Advertisement

ಪುಟ್ಟಸ್ವಾಮಿ ವಿರುದ್ದ ಕಾನೂನು ಕ್ರಮ: ಸಿಎಂ

06:55 AM Oct 12, 2017 | Team Udayavani |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಭೂಪಸಂದ್ರ ಗ್ರಾಮದಲ್ಲಿ ಡಿ ನೋಟಿಫಿಕೇಶ್‌ನ್‌ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದ್ದು, ಬಿಜೆಪಿ ವಿಧಾನ ಪರಿಷತ್‌ ಸದಸ್ಯ ಬಿ.ಜೆ. ಪುಟ್ಟಸ್ವಾಮಿ ಆಧಾರ ರಹಿತ ಆರೋಪ ಮಾಡಿದ್ದಾರೆ. 

Advertisement

ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಬಿಜೆಪಿಯವರು ಈ ರೀತಿಯ ಸುಳ್ಳು ಆರೋಪ ಮಾಡುತ್ತಿದ್ದು,ತಮ್ಮ ಅಧಿಕಾರವಧಿಯಲ್ಲಿ ಯಾವುದೇ ಡಿ ನೊಟಿಫಿಕೇಶನ್‌ ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಸುಳ್ಳು ಆರೋಪ ಮಾಡಿರುವ ವಿಧಾನ ಪರಿಷತ್‌ ಸದಸ್ಯ ಬಿ.ಜೆ ಪುಟ್ಟಸ್ವಾಮಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಕುರಿತು ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಪುಟ್ಟಸ್ವಾಮಿ ಮಾಡಿರುವ ಆರೋಪವನ್ನು ನಿರಾಕರಿಸಲು ಪತ್ರಿಕಾಗೋಷ್ಠಿ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ 1978 ರಲ್ಲಿಯೇ ಅಂದಿನ ಸರ್ಕಾರ ಭೂಪಸಂದ್ರ ಗ್ರಾಮದಲ್ಲಿ 137 ಎಕರೆ 31 ಗುಂಟೆ ಜಮೀನು ಭೂ ಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದು,  108.17 ಎಕರೆ ಜಮೀನಿಗೆ ಅಂತಿಮ ಅಧಿಸೂಚನೆ ಹೊರಡಿಸಲಾಗುತ್ತದೆ. ಅದರಲ್ಲಿ 69 ಎಕರೆ ಪ್ರದೇಶವನ್ನು ಬಿಡಿಎ ಪಡೆದುಕೊಳ್ಳುತ್ತದೆ. ಅದರಲ್ಲಿ 13.34 ಎಕರೆ ಜಾಗದಲ್ಲಿ ಲೇಔಟ್‌ ನಿರ್ಮಾಣ ಮಾಡಿ 32 ಜನರಿಗೆ ನಿವೇಶನ ಹಂಚಿಕೆ ಮಾಡಲಾಗಿತ್ತು.

1992 ರಲ್ಲಿ ಅಂದಿನ ಸರ್ಕಾರ ಡಿನೋಟಿಫಿಕೇಶನ್‌ ಮಾಡಿದ್ದು, ಅದರ ವಿರುದ್ಧ ಸೈಟ್‌ ಪಡೆದವರು ಹೈಕೋರ್ಟ್‌ನಲ್ಲಿ ದೂರು ದಾಖಲಿಸುತ್ತಾರೆ. ಹೈಕೋರ್ಟ್‌ ಸರ್ಕಾರದ ಕ್ರಮವನ್ನು ರದ್ದು ಪಡಿಸಿ, ನಿವೇಶನ ಪಡೆದವರಿಗೆ ನೀಡುವಂತೆ ಆದೇಶಿಸುತ್ತದೆ. ಅದನ್ನು ಪ್ರಶ್ನಿಸಿ ಭೂ ಮಾಲಿಕರು ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಸುತ್ತಾರೆ. ಹೈ ಕೋರ್ಟ್‌ ವಿಭಾಗೀಯ ಪೀಠ ಏಕ ಸದಸ್ಯ ಪೀಠದ ಆದೇಶವನ್ನು ಎತ್ತಿ ಹಿಡಿದು ಭೂ ಮಾಲಿಕರ ಅರ್ಜಿಯನ್ನು ವಜಾಗೊಳಿಸಿತ್ತು ಹೈಕೋರ್ಟ್‌ ಆದೇಶದ ವಿರುದ್ಧ ಸೈಯದ್‌ ಬಾಸಿನ್‌ ಎನ್ನುವವರು 2009 ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುತ್ತಾರೆ. ಸುಪ್ರೀಂ ಕೋರ್ಟ್‌ ಕೂಟ ಹೈ ಕೋರ್ಟ್‌ ಆದೇಶವನ್ನು ಎತ್ತಿ ಹಿಡಿದು ಅವರ ಆದೇಶವನ್ನು ವಜಾಗೊಳಿಸಿತ್ತು ಎಂದು ಹೇಳಿದರು.

