ಚನ್ನಪಟ್ಟಣ: ಭವಿಷ್ಯದ ಉಜ್ವಲ ಪ್ರಜೆಗಳಾದ ಇಂದಿನ ಕಾಲೇಜು ವಿದ್ಯಾರ್ಥಿಗಳು ಶಿಸ್ತು, ಸಂಯಮದ ಜೊತೆ ಸಂಸ್ಕಾರವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಾಲೂಕು ಪೊಲೀಸ್ ಉಪವಿಭಾಗಾಧಿಕಾರಿ ಕೆ. ಎನ್.ರಮೇಶ್ ಹೇಳಿದರು.
ನಗರದ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಸರ್ಕಾರಿ ಪ್ರಥಮದರ್ಜೆ ಕಾಲೇಜು, ದೈಹಿಕ ಶಿಕ್ಷಣ ವಿಭಾಗ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಐಕ್ಯೂಎಸಿ ಸಂಯುಕ್ತಾಶ್ರ ಯದಲ್ಲಿ ನಡೆದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಬಲಿಷ್ಠ ಭಾರತಕ್ಕೆ ಯುವಕರ ಪಾತ್ರ ಬಹಳ ಮುಖ್ಯವಾಗಿದೆ. ಉನ್ನತಮಟ್ಟದ ವಿದ್ಯಾಭ್ಯಾಸ ಮಾಡು ವುದರ ಮುಖಾಂತರ ವಿದ್ಯಾಭ್ಯಾಸ ಮಾಡಿದ ಕಾಲೇಜು ಹಾಗೂ ತಂದೆ- ತಾಯಿಗೆ ಕೀರ್ತಿ ತರುವಂತೆ ತಮ್ಮ ಜೀವನದಲ್ಲಿ ಸಾಧನೆ ಮಾಡಿ, ದೇಶ ನಮಗೇನು ನೀಡಿದೆ ಎಂಬುದರ ಬದಲಾಗಿ ದೇಶಕ್ಕೆ ನಮ್ಮ ಕೊಡುಗೆ ಏನು? ಎಂಬುದರ ಬಗ್ಗೆ ಚಿಂತನೆ ಮಾಡಬೇಕು ಎಂದು ತಿಳಿಸಿದರು.
ಅಪರಾಧ ತಡೆಗೆ ಕೈ ಜೋಡಿಸಿ: ನಗರ ಪೊಲೀಸ್ ಠಾಣೆಯ ಪಿ.ಎಸ್.ಐ. ಹರೀಶ್ ಮಾತನಾಡಿ, ಪೊಲೀಸರ ಜೊತೆ ಸಮಾಜ ಕೈ ಜೋಡಿಸಿದರೆ ಸಮಾಜ ದಲ್ಲಿ ನಡೆಯುವ ಅಪರಾಧ ಚಟುವಟಿಕೆಗಳನ್ನು ನಿಯಂತ್ರಣ ಮಾಡಬಹುದು. ಅದರಲ್ಲೂ ಅಪರಾಧ ಚಟುವಟಿಕೆಗಳನ್ನು ನಿಯಂತ್ರಣ ಮಾಡಲು ಯುವಕರ ಪಾತ್ರ ಬಹಳ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ತಮ್ಮ ಕಣ್ಣೇದುರಿಗೆ ಯಾವುದೇ ರೀತಿಯ ಅಪರಾಧ ಚಟುವಟಿಕೆಗಳು ನಡೆದರೂ ಕೂಡಲೇ ಸ್ಥಳಿಯ ಪೊಲೀಸ್ ಠಾಣೆ, ಇಲ್ಲವೆ ತಮ್ಮ ಕಾಲೇಜಿನ ಮುಖ್ಯಸ್ಥರಿಗೆ ತಿಳಿಸಿ, ಮುಂದಾಗುವ ಅನಾಹುತವನ್ನು ತಪ್ಪಿಸಲು ನೆರವಾಗಬೇಕು ಎಂದು ಹೇಳಿದರು.
ಸಾರ್ವಜನಿಕರ ಸೇವೆಗೆ ಬದ್ಧ: ದಿನದ 24 ತಾಸುಗಳು ಕೂಡ ತಮ್ಮ ಠಾಣೆಯನ್ನು ತೆರೆದು ಕೊಂಡು ಯಾವ ಹೊತ್ತಿನಲ್ಲೂ ಸಾರ್ವಜನಿಕರ ಸೇವೆಗೆ ಬದ್ದರಾಗಿರುವ ಇಲಾಖೆ ಇದ್ದರೆ ಅದು ಪೊಲೀಸ್ ಇಲಾಖೆಯಾಗಿದೆ. ಯಾವುದೇ ಸಮಸ್ಯೆ ಹಾಗೂ ಸಲಹೆ, ಸಹಕಾರವಿದ್ದರೂ ಪೊಲೀಸ್ ಇಲಾಖೆಯಿಂದ ಪಡೆಯಬಹುದಾಗಿದೆ. ಜಿಲ್ಲೆಯಲ್ಲಿಯೇ ಗುಣಮಟ್ಟದ ವಿದ್ಯಾಸಂಸ್ಥೆ ಹಾಗೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಜಿಲ್ಲೆಯ ಏಕೈಕ ವಿದ್ಯಾಸಂಸ್ಥೆಯಾಗಿರುವ ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜು ಬಗ್ಗೆ ಉತ್ತಮ ಹೆಸರಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ವೆಂಕಟೇಶ್ ಮಾತನಾಡಿ, ಪ್ರತಿಯೊಬ್ಬರ ಸಹಕಾರ, ಪ್ರೋತ್ಸಾಹ ದಿಂದಲೇ ಸರ್ಕಾರಿ ಪ್ರಥಮದರ್ಜೆ ಕಾಲೇಜು ಪ್ರತಿ ವರ್ಷವು ತನ್ನದೇ ಆದ ಬೆಳವಣಿಗೆಯನ್ನು ಮುಂದುವರಿಸಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ತಮ್ಮ ಮಕ್ಕಳು ವಿದ್ಯಾವಂತರಾಗಿ ಉನ್ನತಮಟ್ಟದ ಉದ್ಯೋಗವನ್ನು ಪಡೆಯದಿದ್ದರೂ, ಅವರ ಜೀವನವನ್ನು ಅವರೇ ರೂಪಿಸಿಕೊಳ್ಳಲಿ ಎಂದು ತಮ್ಮ ಯಾವುದೇ ಕಷ್ಟಗಳನ್ನು ಮಕ್ಕಳಿಗೆ ಹೇಳದೆ ಮಕ್ಕಳಿಗಾಗಿ ಜೀವವನ್ನು ಸವೆಸುವ ತಂದೆ-ತಾಯಿಯ ಆಸೆಗೆ ತಣ್ಣೀರೆರಚದೆ, ತಂದೆ-ತಾಯಿಯ ಆಸೆಯನ್ನು ಈಡೇರಿಸುವಂತ ಮಕ್ಕಳಾಗಿ ಬದುಕಿ ಎಂದು ಹೇಳಿದರು. ದೈಹಿಕ ಶಿಕ್ಷಣ ನಿರ್ದೇಶಕ ನಂಜುಂಡ, ಶ್ರೀಕಾಂತ್. ಎನ್, ಡಾ.ಮುಜಾಹಿದ್ ಖಾನ್, ಡಾ.ಉಷಾ ಮಾಲಿನಿ,ನಾಗರಾಜು, ರಮೇಶ್, ಸೋಮಶೇಖರ್, ಪುಪ್ಪ, ಮಧು ಸಿ.ಎಂ ಹಾಜರಿದ್ದರು.