ಬೆಂಗಳೂರು: “ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜನಪ್ರಿಯತೆಗಾಗಿ ತರಾತುರಿಯಲ್ಲಿ ನಗರದಲ್ಲಿ ಅಕ್ರಮ-ಸಕ್ರಮ ಯೋಜನೆ ಜಾರಿಗೊಳಿಸಲು ಮುಂದಾಗಿದ್ದಾರೆ,’ ಎಂದು ಮಾಜಿ ಪ್ರಧಾನಿ ಎಚ್ .ಡಿ.ದೇವೇಗೌಡ ಆರೋಪಿಸಿದ್ದಾರೆ. ಮಾಗಡಿ ರಸ್ತೆ ಹೇರೋಹಳ್ಳಿಯಲ್ಲಿ ಉದ್ಯಾನ ಜಾಗ ಕಬಳಿಕೆ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದರು.
“ಈಗಿನ ರೂಪದಲ್ಲೇ ಅಕ್ರಮ-ಸಕ್ರಮ ಜಾರಿಗೊಳಿಸಿದರೆ ಸಾಕಷ್ಟು ಜನರಿಗೆ ವಂಚನೆ ಹಾಗೂ ತೊಂದರೆಯಾಗಲಿದೆ,’ ಎಂದು ಹೇಳಿದರು. “ಬೆಂಗಳೂರಿನಲ್ಲಿ ಏನಾಗುತ್ತಿದೆ ಎಂಬುದು ನನಗೆ ಗೊತ್ತಿದೆ. ಕುಮಾರಸ್ವಾಮಿಯವರಿಗೂ ಮಾಹಿತಿಯಿದೆ. ಅಕ್ರಮ-ಸಕ್ರಮದ ತನಿಖಾಧಿಕಾರಿಗಳು ಗಟ್ಟಿಯಾಗಿ ನಿಲ್ಲದಿದ್ದರೆ ಕಷ್ಟ.
ಹೇರೋಹಳ್ಳಿ ವಾರ್ಡ್‌ನ ಲಿಂಗಧೀರನಹಳ್ಳಿಯಲ್ಲಿ ಆಗಿರುವ ಭೂ ಕಬಳಿಕೆ ಇದಕ್ಕೆ ಉದಾರಹಣೆ,’ ಎಂದರು. “ಕುಮಾರಸ್ವಾಮಿ ಸಿಎಂ ಆಗಿದ್ದಾಗ ಸರ್ಕಾರದ ಡಿ ಗ್ರೂಪ್ ನೌಕರರಿಗೆ ನಿವೇಶನ ನೀಡಲು ರೈತರಿಂದ ನೇರವಾಗಿ ಭೂಮಿ ಪಡೆದು ಬಡಾವಣೆ ನಿರ್ಮಿಸಲು ತೀರ್ಮಾನಿಸಿದ್ದರು.
ಆದರೆ, ಅವರು ಅಧಿಕಾರ ಕಳೆದಿಕೊಂಡ ಮೇಲೆ ಇಲ್ಲಿ ಸಾಕಷ್ಟು ಅಕ್ರಮ ಆಗಿದೆ. ಖುದ್ದು ನನ್ನ ಚಾಲಕ ವಸಂತ್ ಅವರು ದುಡ್ಡು ಕಟ್ಟಿದ್ದರೂ ನಿವೇಶನ ಸಿಕ್ಕಿಲ್ಲ. ಡಿ ಗ್ರೂಪ್ ನೌಕರರ ಜತೆ ಬೇರೆಯವರಿಗೂ ನಿವೇಶನ ನೀಡಲಾಗಿದೆ. ಉದ್ಯಾನದ 2.10 ಎಕರೆ ಜಮೀನು ಒತ್ತುವರಿ ಮಾಡಿ ಮನೆ ಕಟ್ಟಲಾಗುತ್ತಿದೆ,’ ಎಂದು ಮಾಜಿ ಪ್ರಧಾನಿ ದೂರಿದರು.
ಹೋರಾಟದ ಎಚ್ಚರಿಕೆ: “ಮುಂದೆ ಎಲ್ಲವೂ ಸಕ್ರಮವಾಗಲಿದೆ ಎಂಬ ಧೈರ್ಯದಿಂದ ಇಲ್ಲಿ ಒತ್ತುವರಿ ಜಾಗದಲ್ಲಿ ಮನೆ ನಿರ್ಮಿಸಲಾಗುತ್ತಿದೆ. ಸ್ಥಳೀಯ ರಾಜಕಾರಣಿಗಳ ಪ್ರಭಾವ ಇಲ್ಲದೆ ಏನೂ ನಡೆಯುವುದಿಲ್ಲ. ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಡಿ ಗ್ರೂಪ್ ನೌಕರರಿಗೆ ಅನ್ಯಾಯ ಆಗದಂತೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ನಾನು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ,’ ಎಂದು ಎಚ್ಚರಿಕೆ ನೀಡಿದರು.