Advertisement

ಬೇಡಿಕೆ ಈಡೇರಿಕೆಗೆ ಉಪನ್ಯಾಸಕರ ಪ್ರತಿಭಟನೆ

03:12 PM Nov 29, 2019 | Suhan S |

ಹಾಸನ: ವೇತನ ತಾರತಮ್ಯ ನಿವಾರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಉಪನ್ಯಾಸಕರು ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂಬರುವ ದ್ವಿತೀಯ ಪಿಯು ಪರೀಕ್ಷೆಯ ಮೌಲ್ಯಮಾಪನವನ್ನು ಬಹಿಷ್ಕರಿಸುವುದಾಗಿ ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ಅಧಿಕಾರ ಶಾಹಿಗಳ ಸ್ವಹಿತಾಸಕ್ತಿ: ಈ ಎಲ್ಲಾ ಸಮಸ್ಯೆಗಳ ಸೃಷ್ಟಿಗೆ ಅಧಿಕಾರಶಾಹಿಗಳ ಸ್ವಹಿತಾಸಕ್ತಿಯೇ ಕಾರಣ. ಉಪನ್ಯಾಸಕ ಸಮುದಾಯದಿಂದಲೇ ಬಂದ ಕೆಲ ಅಧಿಕಾರಿಗಳು ಅದೇ ಸಮುದಾಯಕ್ಕೆ ಕಂಟಕವಾಗಿರುವುದು ದುರದೃಷ್ಟಕರ. ಸಮಸ್ಯೆ ಗಳನ್ನು ಬಗೆ ಹರಿಸುವ ಇಚ್ಛಾಶಕ್ತಿ ಇರುವ ಉನ್ನತ ಅಧಿಕಾರಿಗಳ ದಿಕ್ಕು ತಪ್ಪಿಸಿ, ಹೊಸ ಹೊಸ ಸಮಸ್ಯೆ ಗಳನ್ನು ಸೃಷ್ಟಿಸಿ ಉಪನ್ಯಾಸಕರ ಮನೋಸ್ಥೈರ್ಯ ಕುಸಿಯುವಂತೆ ಮಾಡಿದ್ದಾರೆ. ಇದರಿಂದ ಉಪ ನ್ಯಾಸಕರು ವಿದ್ಯಾರ್ಥಿ ಸಮೂಹಕ್ಕೆ ಗುಣಾತ್ಮಕ ಶಿಕ್ಷಣ ವನ್ನು ನೀಡಲು ಅಡ್ಡಿಯಾಗುತ್ತಿದೆ ಎಂದು ಆಪಾದಿಸಿದರು.

ಸಮಸ್ಯೆ ನಿವಾರಿಸಲು ಕಳೆದ ಒಂದು ವರ್ಷದಿಂದ ಹಲವು ಬಾರಿ ಮನವಿ ಸಲ್ಲಿಸಿದರೂ ಶಿಕ್ಷಣ ಸಚಿವರಾಗಲಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಾಗಲಿ ಉಪನ್ಯಾಸಕರ ಸಂಘದ ಜೊತೆಗೆ ಸಭೆ ನಡೆಸಿಲ್ಲ. ಈ ಹಿನ್ನೆಲೆಯಲ್ಲಿ ಸಂಘದ ಕಾರ್ಯಕಾರಿ ಸಮಿತಿಯ ತೀರ್ಮಾನದಂತೆ 2020ರ ದ್ವಿತೀಯಪಿಯುಸಿ ವಾರ್ಷಿಕ ಪರೀಕ್ಷೆಯ ಮೌಲ್ಯಮಾಪನವನ್ನು ಬಹಿಷ್ಕರಿಸಲು ಸಂಘವು ತೀರ್ಮಾನಿಸಿದೆ ಎಂದು ಮನವಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಉನ್ನತ ಮಟ್ಟದ ಸಮಿತಿ ರಚಿಸಿ: ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉಪನ್ಯಾಸಕರ ಕಾರ್ಯಭಾರ ಕುರಿತು ಉನ್ನತ ಮಟ್ಟದ ಪರಿಷತ್ತು ಸಮಿತಿಯನ್ನು ರಚಿಸಬೇಕು. ಅಲ್ಲಿಯವರೆಗೆ ಪ್ರತಿ ಉಪನ್ಯಾಸಕರಿಗೆ ವಾರದಲ್ಲಿ 16 ಗಂಟೆಗಳ ಬೋಧನಾ ಅವಧಿಯನ್ನು ಮುಂದುವರಿಸ ಬೇಕು. ಪದವಿ ಪೂರ್ವ ಕಾಲೇಜುಗಳಲ್ಲಿ ಎನ್‌ಸಿಇಆರ್‌ಟಿ ನಿಯಮಾವಳಿಯಂತೆ ಪ್ರತಿ ತರಗತಿಗೆ ವಿದ್ಯಾರ್ಥಿಗಳ ಗರಿಷ್ಠ ಸಂಖ್ಯೆಯನ್ನು 80ರಿಂದ 40ಕ್ಕೆ ನಿಗದಿಪಡಿಸಿ ಆದೇಶ ಹೊರಡಿಸಬೇಕು ಎಂದೂ ಆಗ್ರಹಿಸಿದ್ದಾರೆ.

