ಬೆಂಗಳೂರು: ಬರೀ ಕಲೆಕ್ಷನ್ ಮಾಡುವುದನ್ನು ಬಿಟ್ಟು ಗೃಹ ಸಚಿವ ಡಾ| ಜಿ. ಪರಮೇಶ್ವರ್ ಅವರು ನನ್ನ ಬಗ್ಗೆ ಕೋರ್ಟ್ ಏನು ತೀರ್ಪು ನೀಡಿದೆ ಎಂಬುದನ್ನು ಓದಲಿ ಎಂದು ಬಿಜೆಪಿಯ ಹಿರಿಯ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ತಿರುಗೇಟು ನೀಡಿದರು.
ಕೋರ್ಟ್ ಆದೇಶಿಸಿದರೆ ಬಸನಗೌಡ ಯತ್ನಾಳ್ ಅವರನ್ನು ಬಂಧಿಸಲಾಗುವುದು ಎಂಬ ಗೃಹ ಸಚಿವ ಪರಮೇಶ್ವರ್ ಹೇಳಿಕೆಗೆ ಶುಕ್ರವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು. ಈಗಾಗಲೇ ಹೈಕೋರ್ಟ್‌ನಲ್ಲಿ ನನ್ನ ಪ್ರಕರಣ ರದ್ದಾಗಿದೆ. ಈ ಬಗ್ಗೆ ಪರಮೇಶ್ವರ್ ಕಣ್ಣುಬಿrಟು ಓದಲಿ ಎಂದರು. ಪೊಲೀಸರು ಅವರ ಮೇಲಿರುವ ಹಗರಣಗಳ ಬಗ್ಗೆ ನಿಷ್ಪಕ್ಷ ತನಿಖೆ ನಡೆಸಿದರೆ ಅವರು ನನಗಿಂತಲೂ ಮೊದಲೇ ಬಂಧನಕ್ಕೊಳಗಾಗಲಿದ್ದಾರೆ ಎಂದು ಕುಟುಕಿದರು.
ಪಂಚಮಸಾಲಿ ಲಿಂಗಾಯತ ಸಮುದಾಯದಕ್ಕೆ 2ಎ ಮೀಸಲಾತಿ ವಿಚಾರದಲ್ಲಿ ಹಲವು ವರ್ಷಗಳಿಂದ ಹೋರಾಟ ನಡೆದಿದೆ. ಆದರೆ ಈ ಬಗ್ಗೆ ಸಮುದಾಯದ ಶ್ರೀಗಳು ಮಾತನಾಡುತ್ತಾರೆ. ನಾನು ಮಾತನಾಡುವುದಿಲ್ಲ ಎಂದು ಸ್ಪಷ್ಪಡಿಸಿದರು.
ಯಾವುದೇ ಕಾರಣಕ್ಕೂ ಸರಕಾರ ಕಾಂತರಾಜ ಆಯೋಗದ ವರದಿಯನ್ನು ಜಾರಿ ಮಾಡಬಾರದು. ಸರಿಯಾದ ರೀತಿಯಲ್ಲಿ ಕಾಂತ ರಾಜ ಆಯೋಗ ವರದಿಯನ್ನು ಸಿದ್ಧಪಡಿಸಿಲ್ಲ. ಸರಕಾರ ಹೊಸದಾಗಿ ಜನಗಣತಿ ಮಾಡಬೇಕು ಎಂಬುದು ನಮ್ಮ ಸಮುದಾಯದ ಆಗ್ರಹವಾಗಿದೆ ಎಂದರು.