Advertisement
“ನಾನು ಬಸುರಿಯಾಗಿದ್ದಾಗ ಅತ್ತೆ, “ಕೆಲಸ ಚೆನ್ನಾಗಿ ಮಾಡು, ಆವಾಗ ಹೆರಿಗೆ ಆರಾಮ’ ಅಂತ ಕೆಲಸ ಮಾಡಿಸಿದ್ದೇ ಮಾಡಿಸಿದ್ದು. ಅದೇ ನನ್ನ ಓರಗಿತ್ತಿಗೆ ಇವರೆಲ್ಲಾ ಸೇರಿ “ರೆಸ್ಟು ತಗೋ. ಆಯಾಸ ಮಾಡ್ಕೊàಬೇಡ’ ಅಂತ ಸೇವೆ ಮಾಡಿದ್ದೇ ಮಾಡಿದ್ದು! ನಮ್ಮೆಜಮಾನ್ರು ನನಗೆ “ಹೊಂದಿಕೋಬೇಕು’ ಅಂತ ಬುದ್ಧಿ ಹೇಳ್ತಿದ್ದವರು, ಈಗ ತಮ್ಮನ ಜೊತೆ ಟೊಂಕ ಕಟ್ಟಿ ಅವನ ಹೆಂಡತಿ ಸೇವೆಗೆ ಸಿದ್ಧ! ನನ್ನನ್ನು ಎಲ್ಲಾ ವಿಷಯಗಳಲ್ಲಿ ಮೂದಲಿಸುತ್ತಿದ್ದವರು ಬೇರೆಯವರಿಗಾದರೆ “ಹೀಗೆ ಮಾಡಿ, ಹಾಗೆ ಮಾಡಿ’ ಅಂತ ಹೇಳಿಕೊಡ್ತಾರೆ. ಯಾಕಪ್ಪಾ ಹೀಗೆ?
Related Articles
“ನಮ್ಮ ಮನೆಯವರದ್ದು ತುಂಬಾ ಸಂಕೋಚದ ಸ್ವಭಾವ. ಒಂದು ದಿನಾನೂ ಯಾವ ವಿಷಯದಲ್ಲೂ ಸಹಾಯ ಮಾಡಿದವರಲ್ಲ. ಮೊನ್ನೆ ಬೆಳಗ್ಗಿನ ಜಾವ 5 ಗಂಟೆಗೆ ಮಗು ಮತ್ತು ಬ್ಯಾಗು ಎರಡನ್ನೂ ಹೊತ್ತುಕೊಂಡು ಪ್ರಯಾಸದಿಂದ ಬಸ್ಸಿಂದ ಇಳಿಯಬೇಕಾದರೆ, “ಒಂದು ಡಯಾಪರ್ ಕೊಡೆ’ ಎಂದು ಹಿಂದಿಂದ ಓಡಿ ಬಂದರು! ನನಗೋ ಆಶ್ವರ್ಯ! ಅವರಿಗೆ ಇಷ್ಟೊಳ್ಳೆ ಬುದ್ಧಿ ಎಲ್ಲಿಂದ ಬಂತು ಅಂತ! ಆಮೇಲೆ ಗೊತ್ತಾಯ್ತು. ಆ ಡಯಾಪರ್ ಕೇಳಿದ್ದು ನಮ್ಮ ಮಗುವಿಗೆ ಹಾಕೋದಿಕ್ಕಲ್ಲ. ಬಸ್ಸಿನಲ್ಲಿ ನಮ್ಮ ಮುಂದೆ ಕೂತಿದ್ದ ಹೆಂಗಸಿನ ಮಗೂಗೆ ಅರ್ಜೆಂಟಾಗಿ ಡಯಾಪರ್ ಬೇಕಿತ್ತಂತೆ. ಆ ಹೆಂಗಸು ಈ “ಸಂಕೋಚ’ದ ಮನುಷ್ಯನನ್ನ ಕೇಳಿದಾಕ್ಷಣ ಇವರಿಗೆ ಅನುಕಂಪ ಉಕ್ಕಿದೆ. ಅದಕ್ಕೇ ನನ್ನನ್ನು ಅರ್ಜೆಂಟಾಗಿ ಡಯಾಪರ್ ಕೇಳಿದ್ದು!’ ಈ ಘಟನೆಯನ್ನು ಗೀತಾ ಕನಿಷ್ಠವೆಂದರೂ 10 ಬಾರಿ ಮೆಲುಕು ಹಾಕಿದ್ದಾಳೆ! ಪ್ರತೀ ಬಾರಿ ನೆನಪಿಸಿಕೊಂಡಾಗಲೂ ಅವಳು ವ್ಯಥೆಪಟ್ಟಿದ್ದಾಳೆ.
