Advertisement

ಪಾರಂಪರಿಕ ಅರಣ್ಯಹಕ್ಕು ಅರ್ಜಿ ಇತ್ಯರ್ಥಕ್ಕೆ ಗಡುವು

12:21 PM Apr 27, 2017 | Team Udayavani |

ಬೆಂಗಳೂರು: ಪಾರಂಪರಿಕ ಅರಣ್ಯ ಹಕ್ಕು ಕಾಯ್ದೆಯಡಿ ಭೂಮಿ ಕೋರಿ ರಾಜ್ಯಾದ್ಯಂತ ಸಲ್ಲಿಸಿರುವ ಅರ್ಜಿಗಳನ್ನು
ಇರ್ತ್ಯಪಡಿಸಲು ನಿಯಮಾವಳಿ ಸಡಿಲಗೊಳಿಸಿ ಆದೇಶ ಹೊರಡಿಸಿದ್ದರೂ ಅಧಿಕಾರಿಗಳು ಅದನ್ನು ಜಾರಿಗೊಳಿಸದೇ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಇಂತಹ ಅರ್ಜಿಗಳನ್ನು ಇತ್ಯರ್ಥಪಡಿಸಲು ಮೂರು ತಿಂಗಳ ಗಡುವು ನೀಡಿದ್ದಾರೆ.

Advertisement

ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾರಂಪರಿಕ ಅರಣ್ಯ ಹಕ್ಕು ಕಾಯ್ದೆಯಡಿ ಭೂಮಿ ಕೋರಿ ರಾಜ್ಯಾದ್ಯಂತ ಸಲ್ಲಿಸಿರುವ ಅರ್ಜಿಗಳನ್ನು ಇತ್ಯರ್ಥಪಡಿಸಲು ನಿಯಮಾವಳಿಗಳನ್ನು ಸಡಿಲಗೊಳಿಸಿ ಒಂದೂವರೆ ತಿಂಗಳ ಹಿಂದೆಯೇ ಆದೇಶ ಹೊರಡಿಸಲಾಗಿದೆ. ಆದರೂ ಅಧಿಕಾರಿಗಳು ಅದರಂತೆ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಅಂತಹ ಅರ್ಜಿಗಳನ್ನು 3 ತಿಂಗಳಲ್ಲಿ ಇತ್ಯರ್ಥಗೊಳಿಸದಿದ್ದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಭೂಮಿ ಕೋರಿ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಅರ್ಜಿದಾರರು ಆ ಊರಿನಲ್ಲಿ 77 ವರ್ಷ ಇರಬೇಕು ಎಂಬುದನ್ನು ಸಾಬೀತುಪಡಿಸಲು ಹಿಂದೆ ಕೆಲವು ಕಠಿಣ ನಿಯಮಗಳಿದ್ದವು. ಆದರೆ, ಸಂಪುಟ ಉಪಸಮಿತಿ 2016ರ ಡಿಸೆಂಬರ್‌ನಲ್ಲಿ ಸಭೆ ಸೇರಿ ನಿಯಮಾವಳಿ ಸಡಿಲಗೊಳಿಸಲು ತೀರ್ಮಾನಿಸಿತ್ತು. ಅದರಂತೆ ನಿಯಮಾವಳಿ ಸಡಿಲಗೊಳಿಸಿ ಒಂದೂವರೆ ತಿಂಗಳ ಹಿಂದೆ ಆದೇಶ ಹೊರಡಿಸಲಾಗಿದೆ ಎಂದರು. ಹೊಸ ನಿಯಮಾವಳಿಯಂತೆ ಅರ್ಜಿದಾರರು 2005ರ ನಂತರ ತಾವು ಅರ್ಜಿ ಸಲ್ಲಿಸಿದ ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದಾರೆ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು. 75 ವರ್ಷ ಅಲ್ಲಿ ಕೃಷಿ ಮಾಡುತ್ತಿದ್ದರು ಎಂಬುದಕ್ಕೆ ಹಿರಿಯರ ಹೇಳಿಕೆ ಪಡೆದುಕೊಂಡರೆ ಸಾಕು. ಅದೇ ರೀತಿ ಅವರು ಅಲ್ಲಿನ ನಿವಾಸಿಗಳು ಎಂಬುದಕ್ಕೆ ಮತದಾರರ ಗುರುತಿನ ಚೀಟಿ, ಆಧಾರ್‌ ಕಾರ್ಡ್‌, ಪಡಿತರ ಚೀಟಿ ಪೈಕಿ ಯಾವುದಾದರೂ ಎರಡು ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಈ ಮಾಹಿತಿಗಳನ್ನು ಒದಗಿಸಿದರೆ ಪಾರಂಪರಿಕ ಅರಣ್ಯ ಹಕ್ಕು ಕಾಯ್ದೆಯಡಿ ಭೂಮಿ ಕೋರಿ ಸಲ್ಲಿಸಿದ ಅರ್ಜಿಗಳನ್ನು ಇತ್ಯರ್ಥಪಡಿಸಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಆದರೂ ಅಧಿಕಾರಿಗಳು ಹಳೆಯ ಕಾಯ್ದೆಯನ್ನೇ ಮುಂದಿಟ್ಟುಕೊಂಡು ಕಾಲಹರಣ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.