Advertisement

ಉಪನ್ಯಾಸಕರಿಗೆ ಬಡ್ತಿ ನೀಡಿ: ಪದವಿ ಪೂರ್ವ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೆಟ್‌, ಸ್ಲೆಟ್‌, ಪಿಎಚ್‌ಡಿ ವಿದ್ಯಾರ್ಹತೆ ಹೊಂದಿರುವ ಉಪನ್ಯಾಸಕರಿಗೆ ಪ್ರಥಮ ದರ್ಜೆ ಕಾಲೇಜುಗಳಿಗೆ ಬಡ್ತಿ ನೀಡಬೇಕು. ರಾಜ್ಯದಲ್ಲಿ ಖಾಲಿ ಇರುವ 600 ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಹುದ್ದೆಗೆ ತುರ್ತಾಗಿ ಪದೋನ್ನತಿ ನೀಡಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪಬ್ಲಿಕ್‌ ಶಾಲೆ ಸಮಸ್ಯೆ ನಿವಾರಿಸಿ: ರಾಜ್ಯದಲ್ಲಿ ಪದವಿ ಪೂರ್ವ ಕಾಲೇಜುಗಳನ್ನು ಕರ್ನಾಟಕ ಪಬ್ಲಿಕ್‌ ಶಾಲೆ ಗಳಾಗಿ ಪರಿವರ್ತಿಸಿರುವುದರಿಂದ ಇಲ್ಲಿ ಪ್ರಾಯೋಗಿಕವಾಗಿ ಮತ್ತು ಆಡಳಿತಾತ್ಮಕವಾಗಿ ಉಂಟಾಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸಬೇಕು. ಉಪನ್ಯಾಸಕರ ಹಾಗೂ ಪ್ರಾಂಶುಪಾಲರ ಕರ್ತವ್ಯಗಳನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು. ಅನುದಾನಿತ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು, ಪ್ರಾಂಶುಪಾಲರಿಗೆ ಪ್ರತಿ ತಿಂಗಳ ಒಂದನೇ ತಾರೀಖೀನಂದು ವೇತನ ನೀಡಲು ಎಚ್‌ ಆರ್‌ಎಂಎಸ್‌ನಲ್ಲಿ ಆಗುತ್ತಿರುವ ತೊಂದರೆ ನಿವಾರಣೆ ಮಾಡಬೇಕು ಎಂದು ಒತ್ತಾಯಿಸಿದರು.

ಅನುದಾನಿತ ಕಾಲೇಜಿನಲ್ಲಿ ಮುಂಬಡ್ತಿ ನೀಡಿ: ಅನು ದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಅನುದಾನಿತ ಉಪನ್ಯಾಸಕರಿದ್ದರೂ ಕೆಲವು ಆಡಳಿತ ಮಂಡಳಿಯವರು ಅನುದಾನರಹಿತ ಉಪನ್ಯಾಸಕರನ್ನು ಪ್ರಾಂಶುಪಾಲರಾಗಿ ನೇಮಕ ಮಾಡಿರುವುದು ನಿಯಮ ಬಾಹಿರವಾಗಿರುವುದರಿಂದ ಕೂಡಲೇ ಅನುದಾನಿತ ಉಪನ್ಯಾಸಕರನ್ನೇ ಪ್ರಾಂಶುಪಾಲರನ್ನಾಗಿ ಮಾಡಿ ಮುಂಬಡ್ತಿ ನೀಡಿ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.

ಅನುದಾನಿತ ಪದವಿ ಪೂರ್ವ ಕಾಲೇಜು ಉಪನ್ಯಾಸಕರಿಗೆ ಎನ್‌.ಪಿ.ಎಸ್‌.ಜಾರಿಗೊಳಿಸುವುದು. ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪದವಿ ಪೂರ್ವಶಿಕ್ಷಣ ಇಲಾಖೆಗೆ ವರ್ಗಾವಣೆಯಾಗಿ ಬಂದಂತಹ ಸಿಬ್ಬಂದಿಗಳನ್ನು ಹಾಗೂ ಪಿ.ಯು. ಇಲಾಖೆಯ ಎಲ್ಲಾ ಸಹಾಯಕ ನಿರ್ದೇಶಕರು ಮತ್ತು ಶಾಖಾಧಿಕಾರಿಗಳನ್ನು ಕೂಡಲೇ ವರ್ಗಾವಣೆ ಮಾಡಿ ಪದವಿ

ಪೂರ್ವ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅನುಭವಿ ಸಿಬ್ಬಂದಿಗಳನ್ನು ನೇಮಕ ಮಾಡಬೇಕು. ಪರೀಕ್ಷೆ ಸಂಭಾವನೆಯನ್ನು ಶೇ.30 ಪರಿಷ್ಕರಿಸಬೇಕು. ಉಪ ನ್ಯಾಸಕರ ವರ್ಗಾವಣೆಯಲ್ಲಿ ಆದ್ಯತಾ ಅಂಶಗಳನ್ನು ಮರುಪರಿಶೀಲಿಸಿ, ಸಾಮಾನ್ಯ ಜೇಷ್ಠತೆಯ ಮೇಲೆ ಪಾರದರ್ಶಕ ವರ್ಗಾವಣಾ ನೀತಿಯನ್ನು ರೂಪಿಸಬೇಕು ಎಂದು ಪ್ರತಿಭಟನಾಕಾರರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಪ್ರತಿಭಟನೆಯಲ್ಲಿ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಎಚ್‌.ಟಿ. ಸುರೇಶ್‌, ಪದಾಧಿಕಾರಿಗಳಾದ ಕಂಬೇಗೌಡ, ಹೊನ್ನವಳ್ಳಿ ವೆಂಕಟೇಶ್‌, ಡಿ.ವಿ.ಸುರೇಶ್‌, ಸ್ವಾಮಿನಾಥ್‌ ಸೇರಿದಂತೆ ನೂರಾರು ಮಂದಿ ಉಪನ್ಯಾಸಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next