ವಿಜಯಪುರ: ಜಿಲ್ಲೆಯಲ್ಲಿ ಕರ್ತವ್ಯನಿರತ ಪೊಲೀಸರು, ವೈದ್ಯರು, ಬ್ಯಾಂಕ್ ಹಾಗೂ ವಾಟರ್ ಬೋರ್ಡ್ ಸಿಬ್ಬಂದಿಯನ್ನೂ ಬಿಡದೇ ಕೋವಿಡ್ ಸೋಂಕು ಹರಡಿದೆ. ಸೋಂಕಿತರ ಸಂಪರ್ಕದಲ್ಲಿದ್ದವರನ್ನು ಗುರುತಿಸಿ, ಗಂಟಲು ದ್ರವ ಮಾದರಿ ಪರೀಕ್ಷೆ ನಡೆಸಿದ್ದು, ಕ್ವಾರಂಟೈನ್ ನಿಗಾ ವಹಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಇದೇ ವೇಳೆ ಖಾಸಗಿ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ನಿರಾಕರಿಸುವ ದೂರುಗಳಿದ್ದು,ವೈದ್ಯರು ತಕ್ಷಣ ಎಚ್ಚರಗೊಳ್ಳದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ವೈ.
ಎಸ್. ಪಾಟೀಲ ಎಚ್ಚರಿಕೆ ನೀಡಿದ್ದಾರೆ. ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬುಧವಾರದ ವರೆಗೆ 620 ಜನರಲ್ಲಿ ಸೋಂಕು ದೃಢಪಟ್ಟಿದೆ. ಬಿ.ಡಿ.ಎ ಅಧ್ಯಕ್ಷ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ವಾಟರ್ ಬೋರ್ಡ್, ಹೆಸ್ಕಾಂಗಳ ತಲಾ ಒಬ್ಬರು ಸಿಬ್ಬಂದಿಗೆ ಕೋವಿಡ್ ಸೋಂಕು ತಗುಲಿದೆ. ಜಿಲ್ಲೆಯ ಇಬ್ಬರು ಸರ್ಕಾರಿ ವೈದ್ಯರು ಮತ್ತು ಖಾಸಗಿ ಆಸ್ಪತ್ರೆಯ7 ವೈದ್ಯರಿಗೂ ಸೋಂಕು ತಗುಲಿದೆ ಎಂದು ವಿವರಿಸಿದರು.
ಈ ಸೋಂಕಿತರಲ್ಲಿ ರೋಗದ ಯಾವುದೇ ರೀತಿಯ ಲಕ್ಷಣವಿಲ್ಲ. ಕಂಟೈನ್‌ಮೆಂಟ್ ವಲಯದಿಂದ ಸೋಂಕು ತಗುಲದೇ ಚಿಕಿತ್ಸೆ ವೇಳೆಗೆ ಸೋಂಕು ತಗುಲಿರಬಹುದು ಎಂದು ಅಂದಾಜಿಸಲಾಗಿದೆ. ಇವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಗುರುತಿಸುವ ಕಾರ್ಯ ನಡೆದಿದೆ. ವೈದ್ಯರು ಕೂಡಾ ನಿರ್ಲಕ್ಷ್ಯ ವಹಿಸದೇ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು. ಕಡ್ಡಾಯವಾಗಿ ಪಿಪಿಇ ಕಿಟ್, ಸ್ಯಾನಿಟೈಸರ್ ಮತ್ತು ಎನ್-95 ಮಾಸ್ಕ್ ಬಳಸಿ ರೋಗಿಗಳಿಗೆ ಚಿಕಿತ್ಸೆ ನೀಡುವಂತೆ ಜಿಲ್ಲಾ ಧಿಕಾರಿ ವೈ.ಎಸ್. ಪಾಟೀಲ ಸಲಹೆ ನೀಡಿದ್ದಾರೆ.
ಜಿಲ್ಲೆಯ ಕಂಟೈನ್‌ಮೆಂಟ್ ವಲಯದಲ್ಲಿ ಕರ್ತವ್ಯ ನಿರ್ವಹಣೆ ಹಾಗೂ ವಿವಿಧ ಆರೋಪಿಗಳನ್ನು ಬಂಧಿಸುವ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ 10 ಪೊಲೀಸರಿಗೆ ಕೋವಿಡ್ ಸೋಂಕು ತಗುಲಿದೆ. ಇವರ ಸಂಪರ್ಕದಲ್ಲಿದ್ದ ಸುಮಾರು 900 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಸರ್ಕಾರದ ನಿರ್ದೇಶನದಂತೆ ಸೋಂಕಿತರು ಪತ್ತೆಯಾದ ಸಂಸ್ಥೆ-ಕಚೇರಿಗಳನ್ನು 24 ಗಂಟೆಯೊಳಗೆ ಸ್ಯಾನಿಟೈಸೇಶನ್ ಮಾಡಿ, ಶುಚಿಗೊಳಿಸಲಾಗಿದೆ. ಆದರೆ ಸೋಂಕಿತರು ಪತ್ತೆಯಾಗಿರುವ ಇಲಾಖೆಗಳ ಯಾವುದೇ ಕಚೇರಿ ಬಂದ್‌ಗೆ ಅವಕಾಶ ಇರುವುದಿಲ್ಲ. ಸದರಿ ಕಚೇರಿಗಳ ಸಂಬಂಧಪಟ್ಟ ಅಧಿಕಾರಿಗಳು ಕೂಡಾ ಸರ್ಕಾರದ ನಿಯಮದಂತೆ ಮುಂಜಾಗ್ರತಾ ಕ್ರಮಗಳೊಂದಿಗೆ ಹೆಚ್ಚಿನ ಸಮಯ ಕಚೇರಿ ಬಂದ್ ಮಾಡದೇ ಎಂದಿನಂತೆ ಕಾರ್ಯ ನಿರ್ವಹಿಸಲು ಸೂಚಿಸಿದ್ದಾರೆ.
ಜಿಲ್ಲೆಯ ನೆಗಡಿ, ಕೆಮ್ಮು, ಜ್ವರ ಹಾಗೂ ಉಸಿರಾಟ ತೊಂದರೆಗೆ ಒಳಗಾಗಿ ಖಾಸಗಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಆದ್ಯತೆ ಮೇಲೆ ಚಿಕಿತ್ಸೆ ಒದಗಿಸಬೇಕು. ರೋಗಿಗಳನ್ನು ನಿರಾಕರಿಸಿದ ಯಾವುದೇದೂರುಗಳು ಬಂದಲ್ಲಿ ಅಂತಹ ಆಸ್ಪತ್ರೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.