Advertisement

ಯಾರಿಗೂ ಇಂಟ್ರೆಸ್ಟೇ ಇಲ್ಲ! ಅರ್ಧಕ್ಕೂ ಹೆಚ್ಚು ಜನ ಗೈರು

08:30 PM Dec 23, 2022 | Team Udayavani |

ಸುವರ್ಣ ವಿಧಾನಸೌಧ: ಅತ್ತ ಆಡಳಿತ ಪಕ್ಷಕ್ಕೂ ಬೇಡ; ಇತ್ತ ವಿರೋಧ ಪಕ್ಷಗಳಿಗೂ ಬೇಕಿಲ್ಲ… ಹೀಗಾಗಿ, ಹತ್ತು ಹಲವು ನಿರೀಕ್ಷೆಗಳೊಂದಿಗೆ ಆರಂಭಗೊಂಡ ರಾಜ್ಯ ವಿಧಾನಮಂಡಲ ಅಧಿವೇಶನ ನಿರಾಸಕ್ತಿ ನಡುವೆ ಮೊದಲಾರ್ಧ ಪೂರ್ಣಗೊಳಿಸಿದೆ. ಐದು ದಿನಗಳ ಕಾಲ ಅಧಿವೇಶನ ನಡೆದರೂ ಕಲಾಪ ನಡೆದದ್ದು ಕೆಲವೇ ಗಂಟೆಗಳು ಮಾತ್ರ.

Advertisement

ಕೋಟ್ಯಂತರ ರೂ. ವೆಚ್ಚ ಮಾಡಿ ನಡೆಸುತ್ತಿರುವ ಆಧಿವೇಶನದಲ್ಲಿ ಅನಗತ್ಯ ವಿಚಾರಗಳಿಗೆ ಗದ್ದಲದಿಂದ ಸಮಯ ವ್ಯರ್ಥಗೊಂಡಿದ್ದೇ ಹೆಚ್ಚು. ವಿಧಾನಸಭೆಯಲ್ಲಿ ಮೊದಲ ದಿನವೇ ಸದಸ್ಯರ ಗೈರು ಹಾಜರಿಯಿಂದ ಸದನ ಖಾಲಿ ಖಾಲಿಯಾಗಿತ್ತು. ಕೊನೇ ದಿನ ಅಡಳಿತ ಮತ್ತು ಪ್ರತಿಪಕ್ಷ ಸೇರಿ 45 ಸದಸ್ಯರು ಹಾಜರಿದ್ದರು. ಉಳಿದ ಮೂರು ದಿನ ವಿಧಾನಸಭೆಯಲ್ಲಿ ಸದಸ್ಯರ ಹಾಜರಿ 120ರ ಗಡಿ ದಾಟಲಿಲ್ಲ. ಅಂದರೆ, ಅರ್ಧಕ್ಕರ್ಧ ಮಾತ್ರ ಭಾಗವಹಿಸಿದ್ದರು.
ಕೊನೇ ದಿನ ಶುಕ್ರವಾರ ಬರೇ 1.30 ಗಂಟೆ ಮಾತ್ರ ಕಲಾಪ ನಡೆದಿದ್ದರೆ, ಡಿ.21ರಂದು ಎರಡು ಗಂಟೆ ಮಾತ್ರ ಕಲಾಪ ನಡೆದಿತ್ತು.

ನೂತನ ಪಿಂಚಣಿ ವ್ಯವಸ್ಥೆ, ಕಬ್ಬು ಬೆಳೆಗಾರರ ಸಮಸ್ಯೆ, ಚರ್ಮಗಂಟೆ ರೋಗ ಸೇರಿ ಹಲವು ವಿಚಾರಗಳು ಪ್ರಸ್ತಾಪಗೊಂಡರೂ ಚರ್ಚೆಯಾಗಲಿಲ್ಲ. ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳು ಪ್ರಸ್ತಾಪವಾಗಲಿಲ್ಲ. ಮೊದಲ ದಿನ ಸಂತಾಪಕ್ಕೆ ಸೀಮಿತವಾಗಿ ಎರಡನೇ ಒಂದಷ್ಟು ಚರ್ಚೆ ನಡೆದಿದ್ದು ಬಿಟ್ಟರೆ ಮೂರನೇ ದಿನ ಬಸ್‌ ಸೇವೆ ಪ್ರಸ್ತಾಪಕ್ಕೆ ಸಚಿವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿ ಅರ್ಧದಿನ ಕಲಾಪ ಬಲಿಯಾಯಿತು.

ಗಡಿ ವಿಚಾರದಲ್ಲಿ ಒಕ್ಕೊರಲ ನಿರ್ಣಯ ಕೈಗೊಂಡಿದ್ದು ಹೊರತುಪಡಿಸಿದರೆ ಐದು ದಿನ ಯಾವುದೇ ಮಹತ್ವದ ವಿಚಾರಗಳ ಚರ್ಚೆಯಾಗಲಿಲ್ಲ. ಗಡಿ ವಿವಾದ ಕುರಿತ ಚರ್ಚೆ ಸಂದರ್ಭದಲ್ಲಿ ಬೆಳಗಾವಿಯ 16 ಶಾಸಕರ ಪೈಕಿ ಸದನದಲ್ಲಿ ಹಾಜರಿದ್ದದ್ದು 8 ಮಂದಿ ಮಾತ್ರ! ಅಧಿವೇಶನದಲ್ಲಿ ಪಾಲ್ಗೊಂಡ ಶಾಸಕರ ಪೈಕಿ ಉತ್ತರ ಕರ್ನಾಟಕದವರೇ ಜಾಸ್ತಿ.

