Advertisement

Leopard attack: ಹೆಲ್ಮೆಟ್‌ನಿಂದಾಗಿ ತಲೆ ಉಳಿಸಿಕೊಂಡ ವ್ಯಕ್ತಿ!

10:27 PM Nov 24, 2023 | Team Udayavani |

ಕಾರ್ಕಳ: ತಾಲೂಕಿನ ಕೌಡೂರು ಗ್ರಾಮದಲ್ಲಿ ಕಳೆದೆರಡು ದಿನಗಳಲ್ಲಿ ನಾಲ್ವರ ಮೇಲೆ ಚಿರತೆ ದಾಳಿ ನಡೆಸಿದೆ.

Advertisement

ಗುರುವಾರ ಬೆಳಗ್ಗೆ ನಾಗಂಟೆಲ್‌ನಲ್ಲಿ ಸಾಕು ನಾಯಿಯ ಮೇಲೆ ದಾಳಿ ನಡೆಸಿದ್ದು, ಅದರ ರಕ್ಷಣೆಗೆ ಧಾವಿಸಿದ ಸುಧೀರ್‌ ನಾಯ್ಕ ಅವರ ಮೇಲೆರಗಿತು. ಅವರ ಮುಖ, ಕೈಗೆ ಗಾಯಗಳಾಗಿವೆ. ಮಧ್ಯಾಹ್ನ ಇದೇ ಪರಿಸರದಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ನಿಧೀಶ್‌ ಆಚಾರ್ಯ ಅವರಿಗೆ ಚಿರತೆ ಎದುರಾಗಿದ್ದು ದಾಳಿಗೆ ಯತ್ನಿಸಿತ್ತು. ತುಸು ಹೊತ್ತಿನ ಬಳಿಕ ಅದೇ ದಾರಿಯಾಗಿ ದ್ವಿಚಕ್ರ ವಾಹನದಲ್ಲಿ ಬಂದ ಸದಾನಂದ ಪುತ್ರನ್‌ ಅವರ ತಲೆಗೇ ನೆಗೆಯಿತು. ಅದೃಷ್ಟವಶಾತ್‌ ಹೆಲ್ಮೆಟ್‌ ಧರಿಸಿಕೊಂಡಿದ್ದ ಕಾರಣ ಅವರು ಅಪಾಯದಿಂದ ಪಾರಾಗಿದ್ದಾರೆ.

ಶುಕ್ರವಾರ ಅದೇ ಪರಿಸರದಲ್ಲಿ ದನಗಳನ್ನು ಮೇಯಿಸಲು ಗದ್ದೆಯತ್ತ ತೆರಳಿದ್ದ ಜಯಂತಿ ನಾಯ್ಕ ಮತ್ತು ಮಲ್ಲಿಕಾ ನಾಯ್ಕ ಅವರ ಮೇಲೆರಗಿದೆ. ಕೈಗಳಿಗೆ ತೀವ್ರ ತರದ ಪರಚಿದ ಗಾಯಗಳಾಗಿವೆ.

ಈ ಘಟನೆಗಳಿಂದ ಸ್ಥಳೀಯರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಮಾಹಿತಿ ತಿಳಿದ ಅರಣ್ಯಾಧಿಕಾರಿ ಮತ್ತು ಸಿಬಂದಿ ಬೋನು ಇರಿಸಿ ಚಿರತೆಯನ್ನು ಸೆರೆ ಹಿಡಿಯುವ ಪ್ರಯತ್ನ ಆರಂಭಿಸಿದ್ದಾರೆ. ಈ ಭಾಗದಲ್ಲಿ ಹಲವು ಸಮಯಗಳಿಂದ ಚಿರತೆ ಹಾವಳಿ ಇದ್ದು, ನಾಯಿ, ಜಾನುವಾರುಗಳನ್ನು ಕೊಂದುಹಾಕಿವೆ. ಇದೀಗ ಮನುಷ್ಯರ ಮೇಲೂ ದಾಳಿಗೆ ಮುಂದಾಗಿರುವುದರಿಂದ ಈ ವಿಚಾರವನ್ನು ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಅರಣ್ಯ ಇಲಾಖೆ ಕಾದು ನೋಡುವ ತಂತ್ರ
ಪರಿಸರದಲ್ಲಿ 2 ಬೋನುಗಳನ್ನು ಇರಿಸಲಾಗಿದೆ. ಶನಿವಾರ ಮತ್ತೂಂದು ಇರಿಸಿ ಚಿರತೆಯನ್ನು ಬಂಧಿಸಲು ಯತ್ನಿಸಲಾಗುವುದು. ಮೂರನೇ ದಿನವೂ ಸೆರೆ ಸಿಗದಿದ್ದರೆ ಮುಂದಿನ ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆ ನಿರ್ಧರಿಸಿದೆ. ಸೆರೆ ಹಿಡಿಯುವ ತನಕ ರಾತ್ರಿ ಹೊತ್ತು ಸ್ಥಳೀಯರು ಎಚ್ಚರಿಕೆಯಿಂದ ಇರುವಂತೆ ಅರಣ್ಯಾಧಿಕಾರಿಗಳು ಸೂಚನೆ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next