Advertisement

ಡಿಕೆಶಿಗೆ ಕೆಪಿಸಿಸಿ ಸಾರಥ್ಯ ನೀಡಲು ಹೈಕಮಾಂಡ್‌ ಒಲವು.

03:45 AM Mar 24, 2017 | |

ಬೆಂಗಳೂರು: ರಾಜ್ಯದಲ್ಲಿ  ಕಾಂಗ್ರೆಸ್‌ ಪಕ್ಷವನ್ನ ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ  ಕೆಪಿಸಿಸಿ ನಾಯಕತ್ವ ಬದಲಾವಣೆಗೆ ಹೈಕಮಾಂಡ್‌ ಮುಂದಾಗಿದ್ದು ರಾಜಕೀಯ ತಂತ್ರಗಾರಿಕೆಯಲ್ಲಿ ಚತುರರಾಗಿರುವ ಪ್ರಭಾವಶಾಲಿ ಮುಖಂಡ ಸಚಿವ ಡಿ.ಕೆ ಶಿವಕುಮಾರ್‌ ಅವರಿಗೆ ಪಕ್ಷದ ಸಾರಥ್ಯ ವಹಿಸಲು ಒಲವು ವ್ಯಕ್ತಪಡಿಸಿದೆ.ಎಐಸಿಸಿಯ ಹಲವಾರು ಮುಖಂಡರು ಡಿಕೆಶಿ ಪರ  ಬಲವಾದ ಬ್ಯಾಟಿಂಗ್‌ ಮಾಡುತ್ತಿದ್ದಾರೆಂದು ಹೇಳಲಾಗುತ್ತಿದೆ.

Advertisement

ಒಕ್ಕಲಿಗರ ಸಮುದಾಯದ ಪ್ರಮುಖ ಮುಖಂಡರಾಗಿದ್ದ ಹಿರಿಯ ರಾಜಕಾರಣಿ ಎಸ್‌.ಎಂ ಕೃಷ್ಣ  ಕಾಂಗ್ರೆಸ್‌ ತ್ಯಜಿಸಿ ಬಿಜೆಪಿ ಸೇರಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎರಡನೆ ದೊಡ್ಡ ಸಮುದಾಯವಾಗಿರುವ ಒಕ್ಕಲಿಗರ ಜನಾಂಗದ ಮತಗಳು ಕಾಂಗ್ರೆಸ್‌ ನಿಂದ ದೂರವಾಗುವುದನ್ನ ತಡೆಯಲು ಡಿಕೆಶಿ ಅವರನ್ನೇ ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡುವುದು ಉತ್ತಮವೆಂದು ಎಐಸಿಸಿಯ ಹಿರಿಯ ನಾಯಕರು ಹೈಕಮಾಂಡ್‌ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ.

ಮೇಲ್ನೋಟಕ್ಕೆ ಕೆಪಿಸಿಸಿ ಅದ್ಯಕ್ಷ ಸ್ಥಾನದ ಆಕಾಂಕ್ಷಿ ತಾವಲ್ಲ ಎಂದು ಹೇಳುತ್ತಿರುವ ಶಿವಕುಮಾರ್‌ ತೆರೆಮರೆಯಲ್ಲಿ ಪಕ್ಷದ ನಾಯಕತ್ವ ಕ್ಕಾಗಿ ಭಾರೀ ಕಸರತ್ತು ನಡೆಸಿದ್ದಾರೆ.ತಮಗೇ ಅಧ್ಯಕ್ಷಗಿರಿ ನೀಡಿದರೆ ಚುನಾವಣೆಯ  ಖರ್ಚು-ವೆಚ್ಚದ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳುವ ಸಂದೇಶವನ್ನೂ ಹೈಕಮಾಂಡ್‌ಗೆ ರವಾನಿಸಿದ್ದಾರೆ. ಬಿಜೆಪಿ ಅಬ್ಬರದ ನಡುವೆಯೂ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ವನ್ನ ಮತ್ತೆ ಅಧಿಕಾರಕ್ಕೆ ತರುವ ಸಂಪೂರ್ಣ ಭರವಸೆಯನ್ನ ಸಹ ನೀಡಿದ್ದಾರೆನ್ನಲಾಗಿದೆ.  ಅಷ್ಟೇ ಅಲ್ಲ ಹಲವು ಬಾರಿ ದೆಹಲಿಗೆ ತೆರಳಿ ಹೈಕಮಾಂಡ್‌ ಭೇಟಿ ಮಾಡಿ ರಹಸ್ಯ ವಾಗಿ ಮಾತುಕತೆ ನಡೆಸಿ ಕೆಪಿಸಿಸಿ ಅದ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಳ್ಳಲು ವೇದಿಕೆ ಸಿದ್ಧಪಡಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಕೆಪಿಸಿಸಿ ಅದ್ಯಕ್ಷ ಪದವಿ ಬೇಕಾದರೆ ‘ಒಬ್ಬ ವ್ಯಕ್ತಿ ಒಂದೇ ಹುದ್ದೆ ‘ ನಿಯಮದಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿತ್ತದೆ ಎಂದು ಹೈಕಮಾಂಡ್‌ ಮೊದಲು ಹಾಕಿದ್ದ ಷರತ್ತಿಗೆ  ಡಿಕೆಶಿ ಒಪ್ಪಿರಲಿಲ್ಲ. ಸಚಿವ  ಸ್ಥಾನದ ಜೊತೆಗೇ ಪಕ್ಷದ ಜವಾಬ್ದಾರಿ ನೀಡುವಂತೆಯೂ ಒತ್ತಡ ಹೇರಿದ್ದರು.ಸಚಿವ ಪದವಿ ಜೊತೆಗೆ ಅದ್ಯಕ್ಷ ಹುದ್ದೆೆ ಇದ್ದರೆ ಚುನಾವಣೆಗೆ ಫ‌ಂಡ್‌ ವ್ಯವಸ್ಥೆ ಮಾಡಲು ತಮಗೆ ಹೆಚ್ಚು ಅನುಕೂಲ ಆಗುತ್ತದೆ ಎಂದು ಶಿವಕುಮಾರ್‌ ಹೈಕಮಾಂಡ್‌ ಬಳಿ ಪ್ರತಿಪಾದಿಸಿದ್ದರು. ಆರಂಭದಲ್ಲಿ ಇದಕ್ಕೆ ಒಪ್ಪದ ಹೈಕಮಾಂಡ್‌ ತದನಂತರ ಸಹಮತ ವ್ಯಕ್ತಪಡಿಸಿದೆ ಎಂದು ಹೇಳಲಾಗುತ್ತಿದೆ.