ಸರ್ಕಾರ ಸ್ಪಷ್ಟ ಆದೇಶ ಹೊರಡಿಸಿದ್ದರೂ ಕಾರವಾರ ಜಿಲ್ಲಾಧಿಕಾರಿಗಳು ಮತ್ತೆ ಸ್ಪಷ್ಟನೆ ಕೋರಿದ್ದರು. ಆದರೆ, ಸರ್ಕಾರ ಹೊರಡಿಸಿದ ಆದೇಶದಂತೆ ಕೆಲಸ ನಿರ್ವಹಿಸಿ ಎಂದು ಅವರಿಗೆ ನಿರ್ದೇಶನ ನೀಡಿ ನೋಟಿಸ್‌ ಜಾರಿ ಮಾಡಲಾಗಿದೆ. ಅದೇ ರೀತಿ ಗ್ರಾಪಂ ಅಧ್ಯಕ್ಷರು, ಕಾರ್ಯದರ್ಶಿಯವರು ಗ್ರಾಮಗಳಲ್ಲಿ ಅರ್ಜಿ ತೆಗೆದುಕೊಂಡು ಆ ಬಗ್ಗೆ ಮಹಜರು ಮಾಡಿ
ಅದರ ಪ್ರಕಾರ ಕ್ರಮ ಜರುಗಿಸಬೇಕು ಎಂದೂ ನಿರ್ದೇಶನ ನೀಡಲಾಗಿದೆ. ಅದರಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ತಾಕೀತು ಮಾಡಿದರು.

ಕೊಡಗು ಜಿಲ್ಲೆ ದಿಡ್ಡಹಳ್ಳಿಯ ಆದಿವಾಸಿಗಳಿಗೆ ವಸತಿ ಸೌಲಭ್ಯ ಕಲ್ಪಿಸುವ ಪ್ರಶ್ನೆಗೆ ಉತ್ತರಿಸಿದ ಅವರು, ಅವರಿಗಾಗಿ ಈಗಾಗಲೇ ನಾಲ್ಕು ಕಡೆ ಬಡಾವಣೆಗಳನ್ನು ನಿರ್ಮಿಸಲಾಗುತ್ತಿದೆ. ಒಂದು ಮನೆಗೆ 4 ಲಕ್ಷ ರೂ.ನಂತೆ 600 ಮನೆಗಳನ್ನು ನಿರ್ಮಿಸಿಕೊಡಲು ತೀರ್ಮಾನಿಸಲಾಗಿದೆ. ಹೀಗಿರುವಾಗ ನಾವು ಈಗಿರುವ ಜಾಗದಲ್ಲೇ ಮನೆ ಬೇಕು ಎಂದು ಪಟ್ಟು ಹಿಡಿದರೆ ಹೇಗೆ? ಅದು ಅರಣ್ಯ ಇಲಾಖೆ ಜಾಗವಾಗಿರುವುದರಿಂದ ಸದ್ಯಕ್ಕೆ ಅಲ್ಲಿ ಮನೆ ನಿರ್ಮಿಸಿಕೊಡಲು ಅಸಾಧ್ಯ ಎಂದು ಸ್ಪಷ್ಟಪಡಿಸಿದರು.

Advertisement

ಬಗರ್‌ಹುಕುಂ ಅರ್ಜಿ ಹಾಕಲು ಬಂದ ರೈತನಿಂದ ಆತ್ಮಹತ್ಯೆ ಯತ್ನ
ಕೋಲಾರ:
ಬಗರ್‌ಹುಕುಂ ಸಾಗುವಳಿಯಡಿ ಭೂ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಲು ಬಂದಿದ್ದ ರೈತನೊಬ್ಬ ಡಿಸಿ ಕಚೇರಿ ಸಭಾಂಗಣದಲ್ಲೇ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. ತಾಲೂಕಿನ ವೀರಾಪುರ ಗ್ರಾಮದ ಎಂ.ಶ್ರೀರಾಮಪ್ಪವಿಷ ಸೇವಿಸಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶ್ರೀರಾಮಪ್ಪ ದರಖಾಸ್ತು ಮೂಲಕ 3 ಎಕರೆ ಜಮೀನು ಕೋರಿ ಅರ್ಜಿ ಹಾಕಿದ್ದರೆನ್ನಲಾಗಿದ್ದು, ಬುಧವಾರ ಮಧ್ಯಾಹ್ನ ಜಿಲ್ಲಾಧಿಕಾರಿಗಳಿಗೆ ಈ ಸಂಬಂಧ ಮನವಿ ಸಲ್ಲಿಸಿ ಕಚೇರಿಯಿಂದ ಹೊರ ಬಂದ ನಂತರ ಕ್ರಿಮಿನಾಶಕ ಸೇವಿಸಿದ್ದಾರೆ. ಇದನ್ನು ಗಮನಿಸಿದ ಸಿಬ್ಬಂದಿ ಕೂಡಲೇ ಭೂದಾಖಲೆಗಳ ಉಪ ನಿರ್ದೇಶಕರ ವಾಹನದಲ್ಲಿ ಜಿಲ್ಲಾಸ್ಪತ್ರೆಗೆ ಸಾಗಿಸಿ ತಂದು ದಾಖಲಿಸಿದ್ದಾರೆ.

ಕ್ರಮದ ಭರವಸೆ: ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ತಮಗೆ ಜಮೀನು ಮಂಜೂರು ಮಾಡಬೇಕೆಂದು ಮನವಿ ಮಾಡಲು ಬಂದಿದ್ದರು. ಈ ಸಂದರ್ಭ ಸಮಸ್ಯೆಯನ್ನು ಪತ್ರದ ಮುಖೇನ ತಿಳಿಸಿದರೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ರೈತನ ಸಮಸ್ಯೆ ಪರಿಹಾರಕ್ಕೆ ನಿಯಮಾನುಸಾರ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next