Advertisement

ಉದ್ಧಾಂಜನೇಯಸ್ವಾಮಿ ದೇವಾಲಯದ ಬಳಿ ಚಿರತೆ ಪ್ರತ್ಯಕ್ಷ?

05:50 PM Dec 17, 2018 | |

ಭದ್ರಾವತಿ: ಶನಿವಾರ ನಗರದಿಂದ ಸುಮಾರು ಏಳೆಂಟು ಕಿಮೀ ದೂರದ ಕಾಡುರಸ್ತೆಯಲ್ಲಿರುವ ಶ್ರೀ ಉದ್ಧಾಂಜನೇಯ ಸ್ವಾಮಿ ದೇವಾಲಯದ ಸಮೀಪ ಚಿರತೆಯೊಂದು ಕಾಣಿಸಿಕೊಂಡಿತೆಂಬ ಸುದ್ದಿ ಹಾಗೂ ಚಿರತೆಯಿರುವ 3 ಫೋಟೋಗಳು ವಾಟ್ಸ್‌ಆ್ಯಪ್‌ ನಲ್ಲಿ ಹರಿದಾಡಿ ಆ ಸುತ್ತಮುತ್ತಲಿನ ಗ್ರಾಮಗಳ ಹಾಗೂ ನಗರದ ಜನರಲ್ಲಿ ಆತಂಕ ಮೂಡಿಸಿತು.

Advertisement

ನಗರ ಪ್ರದೇಶದಿಂದ ಬಂಡಿಗುಡ್ಡದ ಕಡೆ ಹೋಗುವ ಮಾರ್ಗದಲ್ಲಿ ದಟ್ಟ ಅರಣ್ಯ ಪ್ರದೇಶವಿದ್ದು ಅಲ್ಲಿ ಉದ್ಧಾಂಜನೇಯ ಸ್ವಾಮಿಯ ದೇವಾಲಯವಿದೆ. ಆ ದೇವಾಲಯಕ್ಕೆ ಸುತ್ತಮುತ್ತಲ ಗ್ರಾಮಗಳ ಜನರು ಹೋಗಿ ಬರುತ್ತಿರುತ್ತಾರೆ. ಶನಿವಾರ ಮದ್ಯಾಹ್ನ ಕೆಲವು ಯುವಕರು ತಮ್ಮ ದ್ವಿಚಕ್ರ ವಾಹನಗಳಲ್ಲಿ ರಸ್ತೆ ಬದಿಯಿರುವ ಆ ದೇವಾಲಯಕ್ಕೆ ಹೋಗಿದ್ದಾಗ ದೇವಾಲಯದ ಅನತಿ ದೂರದಲ್ಲಿ ಚಿರತೆಯೊಂದು ಕಂಡುಬಂದ ಕಾರಣ ಅವರು ಹೆದರಿ ಮರವೇರಿ ಕುಳಿತು ನಂತರ ಚಿರತೆ ಹೋದ ಮೇಲೆ ಮರದಿಂದ ಇಳಿದು ಅಲ್ಲಿಂದ ತೆರಳಿದರು ಎಂಬ ಸುದ್ದಿ ಹರಿದಾಡಿತು. 

ಅರಣ್ಯ ಇಲಾಖೆ ಮೇಲೆ ಅನುಮಾನ: ಉದ್ಧಾಂಜನೇಯ ಸ್ವಾಮಿ ದೇವಾಲಯವಿರುವ ಜಾಗ ಅರಣ್ಯ ಪ್ರದೇಶವಾಗಿದ್ದು ಅಲ್ಲಿ ಇತ್ತೀಚಿನ ಕೆಲವು ವರ್ಷಗಳಿಂದ ಮೂಲ ಆಂಜನೇಯನ ಶಿಲಾವಿಗ್ರಹಕ್ಕೆ ದೇವಾಲಯ ನಿರ್ಮಾಣವಾಗಿದೆ. ಪ್ರತೀ ಹುಣ್ಣಿಮೆ ಇಲ್ಲಿ ಅನ್ನ ಸಂತರ್ಪಣೆ ನಡೆಯುತ್ತದೆ. ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು ಅದಕ್ಕಾಗಿ ದೇವಾಲಯದ ಸಮಿತಿ ವತಿಯಿಂದ ಇತ್ತೀಚಿನ ವರ್ಷದ ಹಿಂದೆ ಭಕ್ತಾದಿಗಳ ಅನುಕೂಲಕ್ಕೆ ಭವನ ನಿರ್ಮಿಸುವ
ಪ್ರಯತ್ನದಲ್ಲಿದ್ದಾಗ ಅರಣ್ಯ ಇಲಾಖೆ ಅದನ್ನು ವಿರೋಧಿಸಿತ್ತು. ಇಲ್ಲಿಗೆ ಜನರು ಹೆಚ್ಚಾಗಿ ಬಾರದಂತೆ ಮಾಡಲು ಈಗ ಅರಣ್ಯ ಇಲಾಖೆಯೇ ಈ ರೀತಿ ಚಿರತೆಯನ್ನು ಇಲ್ಲಿ ತಂದು ಬಿಟ್ಟಿ ರಬಹುದೆಂಬ ಅನುಮಾನವನ್ನು ಕೆಲವರು ವ್ಯಕ್ತಪಡಿಸುತ್ತಾರೆ.