Advertisement

ಆ ನಂತರ 2016 ಫೆಬ್ರವರಿಯಲ್ಲಿ ಭೂ ಮಾಲಿಕರು ಹೈಕೋರ್ಟ್‌ನಲ್ಲಿ ಮತ್ತೂಂದು ಅರ್ಜಿ ಸಲ್ಲಿಸಿ ಅಂತಿಮ ಅಧಿಸೂಚನೆ ಲ್ಯಾಪ್ಸ್‌ ಆಗಿದೆ ಎಂದು ಅರ್ಜಿ ಸಲ್ಲಿಸುತ್ತಾರೆ. ಬಿಡಿಎ ಕಾಯ್ದೆ ಪ್ರಕಾರ ವಶಪಡಿಸಿಕೊಂಡ ಜಮೀನು ಸಂಪೂರ್ಣ ಬಳಸಿಕೊಳ್ಳಲು ಬಿಡಿಎ ವಿಫ‌ಲವಾಗಿದೆ ಎಂದು ಹೀಗಾಗಿ ಈ ಯೋಜನೆ ಲ್ಯಾಪ್ಸ್‌ ಆಗಿದೆ ಎಂದು ಹೈ ಕೋರ್ಟ್‌ ಆದೇಶ ನೀಡಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಈ ನಡುವೆ ಶಾಸಕ ವಸಂತ ಬಂಗೇರಾ ಕಂದಾಯ ಜಮೀನಿನಲ್ಲಿರುವ ನಾಲ್ಕು ನಿವೇಶನಗಳನ್ನು ಸಕ್ರಮಗೊಳಿಸಿ ಕೊಡುವಂತೆ ಎರಡು ಪತ್ರ ಬರೆದಿದ್ದರು. ಎರಡೂ ಪತ್ರಗಳನ್ನು ಪರಿಶೀಲಿಸಿ ಎಂದು ಬರೆದಿದ್ದೇನೆ. ಅಷ್ಟು ಬರೆದ ಮಾತ್ರಕ್ಕೆ ಡಿ ನೊಟಿಫಿಕೇಶನ್‌ ಆಗುವುದಿಲ್ಲ. ಅದಕ್ಕೆ ಕಾನೂನಿನಲ್ಲಿ ನಿಯಮಗಳಿವೆ. ಬಿಜೆಪಿಯವರು ಸಿಲ್ಲಿ ರಾಜಕಾರಣಕ್ಕಾಗಿ ಈ ರೀತಿಯ ಆರೋಪ ಮಾಡುತ್ತಿದ್ದಾರೆ. ಸುಳ್ಳು ಹೇಳುವುದಕ್ಕೂ ಒಂದು ಮಿತಿ ಇರಬೇಕು. ಜನರಿಗೆ ತಪ್ಪು ಮಾಹಿತಿ ನೀಡಿ ರಾಜಕೀಯ ಲಾಭ ಪಡೆಯಲು ಬಿಜೆಪಿಯವರು ಪ್ರಯತ್ನ ನಡೆಸುತ್ತಿದ್ದಾರೆ. ಅವರಿಗೆ ಫ‌ಲ ದೊರೆಯುವುದಿಲ್ಲ ಎಂದು ಸಿಎಂ ಹೇಳಿದರು.

ಸರ್ಕಾರಕ್ಕೆ ಡಿನೊಟಿಫಿಕೇಶನ್‌ ಮಾಡುವ ಅಧಿಕಾರ ಇದ್ದರೂ ನಾನು ಇದುವರೆಗೂ ಯಾವುದೇ ಡಿ ನೊಟಿಫಿಕೇಶನ್‌ ಮಾಡಿಲ್ಲ. ಬಿಜೆಪಿಯವರು ನನ್ನ ಇಮೇಜ್‌ ಹಾಳು ಮಾಡಲು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಆಕ್ರೋಶ ವ್ಯಕ್ತಪಡಿಸಿದರು.

ಶಾಂತಾ ಇಂಡಸ್ಟ್ರೀಗೂ ನನ್ನ ಮಗನಿಗೂ ಸಂಬಂಧ ಇಲ್ಲ
ಶಾಂತಾ ಇಂಡಸ್ಟ್ರೀಯಲ್ಲಿ ನನ್ನ ಮಗ ಡಾ.ಯತೀಂದ್ರ ಪಾಲುದಾರಿಕೆ ಹೊಂದಿದ್ದಾರೆ ಎಂದು ಪುಟ್ಟಸ್ವಾಮಿ ಸುಳ್ಳು ಆರೋಪ ಮಾಡಿದ್ದರು. ನನ್ನ ಮಗ ಮ್ಯಾಟ್ರಿಕ್ಸ್‌ ಸಂಸ್ಥೆಯಲ್ಲಿ ಸದಸ್ಯನಾಗಿದ್ದ ಆದರೆ, ಅವನ ವಿರುದ್ದ ಆರೋಪ ಕೇಳಿ ಬಂದ ತಕ್ಷಣ ಅದರಿಂದ ಹೊರ ಬರುವಂತೆ ಸೂಚಿಸಿದೆ. ಅವನು ಡಾಕ್ಟರ ಆಗಿರುವುದರಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ರಯೋಗಾಲಯ ತೆರೆಯಲು ಸ್ಥಳ ಕೇಳಿದ್ದ ಅದರಲ್ಲಿ ತಪ್ಪೇನಿದೆ. ಟೆಂಡರ್‌ನಲ್ಲಿ ಅವ್ಯವಹಾರ ನಡೆದಿದ್ದರೆ, ಬಿಜೆಪಿಯವರು ಕೋರ್ಟ್‌ಗೆ ಹೋಗಿ ಪ್ರಶ್ನಿಸಲಿ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next