Advertisement
ಬೆಳ್ಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನೆಟ್ಟಣಿಗೆ ಸಮೀಪದ ಕೈಪಂಗಳ ರಾಜಗೋಪಾಲ ಭಟ್ ಜಮೀನಿಗೆ ನುಗ್ಗಿ ಬೆಳೆ ಹಾಳು ಮಾಡುವ ಕಾಡುಪ್ರಾಣಿಗಳಿಂದ ರಕ್ಷಣೆ ಪಡೆಯಲು ಎಲ್‌ಇಡಿ ಬಲುºಗಳ ಉಪಕರಣವನ್ನು ಆವಿಷ್ಕರಿಸಿ ಕೃಷಿ ಭೂಮಿಯ ಗಡಿಯುದ್ದಕ್ಕೂ ಅಳವಡಿಸಿ, ಕಾಡುಪ್ರಾಣಿಗಳ ಉಪಟಳ ತಡೆಯಲು ಯಶಸ್ವಿಯಾಗಿದ್ದಾರೆ. ಇವರ ಈ ಆವಿಷ್ಕಾರ ಕೇರಳ ರಾಜ್ಯ ಅರಣ್ಯ ಇಲಾಖೆಯ ಪ್ರಶಂಸೆಗೂ ಪಾತ್ರವಾಗಿದೆ. ಸ್ವತಃ ಇಲಾಖೆಯೇ ಇವರಿಂದ ಈ ಸಾಧನಗಳನ್ನು ಖರೀದಿಸಿ ಕಾಸರಗೋಡು ಜಿಲ್ಲೆಯ ವಿವಿಧ ಭಾಗಗಳಲ್ಲಿ ಅರಣ್ಯದಂಚಿನ ಪ್ರದೇಶಗಳಲ್ಲಿ ಅಳವಡಿಸಿದ್ದು, ಯಶಸ್ಸು ಕಂಡಿದೆ. ಇನ್ನಷ್ಟು ಉಪಕರಣಗಳನ್ನು ಒದಗಿಸಿ ಕೊಡಲು ಬೇಡಿಕೆ ಸಲ್ಲಿಸಿದೆ.
ಅರಣ್ಯ ಪ್ರದೇಶಗಳು ಕಡಿಮೆಯಾದಾಗ ಸಹಜವಾಗಿ ಸಿಗುವ ಆಹಾರ, ನೀರು ಸಿಗದೆ ಕಾಡುಪ್ರಾಣಿಗಳು ಕೃಷಿಭೂಮಿಯತ್ತ ಮುಖ ಮಾಡುತ್ತವೆ. ಹೀಗೆ ಸಂಚರಿಸುವ ಹಂದಿ, ಮಂಗ, ಕಾಡಾನೆ ಮೊದಲಾದವುಗಳು ಪ್ರಖರ ಪ್ರಭೆಯ ಬೆಳಕಿಗೆ ಹೆದರಿ ಹಿಮ್ಮೆಟ್ಟುತ್ತವೆ. ಈ ಹಿನ್ನೆಲೆಯಲ್ಲಿ ಸುಮಾರು ಎರಡೂವರೆ ವರ್ಷ ಕಾಲ ವಿವಿಧ ಕ್ರಿಯಾಶೀಲ ತಂತ್ರಜ್ಞಾನಗಳ ಅಳವಡಿಕೆಗೆ ಪ್ರಯತ್ನಿಸಿದ ರಾಜಗೋಪಾಲ ಭಟ್ ಕೊನೆಗೆ ಈ ಹೊಸ ಮಾದರಿಯ ಉಪಕರಣವನ್ನು ರೂಪಿಸಿದ್ದಾರೆ.