ಎಲ್ಲವೂ ಅಂದುಕೊಂಡಂತೆ ನಡೆದರೆ ನಂಜನಗೂಡು ಹಾಗು ಗುಂಡ್ಲುಪೇಟೆ ಉಪಚುನಾಣೆ ಫ‌ಲಿತಾಂಶ ನಂತರ ಕೆಪಿಸಿಸಿಗೆ ಹೊಸ ಸಾರಥಿಯಾಗಿ ಸಚಿವ ಡಿ.ಕೆ ಶಿವಕುಮಾರ ನೇಮಕಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

Advertisement

ಡಿಕೆಶಿ ನೇಮಕಕ್ಕೆ ವಿರೋಧ; ಹೈಕಮಾಂಡ್‌ ಸಚಿವ ಡಿಕೆಶಿ ನೇಮಕಕ್ಕೆ ಒಲವು ಹೊಂದಿರುವುದರ ಬಗ್ಗೆ ಸುಳಿವು ದೊರೆತ  ರಾಜ್ಯ ಕಾಂಗ್ರೆಸ್‌ ನ ಕೆಲವು ಮುಖಂಡರು ಶಿವಕುಮಾರ್‌ ನೇಮಕಕ್ಕೆ ಅಪಸ್ವರವೆತ್ತಿ ದೆಹಲಿ ಕಾಂಗ್ರೆಸ್‌ ಮುಖಂಡರಿಗೆ ವಿರೋಧದ ಸಂದೇಶ ರವಾನಿಸಿದ್ದಾರೆ. ಹಾಲಿ ಕೆಪಿಸಿಸಿ ಅದ್ಯಕ್ಷ ಡಾ.ಜಿ ಪರಮೇಶ್ವರ್‌ ಹಾಗು ಮುಖ್ಯಮಂತ್ರಿ ಸಿದ್ಧರಾಮಯ್ಯ ಗುಂಪಿಗೆ ಸೇರಿದ ಕೆಲವು ಸಚಿವರು ಮತ್ತು ಶಾಸಕರುಗಳು ಸಚಿವ ಶಿವಕುಮಾರ್‌ ಅವರು ಬಿಜೆಪಿ ರಾಜ್ಯಾದ್ಯಕ್ಷರಾಗಿರುವ ಬಿ.ಎಸ್‌ ಯಡಿಯೂರಪ್ಪ ಜೊತೆ ಆತ್ಮೀಯ ಸಂಬಂಧ ಹೊಂದಿದ್ದಾರೆಂದು ಮಾಹಿತಿ ನೀಡಿ ಅಡ್ಡಗಾಲು ಹಾಕುತಿದ್ದಾರೆಂದು ಹೇಳಲಾಗುತ್ತಿದೆ.

