ಹುಮನಾಬಾದ: ಅತ್ಯುತ್ತಮ ಔಷಧಿ ಗುಣ ಹೊಂದಿರುವ, ಆರೋಗ್ಯಕ್ಕೆ ಅಗತ್ಯವಾದ ನಿಂಬೆ ಹಣ್ಣಿನ ಬೆಲೆ ಈ ಬಾರಿ ಬಲು ದುಬಾರಿಯಾಗಿದೆ. ಪ್ರತೀ ವರ್ಷ ಬೇಸಿಗೆ ಅವಧಿಯಲ್ಲಿ ನಿಂಬೆ ಹಣ್ಣಿನ ಬೆಲೆ ಹೆಚ್ಚುವುದು ಸಹಜ. ಆದರೆ ಈ ಬಾರಿ ಕಳೆದ ವರ್ಷಕ್ಕಿಂತ ಹೆಚ್ಚು ದುಬಾರಿಯಾಗಿದೆ.
ಕಳೆದ ವರ್ಷ ಗುಣಮಟ್ಟದ ಒಂದು ನಿಂಬೆಹಣ್ಣು 5 ರೂಪಾಯಿಗೆ ಲಭ್ಯವಾಗುತ್ತಿತ್ತು. ಈ ಬಾರಿ 12 ರೂಪಾಯಿಗೆ ಏರಿದೆ. ಗಾತ್ರ ಆಧರಿಸಿ, ದೊಡ್ಡದಾದ ಪೂರ್ಣ ಹಣ್ಣಾದ ಪ್ರತಿ ನಿಂಬೆಗೆ 8ರಿಂದ 10 ಮತ್ತು 12 ರೂಪಾಯಿ. ಹಣ್ಣಾಗದ ಕಸುಕಾದ ನಿಂಬೆ ಹಣ್ಣಿನ ಬೆಲೆ 4, 5 ಮತ್ತು 6 ರೂಪಾಯಿ ಇದೆ.
ಬೇಸಿಗೆಯಲ್ಲಿ ದೇಹಕ್ಕೆ ತಂಪನ್ನೀಯುವ ನಿಂಬೆಯನ್ನು ಗ್ರಾಹಕರು ಹೇಗೂ ಖರೀದಿಸುತ್ತಾರೆ ಎಂಬ ವಿಶ್ವಾಸದಿಂದ ಹಣ್ಣು ಮಾರುವವರು ನಿಂಬೆ ಬೆಲೆಯನ್ನು ದ್ವಿಗುಣಗೊಳಿಸಿದ್ದಾರೆ ಎಂಬುದು ಶಿಕ್ಷಕ ಶಶಿಧರ ಘವಾಲ್ಕರ್, ಶ್ರೀಕಾಂತ ಸೂಗಿ, ಅನಿರುದ್ಧ ಜೋಷಿ, ಬಾಬುರಾವ್ ಕಾಳೆ, ಶ್ರೀಧರ ಚವ್ಹಾಣ ಅವರ ವಾದ.
ಒಂದು ನಿಂಬೆ ಹಣ್ಣಿನ್ನು 10, 12ರ ಬದಲಿಗೆ 5ರಿಂದ 6ಕ್ಕೆ ನೀಡಿದರೇ ಖರೀದಿಸುವವರಿಗೂ ಹೆಚ್ಚು ಭಾರ ಆಗದು ಎನ್ನುತ್ತಾರೆ ಮಡೆಪ್ಪ ಕುಂಬಾರ. ಗುಣಮಟ್ಟದ ದೊಡ್ಡ ನಿಂಬೆ ಹಣ್ಣಿನ ಬೆಲೆ 15 ರೂಪಾಯಿ ಎಂದರೆ ಏನರ್ಥ. ಅವರ ಉಪಜೀವನವೂ ಅದರ ಮೇಲೆ ಇದೆ ಎಂಬುದು ನಮಗೂ ಗೊತ್ತು. ಆದರೆ ಅದಕ್ಕೂ ಒಂದು ಮಿತಿ ಬೇಡವೇ ಎನ್ನುತ್ತಾರೆ ಪಂಡಿತರಾವ್ ಬಾಳೂರೆ.
