡೆಸಿದ್ದರು.