ಅಧಿಕೃತವಾಗಿಯೇ ಹಲವು ಶಾಸಕರು ಅಧಿವೇಶನಕ್ಕೆ ಗೈರು ಆಗಲು ಸ್ಪೀಕರ್‌ ಅನುಮತಿ ಪಡೆದಿದ್ದರು. ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಧಿವೇಶನಕ್ಕೆ ಬಾರದ ಕಾರಣ ಜೆಡಿಎಸ್‌ ಶಾಸಕರು ಕಲಾಪದಲ್ಲಿ ಪಾಲ್ಗೊಂಡಿದ್ದು ಕಡಿಮೆಯೇ. ಚುನಾವಣೆ ಹತ್ತಿರ ಇರುವುದರಿಂದ ಕ್ಷೇತ್ರಗಳಲ್ಲಿ ಆಭಿವೃದ್ಧಿ ಕಾರ್ಯಕ್ರಮ, ಕಾರ್ಯಕರ್ತರ ಸಭೆಗಳು ನಡೆಸುತ್ತಿರುವುದರಿಂದ ಬಹುತೇಕ ಶಾಸಕರು ಅಧಿವೇಶನಕ್ಕೆ ಬರಲು ಆಗುತ್ತಿಲ್ಲ ಎಂದು ಸಚಿವರೊಬ್ಬರು ತಿಳಿಸಿದರು.

Advertisement

ಬಿ.ಎಸ್‌.ಯಡಿಯೂರಪ್ಪ, ನಾಗನಗೌಡ ಕುಂದಕೂರ್‌ ಸೇರಿ ಹಿರಿಯ ಸದಸ್ಯರು ಅಧಿವೇಶನದಲ್ಲಿ ಭಾಗಿಯಾದರೂ ಯುವ ಶಾಸಕರು ನಿರಾಸಕ್ತಿ ತೋರಿದ್ದರು. ಕೆಲವರು ಸುವರ್ಣಸೌಧಕ್ಕೆ ಬಂದರೂ ಕಲಾಪದಲ್ಲಿ ಪಾಲ್ಗೊಳ್ಳಲಿಲ್ಲ.

ಸಚಿವ ಸ್ಥಾನ ಸಿಗದೆ ಮುನಿಸಿಕೊಂಡಿದ್ದ ಕೆ.ಎಸ್‌. ಈಶ್ವರಪ್ಪ ಗುರುವಾರ ಸದನಕ್ಕೆ ಬಂದರೆ ರಮೇಶ್‌ ಜಾರಕಿಹೊಳಿ ಶುಕ್ರವಾರ ಕಾಣಿಸಿಕೊಂಡರು.

ಈ ಮಧ್ಯೆ, ಕೊರೊನಾ ಹಿನ್ನೆಲೆಯಲ್ಲಿ ಸಂಸತ್‌ ಅಧಿವೇಶನ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಮುಂದೂಡಿಕೆ ಮಾಡಿರುವುದರಿಂದ ರಾಜ್ಯ ವಿಧಾನಮಂಡಲ ಅಧಿವೇಶನ ಡಿ.30 ರವರೆಗೂ ನಡೆಸುವುದು ಅನುಮಾನ ಎಂಬ ಮಾತುಗಳು ಕೇಳಿಬರುತ್ತಿವೆ.

ವಿಧಾನಸಭೆಗೆ ಹೋಲಿಸಿದರೆ ವಿಧಾನಪರಿಷತ್‌ ಕಲಾಪ ಸ್ವಲ್ಪ ಮಟ್ಟಿಗೆ ಸಮಾಧಾನಕರ. ಸದಸ್ಯರ ಹಾಜರಾತಿ ಪ್ರಮಾಣವೂ ಹೆಚ್ಚಾಗಿತ್ತು. ಅಲ್ಲಿ 75 ಸದಸ್ಯರಲ್ಲಿ ಸರಾಸರಿ 55 ಸದಸ್ಯರು ಹಾಜರಿದ್ದರು. ಕಳೆದ ಐದು ದಿನಗಳಲ್ಲಿ 24 ಗಂಟೆ ಕಲಾಪ ನಡೆಯಿತು. ಮೊದಲ ದಿನ ಅಲ್ಲೂ ಸಂತಾಪಕ್ಕೆ ಸೀಮಿತವಾಗಿ ಸಭಾಪತಿ, ಉಪ ಸಭಾಪತಿ ಚುನಾವಣೆ ಪ್ರಕ್ರಿಯೆ, ಶುಭ ಕೋರಿಕೆ ಹೊರತುಪಡಿಸಿ ಮೂರು ದಿನ ವಿಧಾನಸಭೆಗಿಂತ ಹೆಚ್ಚು ಅವಧಿ ಕಲಾಪ ನಡೆಯಿತು. ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ಚರ್ಚೆ ನಡೆಯಿತು.

ಹಾಜರಾತಿ
ವಿಧಾನಸಭೆ ಶೇ 50
ವಿಧಾನ ಪರಿಷತ್‌ ಶೇ 80

ಸಮಯ
ವಿಧಾನಸಭೆ 17.30 ಗಂಟೆ
ವಿಧಾನಪರಿಷತ್‌ 24 ಗಂಟೆ

Advertisement

Udayavani is now on Telegram. Click here to join our channel and stay updated with the latest news.

Next