Advertisement
ಇಲ್ಲಿ ಹಲವು ಸಂಗತಿಗಳು ಗಮನಾರ್ಹ…1. “ಮೆಲುಕು ಹಾಕುವ’ ಗೀಳಿನ ಸೃಷ್ಟಿಗೆ ಸಮಾಜವೂ ಸೇರಿದಂತೆ ಕುಟುಂಬದ ಎಲ್ಲರೂ ಕಾರಣಕರ್ತರಾಗುತ್ತಾರೆ. 2. ತಮ್ಮ ಕುರಿತು ತಾವೇ ಅನುಕಂಪ ವ್ಯಕ್ತಪಡಿಸುವ ಸ್ವಭಾವವನ್ನು ಮಹಿಳೆಯರು ಕಡಿಮೆ ಮಾಡಬೇಕು. ಇತರರು ತಮ್ಮ ಬಗ್ಗೆ ಅನುಕಂಪ ತೋರಿಸಬೇಕು ಎಂದು ಅಪೇಕ್ಷಿಸುವುದೂ ರುಮಿನೇಷನ್‌ನ ಒಂದು ಭಾಗ. ಈ ಮನಃಸ್ಥಿತಿಯಿಂದ ಕೀಳರಿಮೆ ಜೊತೆಯಾಗುತ್ತದೆ. ತಮ್ಮ ದುರದೃಷ್ಟವನ್ನು ಹಳಿದುಕೊಂಡು ಪರಿತಪಿಸುವುದು ಇನ್ನಷ್ಟು ನೋವನ್ನು ತರಬಲ್ಲದೇ ಹೊರತು, ಸುತ್ತಮುತ್ತಲಿನವರ ನಡವಳಿಕೆಯನ್ನು ಬದಲಾಯಿಸುವುದಿಲ್ಲ ಎಂಬ ಸತ್ಯವನ್ನು ಅರಿಯಬೇಕು. 3. “ತಾನು ಪಟ್ಟ ಪಾಡುಗಳನ್ನು ಇತರರೂ ಪಡಲಿ’ ಎಂಬ ಮನೋಭಾವವೂ ಇಂಥ ಸಮಯದಲ್ಲಿ ಬರುವುದು ಸಹಜ. ಅದನ್ನು ಮೀರಲು ಇರುವ ಒಳ್ಳೆಯ ಮಾರ್ಗವೆಂದರೆ, “ತನ್ನ ಹಿಂದಿನವರು ಅನುಭವಿಸಿದ ಕಷ್ಟಗಳು ತನಗಿರಲಿಲ್ಲ’ ಎಂದು ಯೋಚಿಸುವುದು. 4. ಇನ್ನು ಚುಚ್ಚುಮಾತುಗಳನ್ನು ಕೇಳಬೇಕಾಗಿ ಬಂದಾಗ ಆ ಸಂದರ್ಭಕ್ಕೆ ತಯಾರಾಗಿರಬೇಕು. ನಮ್ಮ ಪ್ರತಿಕ್ರಿಯೆ ಒಂದೋ ಆ ಚುಚ್ಚುಮಾತನ್ನು ನೇರವಾಗಿ ಎದುರಿಸಿ “ಇಂಥ ಮಾತಾಡಬೇಡಿ. ನನಗೆ ಇಷ್ಟವಾಗುವುದಿಲ್ಲ’ ಎಂದು ಹೇಳುವುದು, ಇಲ್ಲವೇ ಅವನ್ನು ನಿರ್ಲಕ್ಷಿಸುವುದು. 5. “ನಿನ್ನೆ ನಿನ್ನೆಗೆ, ಇಂದು ಇಂದಿಗೆ, ಇರಲಿ ನಾಳೆಯು ನಾಳೆಗೆ’ ಎಂಬ ಕವಿವಾಣಿ ವೈಜ್ಞಾನಿಕವಾಗಿಯೂ ಸತ್ಯವೇ. ಹಾಗಾಗಿ ನೋವಿನ ಸಂಗತಿಗಳನ್ನು ಮತ್ತೆ ಮತ್ತೆ ಮೆಲುಕು ಹಾಕದೇ ಆರೋಗ್ಯ- ನೆಮ್ಮದಿ ನಮ್ಮದಾಗಿಸಿಕೊಳ್ಳೋಣ. “ಭೂತ’ದೊಂದಿಗೆ ಬದುಕಿ “ಭೂತ ‘ವಾಗದಿರೋಣ! – ಡಾ. ಕೆ. ಎಸ್. ಪವಿತ್ರಾ