ಬೆಲೆ ದುಬಾರಿ ಹಿನ್ನೆಲೆಯಲ್ಲಿ ಪಟ್ಟಣದ ವಿವಿಧ ಡಾಬಾಗಳಲ್ಲಿ ಊಟದ ಜೊತೆಗೆ ಕಡ್ಡಾಯವಾಗಿ ಕೊಡುತ್ತಿದ್ದ ನಿಂಬೆ ಹಣ್ಣನ್ನು ಈ ಬಾರಿ ಕಡಿತಗೊಳಿಸಿದ್ದಾರೆ. ಬೇಕಾದರೆ ಈರುಳ್ಳಿ ತೆಗೆದುಕೊಳ್ಳಿ ನಿಂಬೆ ಮಾತ್ರ ಕೇಳಬೇಡಿ ಅಂತ ಡಾಬಾ ಮಾಲೀಕರು ವಿನಂತಿಸುತ್ತಿದ್ದಾರೆ ಎಂದು ಪ್ರಾಧ್ಯಾಪಕ ಚಂದ್ರಕಾಂತ ಬಿರಾದಾರ, ಡಾಬಾ ಗ್ರಾಹಕರಾದ ಪ್ರಶಾಂತ ಹೊಸಮನಿ, ದಿಲೀಪಕುಮಾರ ಮೇತ್ರೆ, ಎಂ.ಡಿ.ರಿಜ್ವಾನ್, ರಾಜಪ್ಪ ಪೂಜಾರಿ ಹೇಳುತ್ತಾರೆ.
ಹಣ್ಣು ಮೊದಲು ನಮ್ಮ ಹೊಲದಲ್ಲೇ ಬೆಳೆಯುತ್ತಿದ್ದ ಕಾರಣ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದೇವೆ. ನೀರೇ ಇಲ್ಲದಿರುವಾಗ ಹಣ್ಣು ಎಲ್ಲಿಂದ ಮಾರುಕಟ್ಟೆಗೆ ಬರುತ್ತವೆ. ಈ ಭಾಗದಲ್ಲಿ ನಿಂಬೆ ತೋಟಗಳು ಒಣಗಿ ಬರಿದಾಗಿವೆ. ನಮ್ಮ ಉಪಜೀವನ ಜೋತೆಗೆ ಗ್ರಾಹಕರಿಗೆ ನಿಂಬೆ ಹಣ್ಣಿನ ಅಭಾವ ಆಗದಿರಲಿ ಎಂಬ ಕಾರಣಕ್ಕಾಗಿ ದುಬಾರಿ ಬೆಲೆ ಆದರೂ ತೆತ್ತು ತೆಲಂಗಾಣದಿಂದ ಖರೀದಿಸಿ, ತರುತ್ತಿದ್ದೇವೆ. ನಿಂಬೆ ಖರೀದಿ ಜೊತೆಗೆ ಸಾಗಾಣಿಕೆ ವೆಚ್ಚ ಸೇರಿ ನಮಗೆ ದುಬಾರಿ ಬೆಲೆ ಬೀಳುತ್ತಿದೆ. ಬೆಲೆ ಹೆಚ್ಚಿಸುವುದು ನಮಗೆ ಅನಿವಾರ್ಯವಾಗಿದೆ ಎನ್ನುತ್ತಾರೆ ನಿಂಬೆ ವ್ಯಾಪಾರಿಗಳಾದ ಕಾಶಮ್ಮ,ಸುಶೀಲಾಬಾಯಿ, ಸರಸ್ವತಿ ಅವರು.
•ಶಶಿಕಾಂತ ಕೆ.ಭಗೋಜಿ