Related Articles
Advertisement
50 ಮೀಟರ್‌ಗಳಷ್ಟು ದೂರಕ್ಕೆ ಪ್ರಭೆ ನೀಡುವ ಈ ಲೈಟ್‌ಗಳನ್ನು ರಾಜಗೋಪಾಲ್ ತಮ್ಮ ಅಡಿಕೆ, ತೆಂಗು, ಬಾಳೆ ಸಹಿತ ಸಂಪೂರ್ಣ ಕೃಷಿಭೂಮಿಯ ಸುತ್ತ ಕಳೆದ ಒಂದೂವರೆ ವರ್ಷದಿಂದ ಅಳವಡಿಸಿ ಯಶಸ್ವಿಯಾಗಿದ್ದಾರೆ. ಆ ಬಳಿಕ ಯಾವುದೇ ಕಾಡು ಪ್ರಾಣಿ ತಮ್ಮ ಕೃಷಿ ಭೂಮಿಯತ್ತ ಕಣ್ಣೆತ್ತಿಯೂ ನೋಡಿಲ್ಲ ಎಂದು ಹೆಮ್ಮೆಯಿಂದ ಹೇಳುತ್ತಾರೆ. ರಾಜಗೋಪಾಲ ಭಟ್ ಈ ಲೈಟುಗಳಿಗೆ ತಮ್ಮ ಮನೆಯಿಂದಲೇ ವಿದ್ಯುತ್ ಸಂಪರ್ಕ ನೀಡಿದ್ದಾರೆ. ಬ್ಯಾಟರಿ ಮತ್ತು ಸೋಲಾರ್ ಮೂಲಕವೂ ಕಾರ್ಯನಿರ್ವಹಿಸುವಂತೆ ಮಾಡಿದ್ದಾರೆ.
ಅರಣ್ಯ ಇಲಾಖೆಯಿಂದ ಮೆಚ್ಚುಗೆ, ಬೇಡಿಕೆರಾಜಗೋಪಾಲ ಭಟ್ ಅವರ ಈ ಆವಿಷ್ಕಾರ ಕೇರಳ ರಾಜ್ಯ ಅರಣ್ಯ ಇಲಾಖೆಯ ಗಮನ ಸೆಳೆದಿದೆ. ಕಾಸರಗೋಡು ಜಿಲ್ಲಾ ಅರಣ್ಯಾಧಿಕಾರಿ (ಡಿ.ಎಫ್.ಒ.) ರಾಜೀವನ್ ಅವರು ಮಾಹಿತಿ ಪಡೆದು, ಸ್ವತಃ ಕೈಪಂಗಳಕ್ಕೆ ಆಗಮಿಸಿ ವೀಕ್ಷಿಸಿ
ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಲಾಖೆಯು ಅತ್ಯಂತ ಹೆಚ್ಚು ಸಂಕಷ್ಟ ಅನುಭವಿಸುತ್ತಿರುವ ಕಾಡಾನೆ ದಾಳಿ ನಿಯಂತ್ರಣಕ್ಕಾಗಿ ಈ ಆವಿಷ್ಕಾರವನ್ನು ಬಳಸಿಕೊಳ್ಳುವುದಕ್ಕೆ ಮುಂದಾಗಿದ್ದಾರೆ. ಕೆಲವು ತಿಂಗಳುಗಳ ಹಿಂದೆ ರಾಜಗೋಪಾಲ ಭಟ್ ಅವರಿಂದ ಕಾಡಾನೆ ಹಾವಳಿ ನಿಯಂತ್ರಣಕ್ಕಾಗಿ ಎಲ್‌ಇಡಿ ಬೆಳಕಿನ ಈ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಿ ಅಳವಡಿಸುವಲ್ಲಿ ಸಹಕರಿಸುವಂತೆ ಮನವಿ ಮಾಡಿದ್ದಾರೆ. ಎಲೆಕ್ಟ್ರಾನಿಕ್ಸ್ ಪದವೀಧರ
