Advertisement

ಸದ್ದು ಕೇಳಿ ಬಾಗಿಲು ತೆರೆದರೆ ಮನೆಯೊಳಗೆ ನುಗ್ಗಿದ್ದು ಚಿರತೆ!

06:00 AM Jan 21, 2018 | Team Udayavani |

ತುಮಕೂರು: ಚಿರತೆಯೊಂದು ಮನೆಯೊಳಕ್ಕೆ ಸೇರಿಕೊಂಡು ಮನೆಯಲ್ಲಿದ್ದ ಅತ್ತೆ-ಸೊಸೆ ಬಚ್ಚಲ ಮನೆಯಲ್ಲಿ ಅವಿತುಕೊಂಡು ಪ್ರಾಣ ಉಳಿಸಿಕೊಂಡಿರುವ ಘಟನೆ ತುಮಕೂರಿನ ಜಯನಗರ ಬಡಾವಣೆಯಲ್ಲಿ ಶನಿವಾರ ನಡೆದಿದೆ.

Advertisement

ಹೌದು, ಊರಿನವರ ಎದೆಯಲ್ಲಿ ಡವಡವ. ಬೆಳಗ್ಗೆ 9.30ರ ಸಮಯ. ಚುಮುಚುಮು ಚಳಿಯ ನಡುವೆ ಬೆಚ್ಚಗೆ ಮನೆಯೊಳಗೆ ಕುಳಿತಿದ್ದ ವಿನುತಾಗೆ ಮನೆಯ ಗೇಟ್‌ ಬಡಿದ ಸದ್ದು. ಹೊರಬಂದು ಬಾಗಿಲು ತೆರೆದರೆ ಚಿರತೆಯೊಂದು ಮೈಮೇಲೆ ಎರಗುತ್ತಿದೆಯೇನೋ ಎನ್ನುವಂತೆ ಒಳನುಗ್ಗಿಯೇಬಿಟ್ಟಿತು. ಗಾಬರಿಯಾದ ವಿನುತಾ ಕಿರುಚಾಡುತ್ತಾ ಮನೆಯೊಳಗೆ ಓಡಿದ್ದಾಳೆ.

ಇತ್ತ, ಅಲ್ಲೇ ಪಕ್ಕದಲ್ಲಿ ನಿಂತಿದ್ದ ಆಕೆಯ ಮಾವ ರಂಗನಾಥ್‌ ಚಿರತೆ ನೋಡಿ ಬೆಚ್ಚಿಬಿದ್ದಿದ್ದಾರೆ. ಚಿರತೆ, ಚಿರತೆ… ಓಡಿ ಹೋಗಿ ಮನೆ ಬಾಗಿಲು ಹಾಕಿಕೋ… ಎಂದು ಸೊಸೆಗೆ ಹೇಳುತ್ತಾ ಹೊರಗಡೆ ಓಡಿದರು. ವಿನುತಾ ಅವರು ಮನೆಯೊಳಗಿನ ಬಚ್ಚಲ ಮನೆಯ ಬಾಗಿಲು ಬಡಿದು, ಸ್ನಾನ ಮಾಡುತ್ತಿದ್ದ ಆಕೆಯ ಅತ್ತೆ ವನಜಾಕ್ಷಿ ಅವರನ್ನೂ ಹೊರ ಹೋಗದಂತೆ ಬಾಗಿಲು ಹಾಕಿಕೊಂಡು ಪ್ರಾಣ ಉಳಿಸಿಕೊಂಡಿದ್ದಾರೆ. ಇಷ್ಟಾದರೂ ತೀವ್ರ ಭಯದಿಂದ ಒಳ ಸೇರಿಕೊಂಡಿದ್ದ ಅತ್ತೆ-ಸೊಸೆಯನ್ನು ಚಿರತೆ ಒಳಕ್ಕೆ ಇರುವ ಕಾರಣ ಗೋಡೆ ಒಡೆದು ಹೊರಕ್ಕೆ ಕರೆದುಕೊಳ್ಳಲಾಯಿತು.

ಅಡುಗೆ ಮನೆ ಸಜ್ಜ ಸೇರಿದ್ದ ಚಿರತೆ
ನಿರ್ಮಾಣ ಹಂತದ ಕಟ್ಟಡದಲ್ಲಿ ಕುಳಿತಿದ್ದ ಚಿರತೆ ಜನರ ಸದ್ದ ಕೇಳಿ ಗಾಬರಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಿದೆ. ಈ ವೇಳೆ ಅರಣ್ಯ ಇಲಾಖೆಯ ಸಿಬ್ಬಂದಿ ಗೋವಿಂದರಾಜ್‌ ಎಂಬುವರನ್ನು ಗಾಯಗೊಳಿಸಿ ಬಳಿಕ ಮನೆಯೊಳಗೆ ನುಗ್ಗಿತ್ತು. ಇಷ್ಟೆಲ್ಲಾ ಘಟನೆ ಬಳಿಕ ರಂಗನಾಥ್‌ ಅವರು  ಅರಣ್ಯಾಧಿಕಾರಿಗಳು ಹಾಗೂ ಪೊಲೀಸರಿಗೆ ಸುದ್ದಿ ತಲುಪಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ತಜ್ಞರು ಸತತ 9 ತಾಸುಗಳ ಕಾರ್ಯಾಚರಣೆ ಬಳಿಕ ಅದನ್ನು ಸೆರೆ ಹಿಡಿದು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸಾಗಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next