ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (MUDA) ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ರಾಜ್ಯಪಾಲರ ಅನುಮತಿಯನ್ನು ಎತ್ತಿ ಹಿಡಿದಿರುವ ನ್ಯಾಯಾಲಯದ ಆದೇಶ ಹಾಗೂ ಅವರ ವಿರುದ್ಧ ಲೋಕಾಯುಕ್ತ ಪೊಲೀಸರ ತನಿಖೆಗೆ ಆದೇಶಿಸಿರುವ ಕುರಿತು ಮೇಲ್ಮನವಿ ಸಲ್ಲಿಸಲು ಹಿರಿಯ ವಕೀಲರು ಮತ್ತು ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ.
ಕಾಂಗ್ರೆಸ್ ಶಾಸಕ, ಹಿರಿಯ ವಕೀಲ ಮತ್ತು ಸಿಎಂ ಸಿದ್ದರಾಮಯ್ಯ ಅವರ ಮುಖ್ಯ ಕಾನೂನು ಸಲಹೆಗಾರ ಎಎಸ್ ಪೊನ್ನಣ್ಣ ಗುರುವಾರ(ಸೆ26) ಸುದ್ದಿಗಾರರಿಗೆ ಮಾಹಿತಿ ನೀಡಿ “ನಾವು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇವೆ, ಯಾವುದೇ ವಿಚಾರಣೆ ಅಥವಾ ತನಿಖೆ ಇರಲಿ, ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಕಾನೂನಾತ್ಮಕವಾಗಿ ಆಗಿರುವ ಕೆಲವು ಲೋಪದೋಷಗಳನ್ನು ಸರಿಪಡಿಸಬೇಕು, ಇದು ನಮ್ಮ ಕರ್ತವ್ಯವಾಗಿದೆ” ಎಂದರು.
”ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಂಬಂಧಿಸಿದಂತೆ ಮೇಲ್ಮನವಿ ಸಲ್ಲಿಸಬೇಕಾಗಿದೆ. ಎಲ್ಲಿ ಮತ್ತು ಯಾವಾಗ ಮತ್ತು ಯಾವ ಕ್ರಮ ತೆಗೆದುಕೊಳ್ಳಬೇಕು, ಈ ಎಲ್ಲ ವಿಷಯಗಳನ್ನು ನಾವು ಪರಿಶೀಲಿಸುತ್ತಿದ್ದೇವೆ” ಎಂದರು.
”ವಕೀಲರು ಮತ್ತು ಹಿರಿಯ ವಕೀಲರೊಂದಿಗೆ ಚರ್ಚೆ ನಡೆಯುತ್ತಿದೆ. ಪ್ರಕರಣದಲ್ಲಿ ವಾದ ಮಂಡಿಸಿದ ದೆಹಲಿಯಲ್ಲಿರುವ ನಮ್ಮ ವಕೀಲರ (ಅಭಿಷೇಕ್ ಮನು ಸಿಂಘ್ವಿ) ಸಲಹೆ ಪಡೆಯಲು ಪ್ರಯತ್ನಿಸುತ್ತೇವೆ ಮತ್ತು ಒಂದೆರಡು ದಿನಗಳಲ್ಲಿ ನಾವು ನಮ್ಮ ನಿಲುವನ್ನು ಸ್ಪಷ್ಟಪಡಿಸುತ್ತೇವೆ” ಎಂದರು.
”ರಾಜ್ಯಪಾಲರ ಮನವೊಲಿಕೆ ಇಲ್ಲ ಎಂಬುದು ನಮ್ಮ ವಾದವಾಗಿತ್ತು. Application of mind ಎಂಬ ಕಾನೂನು ತತ್ವವು ರಾಜ್ಯಪಾಲರಿಗೆ ಮಾತ್ರ ಸೀಮಿತವಾಗಿಲ್ಲ, ನ್ಯಾಯಾಲಯಕ್ಕೂ ಅನ್ವಯಿಸುತ್ತದೆ” ಎಂದರು.