ರಾಜಗೋಪಾಲ ಕೈಪಂಗಳ ಎಲೆಕ್ಟ್ರಾನಿಕ್ಸ್ ಪದವೀಧರ ರಾಗಿದ್ದು, ಹಲವು ವರ್ಷಗಳ ಕಾಲ ದೇಶದ ವಿವಿಧೆಡೆ ಮತ್ತು ವಿದೇಶದಲ್ಲಿಯೂ ಕೆಲಸ ಮಾಡಿದ್ದಾರೆ. ಆದರೆ ಕೃಷಿಯ ಸೆಳೆತದಿಂದ ಉದ್ಯೋಗಕ್ಕೆ ತಿಲಾಂಜಲಿ ನೀಡಿ ಊರಿಗೆ ಮರಳಿ ಪರಂಪರಾಗತವಾಗಿ ಬಂದಿರುವ ಕೃಷಿ ಕಾಯಕ ಮುಂದುವರಿಸಿದ್ದಾರೆ. ಅಡಿಕೆ, ತೆಂಗು ಕೃಷಿಯ ಜತೆಗೆ ಬಾಳೆ, ವಿವಿಧ
ಹಣ್ಣುಗಳು, ಗಿಡಮೂಲಿಕೆಗಳು, ತರಕಾರಿ ಕೃಷಿಗೂ ವಿಸ್ತರಿಸಿ ದ್ದಾರೆ. ಆದರೆ ನಿರಂತರ ಹಾನಿ ಮಾಡುವ ಮಂಗಗಳು ಮತ್ತು
ಕಾಡುಹಂದಿಗಳ ಉಪಟಳ ತಾಳಲಾರದೆ 16 ವಿಧದ ತಂತ್ರಜ್ಞಾನ ಗಳನ್ನು ಪ್ರಯತ್ನಿಸಿ ಕೊನೆಗೆ ಈ ಎಲ್‌ಇಡಿ ಬೆಳಕಿನ ಆವಿಷ್ಕಾರದ ಮೂಲಕ ಯಶಸ್ಸು ಸಾಧಿಸಿದ್ದಾರೆ. ಇದಕ್ಕೆ ಇತರೆಡೆಗಳಿಂದಲೂ ಬೇಡಿಕೆ ಒದಗುತ್ತಿದ್ದು, ಸಾಧಕ ಕೃಷಿಕರೊಬ್ಬರ ಆವಿಷ್ಕಾರಕ್ಕೆ ಸಂದ ಮನ್ನಣೆ ಎನ್ನಲು ಅಡ್ಡಿಯಿಲ್ಲ. ಲಕ್ಷಾಂತರ ರೂ. ವ್ಯಯಿಸಿ ನಡೆಸುವ ಕೃಷಿಗೆ ನಿರೀಕ್ಷಿತ ಲಾಭ ಬರುವ ಹಂತದಲ್ಲಿ ಕಾಡುಪ್ರಾಣಿಗಳ ಉಪಟಳ ತೀವ್ರ ನೋವು ಉಂಟು ಮಾಡುತ್ತಿತ್ತು. ನನಗಿರುವ ತಾಂತ್ರಿಕ ಜ್ಞಾನವನ್ನು ಅನ್ವಯಿಸಿ ಈ ತಂತ್ರವನ್ನು ಆವಿಷ್ಕರಿಸಿ ಯಶಸ್ವಿಯಾಗಿದ್ದೇನೆ, ಖುಷಿನೀಡಿದೆ. ಅರಣ್ಯ ಇಲಾಖೆ ನನ್ನ ಆವಿಷ್ಕಾರವನ್ನು ಬೆಂಬಲಿಸಿ ಬೇಡಿಕೆ ನೀಡಿರುವುದು ಇನ್ನಷ್ಟು ಉತ್ಸಾಹಕ್ಕೆ ಕಾರಣವಾಗಿದೆ. ಸಾಮಾನ್ಯ ತೋಟಗಳಿಗೆ ಕೇವಲ 2 ಸಾವಿರ ರೂ. ವೆಚ್ಚದಲ್ಲಿ ಮತ್ತು ಕಾಡಾನೆಗಳ ನಿಯಂತ್ರಣದಂತಹ ಉನ್ನತ ಮಟ್ಟಕ್ಕೆ ಸುಮಾರು 6 ಸಾವಿರ ರೂ. ವೆಚ್ಚದಲ್ಲಿ ಇದನ್ನು ಅಳವಡಿಸಬಹುದಾಗಿದೆ.
– ರಾಜಗೋಪಾಲ ಭಟ್ ಕೈಪಂಗಳ – ರಾಮಚಂದ್ರ ಬಲ್ಲಾಳ್ ನಾಟೆಕಲ್ಲು