ಯಡಿಯೂರಪ್ಪನವರು ಕಾಂಗ್ರೆಸ್‌ ಸರಕಾರ ಮತ್ತು ಸಿ.ಎಂ. ವಿರುದ್ಧ ಕಟು ಟೀಕೆ ಮಾಡಿದ ಹಲವಾರು ಸಂದರ್ಭಗಳಲ್ಲಿ   ಶಿವಕುಮಾರ್‌ ಹಿರಿಯ ಸಚಿವರಾಗಿ ಯಡಿಯೂರಪ್ಪನವರ ವಿರುದ್ಧ  ದ್ವನಿಯೆತ್ತುವುದಿಲ್ಲ, ಪಕ್ಷದ ಹಾಗು ಸರಕಾರದ ರಕ್ಷಣೆಗೆ ಬರುವುದಿಲ್ಲ, ಇಬ್ಬರೂ ಮುಖಂಡರ ನಡುವೆ ಉತ್ತಮ ಬಾಂಧವ್ಯ ಇರುವುದು ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳಲ್ಲಿ ಜನಜನಿತ ಸಂಗತಿಯಾಗಿದೆ.ಚುನಾವಣೆ ಸಂದರ್ಭದಲ್ಲಿ ಇಬ್ಬರೂ ಮುಖಂಡರು ಒಳ ಒಪ್ಪಂದ ಮಾಡಿಕೊಂಡರೆ ಕಾಂಗ್ರೆಸ್‌ ಪಕ್ಷಕ್ಕೆ ವಿಧಾನಸಭೆ ಚುನಾವಣೆ ಸಮಯದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಹೈಕಮಾಂಡ್‌ಗೆ ಕೆಪಿಸಿಸಿಯ ಮುಖಂಡರು ಸಂದೇಶ ಮುಟ್ಟಿಸಿದ್ದಾರೆ.

ಪ್ರದೇಶ ಕಾಂಗ್ರೆಸ್‌ ಸಮಿತಿಗೆ ಸಚಿವ ಡಿಕೆಶಿ ನೇಮಕ ಮಾಡಲು ಸಿದ್ಧವಾಗಿರುವ ಹೈಕಮಾಂಡ್‌ಗೆ ಈ ಸಂಗತಿ ಕುರಿತು  ಹೆಚ್ಚು ಹೆಚ್ಚು ಸಮಾಲೋಚನೆ ಮಾಡುವಂತಾಗಿದೆೆ.ಹಾಗಾಗಿ  ಹೊಸ ಅದ್ಯಕ್ಷರ ನೇಮಕಾತಿಯಲ್ಲಿ ವಿಳಂಬವಾಗುತ್ತಿದೆ.

ಮುಂದುವರಿದ ಪರಮ್‌ ಲಾಬಿ: ಈ ವಿದ್ಯಮಾನಗಳ ಬಗ್ಗೆ ಹೆಚ್ಚು ಅರಿವು ಹೊಂದಿದ ಹಾಲಿ ಕೆಪಿಸಿಸಿ ಅದ್ಯಕ್ಷ ಡಾ.ಜಿ ಪರಮೇಶ್ವರ್‌ ಅವರು ತಮ್ಮನ್ನೇ ಮತ್ತೂಂದು ಅವಧಿಗೆ ಅದ್ಯಕ್ಷರನ್ನಾಗಿ ಮುಂದುವರಿಸುವಂತೆ ಹೈಕಮಾಂಡ್‌ಗೆ ಒತ್ತಡ ಹೇರುತಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ, ಪಕ್ಷದ ಹಿರಿಯ ಮುಖಂಡರಾದ ಲೋಕಸಭೆ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಹಿರಿಯ ನಾಯಕರ ಬಳಿ ಮನವಿ ಮಾಡುತ್ತಿದ್ದಾರೆ. ಸಿಎಂ ಬಳಿ ಸಚಿವ ಡಿಕೆಶಿ ಅದ್ಯಕ್ಷ ಪದವಿ ತಪ್ಪಿಸಲು ತಮ್ಮನ್ನೇ ಬೆಂಬಲಿಸುವಂತೆ ಕೇಳಿಕೊಂಡಿದ್ದಾರೆಂದು ಹೇಳಲಾಗುತ್ತಿದೆ.

ಉಪ ಚುನಾವಣೆ ಫ‌ಲಿತಾಂಶದ ನಂತರ ಕೆಪಿಸಿಸಿಗೆ ಹೊಸ ನಾಯಕ ಯಾರಾಗುತ್ತಾರೆ ಎನ್ನುವ ಬಗ್ಗೆ ಹೈಕಮಾಂಡ್‌ ಸ್ಪಷ್ಟ ಉತ್ತರ ನೀಡಲಿದ್ದು ಅಲ್ಲಿಯ ತನಕ ಪಕ್ಷದ ನಾಯಕತ್ವಕ್ಕಾಗಿ ತೆರೆಮರೆಯ ಕಸರತ್ತು,ಒತ್ತಡಗಳು, ಮುಖಂಡರುಗಳ ಪರಸ್ಪರ ಲಾಬಿಗೆ ಕೊನೆ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next