ದಾವಣಗೆರೆ: ಸಮಾಜ, ದೇಶ ಉತ್ತಮ ಹಾದಿಯಲ್ಲಿ ಮುನ್ನಡೆಯುವಂತಾಗಲು ಎಲ್ಲರೂ ಕಾನೂನು ಅರಿವು ಹೊಂದಿರಬೇಕು ಎಂದು ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಆಡಳಿತಾಧಿಕಾರಿ ಪ್ರೊ| ವೈ. ವೃಷಭೇಂದ್ರಪ್ಪ ತಿಳಿಸಿದ್ದಾರೆ.
ಶುಕ್ರವಾರ ಬಿ.ಇ.ಎ. ಶಿಕ್ಷಣ ಮಹಾವಿದ್ಯಾಲಯದಲ್ಲಿ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಾದಿಯಾಗಿ ಎಲ್ಲರೂ ಕಾನೂನು ಅರಿವು ಹೊಂದಿರಬೇಕು. ಕಾನೂನು ಮಾಹಿತಿ ಇರಲಿಲ್ಲ ಎಂದು ಮಾಡುವ ತಪ್ಪಿಗೂ ಸಹ ಕಾನೂನಿನಲ್ಲಿ ರಿಯಾಯತಿ ಇಲ್ಲ ಎಂಬುದನ್ನು ಮನಗಾಣಬೇಕು ಎಂದರು.
ಯಾವುದೇ ದೇಶದಲ್ಲಿ ಶಾಂತಿಯುತ ಆಡಳಿತ ನಡೆಸಬೇಕಾದಲ್ಲಿ ಕಾನೂನು ಅರಿವು ಅತ್ಯಗತ್ಯ. ಎಲ್ಲರಲ್ಲಿ ದೇಶ, ಸಮಾಜದ ಬಗ್ಗೆ ಉತ್ತಮ ಆಲೋಚನೆ, ಚಿಂತನೆ ಇದ್ದಲ್ಲಿ ಕಾನೂನು ಅವಶ್ಯಕತೆ ಕಂಡು ಬರುವುದಿಲ್ಲ, ಎಲ್ಲರೂ ಕಾನೂನು ಪರಿಪಾಲನೆ ಮಾಡಬೇಕು. ಅನ್ಯಾಯವಾದಾಗ ಪ್ರತಿಭಟನೆ ವ್ಯಕ್ತಪಡಿಸುವಂತಾಗಬೇಕು ಎಂದು ತಿಳಿಸಿದರು.
ಈಚೆಗೆ ಸಮಾಜದಲ್ಲಿ ಕಾನೂನು ಉಲ್ಲಂಘನೆಯ ಘಟನೆಗಳು ಹೆಚ್ಚಾಗಿ ನಡೆಯುತ್ತಿರುವುದು ಕಂಡು ಬರುತ್ತಿದೆ. ಪ್ರಾಮಾಣಿಕ ಅಧಿಕಾರಿಗಳು, ಇತರರ ಕೊರತೆಯಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಒಳ್ಳೆಯ ಸಮಾಜ, ದೇಶಕ್ಕಾಗಿ ಕಾನೂನಿಗೆ ತಲೆಬಾಗಬೇಕು. ಅದರಂತೆ ನಡೆಯಬೇಕು ಎಂದು ತಿಳಿಸಿದರು.
ಆರ್.ಎಲ್. ಕಾನೂನು ಕಾಲೇಜು ಪ್ರಾಚಾರ್ಯ ಡಾ| ಬಿ.ಎಸ್. ರೆಡ್ಡಿ ಮಾತನಾಡಿ, ಮನುಷ್ಯರಾದ ನಮಗೆ ನಾಗರಿಕತೆ ಇಲ್ಲದೇ ಹೋದಲ್ಲಿ ಪ್ರಾಣಿಗಳಿಗೆ ಮತ್ತು ನಮಗೆ ಯಾವುದೇ ವ್ಯತ್ಯಾಸ ಇರುವುದಿಲ್ಲ. ಹಾಗಾಗಿ ನಾವು ಕಾನೂನು ಪರಿಪಾಲಕರಾಗಬೇಕು. ಉತ್ತಮ ನಾಗರಿಕರಾಗಿ ದೇಶ, ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಎಲ್ಲರಿಗೆ ಗೌರವ
ನೀಡಬೇಕು. ಪ್ರತಿಯೊಬ್ಬರು ಕಾನೂನು ಅರಿವು ಹೊಂದಿರಲೇಬೇಕು ಎಂದು ತಿಳಿಸಿದರು.
ಭಾರತದಲ್ಲಿ ಇರುವಷ್ಟು ಕಾನೂನು ಎಲ್ಲಿಯೂ ಇಲ್ಲ. ಪ್ರತಿಯೊಂದಕ್ಕೂ ಕಾನೂನುಗಳಿವೆ. ಕಾನೂನು ಅನ್ವಯ ನಡೆಯುವಂತಾಗಬೇಕು. ವಿದ್ಯಾರ್ಥಿಗಳು ಕಾನೂನು ತಿಳಿದುಕೊಳ್ಳುವ ಜೊತೆಗೆ ಇತರರಲ್ಲೂ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.
ಕಾಲೇಜು ಪ್ರಾಶುಂಪಾಲೆ ಡಾ| ಸಿ.ಆರ್. ಶಕೀಲ ಬಾನು ಅಧ್ಯಕ್ಷತೆ ವಹಿಸಿದ್ದರು. ಪ್ರೊ| ಸೋಮಶೇಖರ್, ಪ್ರೊ| ಜಿ.ಎಸ್. ಸತೀಶ್, ಟಿ.ಸಿ. ಪಂಕಜಾ, ಪ್ರೊ| ವಿದ್ಯಾಧರ್ ವೇದವರ್ಮ, ಕೆ.ಎಂ. ಯಶವಂತಕುಮಾರ್, ಕೆ. ರಂಜಿತಾ ಇತರರು ಇದ್ದರು.