Advertisement

ಗ್ರಾಮೀಣರಿಗಾಗಿ ಕಾನೂನು ಅರಿವು ಕಾರ್ಯಕ್ರಮ

03:13 PM Sep 15, 2022 | Team Udayavani |

ಸೇಡಂ: ಗ್ರಾಮೀಣ ಭಾಗದ ಕೆಲವು ಜನರಲ್ಲಿ ಕಾನೂನಿನ ಅರಿವಿನ ಕೊರತೆ ಕಾರಣಕ್ಕಾಗಿ ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದು, ಅವರಿಗೆ ಸೂಕ್ತ ಕಾನೂನಿನ ಅರಿವು ಮತ್ತು ಸಲಹೆ ನೀಡಲು ಕಾನೂನಿನ ಅರಿವು ನೆರವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಸದಾಶಿವ ಸ್ವಾಮೀಜಿ ನುಡಿದರು.

Advertisement

ಪಟ್ಟಣದ ನೀಲಗಂಗಮ್ಮ ಸಜ್ಜನಶೆಟ್ಟಿ ಕಲ್ಯಾಣ ಮಂಟಪದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಅನೇಕರಲ್ಲಿ ಆಸ್ತಿ ಜಂಜಾಟ, ಕೌಟುಂಬಿಕ ಕಲಹ ಸೇರಿದಂತೆ ಇನ್ನಿತರ ಸಮಸ್ಯೆಗಳಿರುತ್ತವೆ. ಕಾನೂನಿನ ಅರಿವು ಇಲ್ಲದ ಕಾರಣಕ್ಕೆ ಕೆಲವೊಮ್ಮೆ ಕಲಹಗಳು ವಿಕೋಪಕ್ಕೆ ಹೋಗಿ ಕೋರ್ಟ್‌, ಕಚೇರಿ ಅಲೆಯುವ ಪರಿಸ್ಥಿತಿ ಉಂಟಾಗುತ್ತವೆ. ಇಂತಹ ಘಟನೆಗಳನ್ನು ತಪ್ಪಿಸಲು ಈ ಕಾರ್ಯಕ್ರಮದ ಮೂಲಕ ಜನರಿಗೆ ಕಾನೂನಿನ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಕಾನೂನು ಅರಿವು ಕಾರ್ಯಕ್ರಮದ ಪ್ರಮುಖ ವಿಶ್ವನಾಥ ಕೋರಿ ಮಾತನಾಡಿ, ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘ, ಜೆ.ಎನ್‌.ಆರ್‌ ಲಡ್ಡಾ ಕಾನೂನು ಮಹಾವಿದ್ಯಾಲಯ ಹಾಗೂ ವಿಕಾಸ ಅಕಾಡೆಮಿ ಸಹಭಾಗಿತ್ವದಲ್ಲಿ ಸೇಡಂ ಸುತ್ತಲಿನ 15 ಗ್ರಾಮಗಳಲ್ಲಿ ಈ ಕಾನೂನು ಅರಿವು-ನೆರವು ಕಾರ್ಯಕ್ರಮ ಮಾಡಲಾಗುತ್ತಿದೆ. ಬುಧವಾರ ತಾಲೂಕಿನ ಮೀನಹಾಬಾಳ ಗ್ರಾಮದಲ್ಲಿ ಕಾರ್ಯಕ್ರಮ ಉದ್ಘಾಟನೆಯಾಗಿದ್ದು, ತೊಟ್ನಳ್ಳಿ, ಸಂಗಾವಿ, ಮಲಕೂಡ, ತರನಳ್ಳಿ, ಅರೆಬೊಮ್ಮನಳ್ಳಿ, ಬಿಜನಳ್ಳಿ, ಹೂಡಾ (ಕೆ), ಬೀರನಹಳ್ಳಿ, ನೀಲಹಳ್ಳಿ, ಕೊಂಕನಳ್ಳಿ, ಮಳಖೇಡ, ರುದ್ನೂರ ನಂತರ ಕುಕ್ಕುಂದಾ ಗ್ರಾಮದಲ್ಲಿ ಸಮಾರೋಪಗೊಳ್ಳಲಿದೆ. ಈ ಕಾರ್ಯಕ್ರಮಕ್ಕೆ ಸ್ಥಳೀಯ ಪೂಜ್ಯರು ಹಾಗೂ ಸೇಡಂ ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶರನ್ನು ಆಹ್ವಾನಿಸಲಾಗಿದೆ. ವಿವಿಧ ಕಾನೂನು ತಜ್ಞರು, ಪತ್ರಕರ್ತರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

ಜೆ.ಎನ್‌.ಆರ್‌ ನಡ್ಡಾ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಶರಣಗೌಡ ಪಾಟೀಲ ಮಾತನಾಡಿ, ಕಾಲೇಜಿನಲ್ಲಿ ಸಾರ್ವಜನಿಕರಿಗೆ ಕಾನೂನಿನ ಬಗ್ಗೆ ಸಲಹೆ ನೀಡಲು ಒಬ್ಬ ಕಾನೂನು ತಜ್ಞರನ್ನು ನೇಮಕ ಮಾಡಲಾಗಿದೆ. ಪ್ರತಿ ಗುರುವಾರ ಮಧ್ಯಾಹ್ನ 2:30ರಿಂದ ಸಂಜೆ 5ಗಂಟೆ ವರೆಗೆ ಅವರು ಸಾರ್ವಜನಿಕರಿಗೆ ಸಲಹೆ ನೀಡಲಿದ್ದಾರೆ ಎಂದರು.

ಪ್ರಮುಖರಾದ ಪಿ.ಭೀಮರೆಡ್ಡಿ, ಸಿದ್ದಪ್ಪ ತಳ್ಳಳ್ಳಿ, ಮುರುಗೆಪ್ಪ ಕೋಳಕೂರ, ಬೈರುನಾಥ ಬಿರಾದಾರ, ವಕೀಲರಾದ ಜಗದೇವಪ್ಪ ಭೀಮನಳ್ಳಿ, ಶಾಂತಕುಮಾರ ಹಿರೇಮಠ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next