ಮತ್ತೆ ಕೆಲವರು ಈ ವಾಟ್ಸ್‌ ಆ್ಯಪ್‌ ಸುದ್ದಿ ಫೋಟೋ ಇಲ್ಲಿಯದಲ್ಲ. ಬೇರೆ ಎಲ್ಲಿಯದೋ ಇದು. ಸುಳ್ಳುಸುದ್ದಿ ಇರುವ ಸಾಧ್ಯತೆಯಿದೆ ಎಂಬ ಅನುಮಾನ ವ್ಯಕ್ತಪಡಿಸುತ್ತಾರೆ. ಈ ಕುರಿತಂತೆ ಪತ್ರಿಕೆಯು ಸ್ಥಳೀಯ ಅರಣ್ಯಾಧಿಕಾರಿ ಡಿಎಫ್‌ಒ ಚಲುವರಾಜ್‌ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಘಟನೆಯ ಕುರಿತಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ದೇವಾಲಯವಿರುವ ಪ್ರದೇಶ ಅರಣ್ಯ ಪ್ರದೇಶವಾಗಿರುವುದರಿಂದ ಅಲ್ಲಿ ಚಿರತೆ ಕಾಣಿಸಿಕೊಂಡಿರಬಹುದು.

ನಮ್ಮವರು ಅಲ್ಲಿಗೆ ಹೋದಾಗ ಯಾವುದೇ ಕಾಡುಪ್ರಾಣಿ ಕಂಡು ಬಂದಿಲ್ಲ. ಇಲ್ಲಿರುವ ಉದ್ದಾಂಜನೇಯ ಸ್ವಾಮಿ ದೇವಾಲಯ ಅರಣ್ಯ ಇಲಾಖೆಯ ವ್ಯಾಪ್ತಿಯೊಳಗಿರುವ ಪ್ರದೇಶವಾಗಿದೆ. ದೇವಾಲಯ ಸಮಿತಿ ಅಲ್ಲಿ ಬೇರೆ ಕಟ್ಟಡ ನಿರ್ಮಾಣಕ್ಕೆಂದು ಅರಣ್ಯ ಪ್ರದೇಶ ನೆಲಸಮ ಮಾಡುವ ಪ್ರಯತ್ನದಲ್ಲಿದ್ದಾಗ ಅರಣ್ಯ ಇಲಾಖೆ ಅದನ್ನು ವಿರೋಧಿ ಸಿ ಸಮಿತಿಯ ವಿರುದ್ಧ ಬೆಂಗಳೂರಿನಲ್ಲಿ ಲ್ಯಾಂಡ್‌ ಗ್ರ್ಯಾಬ್‌ ಪ್ರಾಹಿಬಿಷನ್‌ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿದ್ದು ಅದು ಇನ್ನೂ ಚಾಲ್ತಿಯಲ್ಲಿದೆ. ಈಗ ಅಲ್ಲಿ ಯಾವುದೇ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿಲ್ಲ. ಇದು ಅರಣ್ಯ ಪ್ರದೇಶವಾದುದರಿಂದ ಕಾಡುಪ್ರಾಣಿಗಳ ಸಂಚಾರ ಸಹಜವಾಗಿರುತ್ತದೆ. ಈ ಕಾಡಿನಲ್ಲಿ ಕಾಡುಕೋಣ, ಚಿರತೆ, ಕಾಡೆಮ್ಮೆ ಮುಂತಾದ ಕಾಡುಪ್ರಾಣಿಗಳು ಇವೆ ಎಂದು ಉತ್ತರಿಸಿದರು. 

Advertisement

ಒಟ್ಟಿನಲ್ಲಿ ಅರಣ್ಯದಲ್ಲಿನ ಆಂಜನೇಯ ದೇವಾಲಯಕ್ಕೆ ಹೋಗಲು ಕಾಡುಪ್ರಾಣಿಗಳ ಸಂಚಾರದಿಂದ ಭಕ್ತಾದಿಗಳು ಹಿಂಜರಿಯುವ ಸ್ಥಿತಿ ನಿರ್ಮಾಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next